ನವದೆಹಲಿ: ವಿಪಕ್ಷಗಳ ತೀವ್ರ ಕೋಲಾಹಲ, ಗದ್ದಲದ ನಡುವೆಯೇ ಸಂಸತ್ತಿನ ಚಳಿಗಾಲದ ಅಧಿವೇಶನದ ಆರಂಭದ ಮೊದಲ ದಿನವಾದ ಸೋಮವಾರ (ನವೆಂಬರ್ 29) ಮೂರು ಕೃಷಿ ಕಾಯ್ದೆಯನ್ನು ರದ್ದು ಮಾಡುವ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. ಈ ಮಸೂದೆ ಧ್ವನಿ ಮತದ ಮೂಲಕ ಅಂಗೀಕಾರಗೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಮತ್ತೆ ಲಾಕ್ ಡೌನ್ ಮಾಡುವ ಯಾವುದೇ ಚಿಂತೆನೆ ಇಲ್ಲ: ಸಚಿವ ಕೆ.ಸುಧಾಕರ್
ವಿಪಕ್ಷಗಳ ಪ್ರತಿಭಟನೆ, ಗದ್ದಲದ ನಡುವೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಲೋಕಸಭೆಯಲ್ಲಿ ಕೃಷಿ ಕಾಯ್ದೆ ರದ್ದು ಮಸೂದೆ 2021 ಅನ್ನು ಮಂಡಿಸಿದ್ದರು.
ವಿರೋಧ ಪಕ್ಷದ ಸಂಸದರು ಲೋಕಸಭೆಯ ಬಾವಿ ಸಮೀಪ ತೆರಳಿ ಕೃಷಿ ಕಾಯ್ದೆ ರದ್ದು ಮಸೂದೆ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಆದರೆ ವಿಪಕ್ಷಗಳು ಗದ್ದಲ ನಡೆಸದೇ ಇದ್ದರೆ ಮಾತ್ರ ಚರ್ಚೆ ನಡೆಸಲು ಅವಕಾಶ ನೀಡುವುದಾಗಿ ಲೋಕಸಭಾ ಸ್ಪೀಕರ್ ಓಂಪ್ರಕಾಶ್ ಬಿರ್ಲಾ ಹೇಳಿದರು.
ಮಸೂದೆ ಮಂಡನೆಯಾದ ಬಳಿಕ ವಿಪಕ್ಷ ಸದಸ್ಯರ ಪ್ರತಿಭಟನೆ, ಕೋಲಾಹಲ ಹೆಚ್ಚಳವಾದ ಪರಿಣಾಮ ಸ್ಪೀಕರ್ ಬಿರ್ಲಾ ಅವರು ಲೋಕಸಭೆಯ ಕಲಾಪವನ್ನು ಮಧ್ಯಾಹ್ನ 2ಗಂಟೆಗೆ ಮುಂದೂಡಿದರು. ಸರ್ಕಾರ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡಲು ಸಿದ್ಧವಿದೆ. ಆದರೆ ಪ್ರತಿಪಕ್ಷಗಳು ಇದಕ್ಕೆ ಸಹಕರಿಸಬೇಕು ಎಂದು ಇಂದು ಸಂಸತ್ ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಿ ನರೇಮದ್ರ ಮೋದಿ ಅವರು ತಿಳಿಸಿದ್ದರು.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ರೈತರ ಸಂಘಟನೆಗಳು ಕಳೆದ ಒಂದು ವರ್ಷದಿಂದ ದೆಹಲಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿವೆ. ಅಲ್ಲದೇ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವ ಕುರಿತು ಕಾಯ್ದೆ ಜಾರಿಗೆ ತರಬೇಕೆಂದು ಹಲವಾರು ರೈತ ಸಂಘಟನೆಗಳು ಒತ್ತಾಯಿಸಿವೆ.
ಇತ್ತೀಚೆಗೆ ಗುರುನಾನಕ್ ಜಯಂತಿಯಂದು ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವುದಾಗಿ ಘೋಷಿಸಿದ್ದರು.