ನವದೆಹಲಿ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರಕ್ಕೆ 370ನೇ ವಿಧಿಯನ್ನು ಮತ್ತು 35ಎ ಪರಿಚ್ಛೇದದಲ್ಲಿರುವ ವಿಶೇಷ ಸ್ಥಾನಮಾನ ರದ್ದತಿಗೆ ರಾಜ್ಯಸಭೆ ಸೋಮವಾರ ಅಂಗೀಕಾರ ನೀಡಿದ ಬೆನ್ನಲ್ಲೇ ಇಂದು ಲೋಕಸಭೆಯೂ ಸಹ ಜಮ್ಮು ಕಾಶ್ಮೀರ ಪುನಾರಚನೆ ವಿಧೇಯಕವನ್ನು ಅಂಗೀಕರಿಸಿದೆ.
ಗೃಹ ಸಚಿವ ಅಮಿತ್ ಶಾ ಅವರು ಇಂದು ಬೆಳಿಗ್ಗೆ ಲೋಕಸಭೆಯಲ್ಲಿ ಈ ವಿಧೇಯಕವನ್ನು ಮಂಡಿಸಿದರು. ಇದರ ಮೇಲೆ ದಿನಪೂರ್ತಿ ವಿಸ್ತೃತವಾದ ಚರ್ಚೆ ಲೋಕಸಭೆಯಲ್ಲಿ ನಡೆಯಿತು. ಕೊನೆಯಲ್ಲಿ ಮಸೂದೆಯನ್ನು ಮತಕ್ಕೆ ಹಾಕಿದಾಗ ಮಸೂದೆಯ ಪರವಾಗಿ 370 ಮತಗಳು ಬಿದ್ದವು ಮತ್ತು ವಿರುದ್ಧವಾಗಿ 70 ಮತಗಳು ಬಿದ್ದವು.
ಸಂಸತ್ತಿನ ಎರಡೂ ಸದನಗಳಲ್ಲಿ ಈ ಮಸೂದೆ ಅಂಗೀಕಾರವಾಗುವುದರೊಂದಿಗೆ ಕಳೆದ ಏಳು ದಶಕಗಳಿಂದ ಜಮ್ಮು-ಕಾಶ್ಮೀರಕ್ಕಿದ್ದ ವಿಶೇಷ ರಾಜ್ಯದ ಸ್ಥಾನಮಾನ ಇದೀಗ ಅಧಿಕೃತವಾಗಿ ರದ್ದುಗೊಂಡಂತಾಗಿದೆ. ಮತ್ತು ಇನ್ನು ಜಮ್ಮು-ಕಾಶ್ಮೀರ ಹಾಗೂ ಲಢಾಕ್ ಭಾರತದ ಎರಡು ನೂತನ ಕೇಂದ್ರಾಡಳಿತ ಪ್ರದೇಶಗಳಾಗಿ ಅಸ್ತಿತ್ವಕ್ಕೆ ಬರಲಿವೆ.