Advertisement

ಲೋಕಸಭೆ, ಪರಿಷತ್‌, ರಾಜ್ಯಸಭಾ ಚುನಾವಣೆ ಶಾ ನೇತೃತ್ವದಲ್ಲಿ BJP ಕೋರ್‌ ಕಮಿಟಿ ಸಭೆ

11:32 PM Feb 11, 2024 | Pranav MS |

ಮೈಸೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆಲ್ಲುವುದು ಸೇರಿದಂತೆ ವಿಧಾನ ಪರಿಷತ್‌, ರಾಜ್ಯಸಭಾ ಚುನಾವಣೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯ ಕೋರ್‌ ಕಮಿಟಿ ಸಭೆ ನಡೆಸಿದರು.

Advertisement

ನಗರದ ಖಾಸಗಿ ಹೊಟೇಲ್‌ನಲ್ಲಿ ರವಿವಾರ ಬಿಜೆಪಿ ಕೋರ್‌ ಕಮಿಟಿ ಸದಸ್ಯರಾದ ಬಸವರಾಜ ಬೊಮ್ಮಾಯಿ, ಕೆ.ಎಸ್‌. ಈಶ್ವರಪ್ಪ. ಬಿ.ವೈ. ವಿಜಯೇಂದ್ರ, ಸಿ.ಟಿ. ರವಿ, ಶ್ರೀರಾಮುಲು, ರಾಜ್ಯ ಸಂಘಟನ ಪ್ರ.ಕಾರ್ಯದರ್ಶಿ ರಾಜೇಶ್‌ ಅವರೊಂದಿಗೆ ಚರ್ಚಿಸಿ, ಸಲಹೆ ಸೂಚನೆಗಳನ್ನು ಅಮಿತ್‌ ಶಾ ನೀಡಿದರು.

ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಮುಂಚಿತವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪ್ರಕಟ ಮಾಡುವುದರ ಬಗ್ಗೆ ವಿಜಯೇಂದ್ರ ಗೃಹ ಸಚಿವರಲ್ಲಿ ಪ್ರಸ್ತಾವ ಮಾಡಿದರು. ಇದೇ ವೇಳೆ ರಾಜ್ಯಸಭಾ ಮತ್ತು ವಿಧಾನ ಪರಿಷತ್‌ ಸದಸ್ಯ ಸ್ಥಾನಗಳಿಗೂ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಸಲಹೆ ಪಡೆದುಕೊಂಡಿದ್ಧಾರೆ. ರಾಜ್ಯಸಭೆಯಲ್ಲಿ ಬಿಜೆಪಿ ಎರಡು ಸ್ಥಾನ ಪಡೆಯಬಹುದಾಗಿದ್ದರೆ, ವಿಧಾನ ಪರಿಷತ್‌ ಸದಸ್ಯ ಸ್ಥಾನಗಳಿಗೆ ಮೂವರನ್ನು ಆಯ್ಕೆ ಮಾಡಲು ಅವಕಾಶವಿದೆ. ಮುಂದಿನ ದಿನಗಳಲ್ಲಿ ಮತ್ತೂಂದು ಸಭೆ ನಡೆಸಿ ಅಂತಿಮಗೊಳಿಸುವಂತೆ ಶಾ ಸೂಚನೆ ನೀಡಿದ್ಧಾರೆ ಎಂದು ಹೇಳಲಾಗಿದೆ.

ಕ್ಲಸ್ಟರ್‌ ಮಟ್ಟದ ಸಭೆ
ಇದಾದ ಬಳಿಕ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಲೋಕ ಸಭಾ ಕ್ಷೇತ್ರ ದ ಕ್ಲಸ್ಟರ್‌ ಮಟ್ಟದ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡು ಸಮಾಲೋಚನೆ ನಡೆಸಿದರು. ಈ ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ರಾಜೀವ್‌ ಕುಡಚಿ, ಶಾಸಕ ಟಿ.ಎಸ್‌. ಶ್ರೀವತ್ಸ ಸೇರಿ ಹಲವರು ಪಾಲ್ಗೊಂಡಿದ್ದರು.

ಪ್ರಮುಖರೊಂದಿಗೆ ಶಾ ಅವಲೋಕನ
ಸುತ್ತೂರು ಜಾತ್ರಾ ಮಹೋತ್ಸವ ಮುಗಿಸಿ ನಗರದ ಹೋಟೆಲ್‌ಗೆ ಆಗಮಿಸಿದ್ದ ಅಮಿತ್‌ ಶಾ, ಮುಂದಿನ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಮುಖಂಡರು, ರಾಜ್ಯ ಕಾರ್ಯಕಾರಿಣಿ ಪ್ರಮುಖರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಿ ಗೆಲುವಿನ ಕಾರ್ಯತಂತ್ರ, ಕ್ಷೇತ್ರಗಳ ಸದ್ಯದ ಪರಿಸ್ಥಿತಿ ಕುರಿತು ಅವಲೋಕನ ನಡೆಸಿದರೆನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next