Advertisement

Lok Sabha Elections: ಬಿಜೆಪಿಯಿಂದ ವಿಸ್ತಾರಕರ ನಿಯೋಜನೆ

09:14 PM Jun 18, 2023 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಬಳಿಕ ಎಚ್ಚೆತ್ತುಕೊಳ್ಳುತ್ತಿರುವ ಬಿಜೆಪಿ ಈಗ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಿಧಾನವಾಗಿ ಸಿದ್ಧತಾ ಪ್ರಕ್ರಿಯೆ ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರ 280 ವಿಸ್ತಾರಕರನ್ನು ಬಿಜೆಪಿ ನಿಯೋಜಿಸಿದ್ದು, ಮತ್ತೆ ತಳಹಂತದಿಂದ ಸಂಘಟನೆ ಬೆಳೆಸಲು ಮುಂದಾಗಿದೆ.

Advertisement

ಮುಂದಿನ ಒಂದು ವರ್ಷಗಳ ಕಾಲ ವಿಸ್ತಾರಕರು ಪ್ರತಿ ಲೋಕಸಭಾ ವ್ಯಾಪ್ತಿಯಲ್ಲಿ ಕೇಂದ್ರದ ನರೇಂದ್ರ ಮೋದಿ ಸರಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸುವ ಜತೆಗೆ ತಳಹಂತದಲ್ಲಿ ಪಕ್ಷ ಸಂಘಟನೆ ಮಾಡಲಿದ್ದಾರೆ. ವ್ಯಾಪ್ತಿಯನ್ನು ಆಧರಿಸಿ ಪ್ರತಿ ಕ್ಷೇತ್ರಕ್ಕೆ 8ರಿಂದ 10 ವಿಸ್ತಾರಕರನ್ನು ನಿಯೋಜಿಸಲಾಗಿದ್ದು, ಒಟ್ಟು 280 ವಿಸ್ತಾರಕರು ಮುಂದಿನ ಲೋಕಸಭಾ ಚುನಾವಣೆ ಮುಗಿಯುವವರೆಗೂ ಕ್ಷೇತ್ರದಲ್ಲಿ ಕೆಲಸ ಮಾಡಲಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಮುಂಚಿತವಾಗಿಯೇ ವಿಸ್ತಾರಕರು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರವಾಗಿ ಜನರು ಇನ್ನೂ ಒಲವು ಹೊಂದಿದ್ದಾರೆ. ಆದರೆ ರಾಜ್ಯ ಬಿಜೆಪಿ ಸರಕಾರದ ಪರ ಆಡಳಿತ ವಿರೋಧಿ ಅಲೆ ಇದೆ ಎಂದು ಇದೇ ವಿಸ್ತಾರಕರ ತಂಡ ವರಿಷ್ಠರಿಗೆ ವರದಿ ನೀಡಿತ್ತು. ಆದರೆ ಈ ವರದಿಯನ್ನು ರಾಜ್ಯ ಹಾಗೂ ಕೇಂದ್ರ ನಾಯಕತ್ವ ಗಂಭೀರವಾಗಿ ಪರಿಗಣಿಸದೆ ತಪ್ಪು ಮಾಡಿತ್ತು. ಈಗ ಲೋಕಸಭಾ ಚುನಾವಣ ತಯಾರಿಗೆ ವಿಸ್ತಾರಕರು ಇಳಿದಿದ್ದಾರೆ.

ಜತೆಗೆ ಸೋಲಿನ ಪರಾಮರ್ಶೆ ಸಭೆಗಳು ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಪ್ರಾರಂಭವಾಗಿದೆ. ಸೋಲಿನ ಹೊಡೆತಕ್ಕೆ ಕುಗ್ಗದೇ ಲೋಕಸಭಾ ಚುನಾವಣೆ ಎದುರಿಸುವುದಕ್ಕೆ ಬಿಜೆಪಿ ಸಿದ್ಧತೆ ಪ್ರಾರಂಭಿಸಿದೆ.

ಪ್ರಮುಖರ ಸಭೆ
ರಾಜ್ಯ ಸರಕಾರದ 5 ಗ್ಯಾರಂಟಿ ಯೋಜನೆಗಳ ವೈಫ‌ಲ್ಯ ಹಾಗೂ ಅಕ್ಕಿ ವಿಚಾರದಲ್ಲಿ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವುದನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನ 3.30ಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ನೇತೃತ್ವದಲ್ಲಿ ಪ್ರತಿಭಟನಾ ಸ್ವರೂಪ ನಿರ್ಧರಿಸಲು ಪಕ್ಷದ ಕಚೇರಿಯಲ್ಲಿ ಸಭೆ ಕರೆಯಲಾಗಿದೆ.

Advertisement

29ರೊಳಗೆ ನಿರ್ಧಾರ
ಬಿಜೆಪಿ ಮೂಲಗಳ ಪ್ರಕಾರ ವಿಪಕ್ಷ ನಾಯಕ ಯಾರೆಂಬುದನ್ನು ಇದೇ ತಿಂಗಳು 29ರೊಳಗಾಗಿ ಇತ್ಯರ್ಥಗೊಳಿಸಲು ನಿರ್ಧರಿಸಲಾಗಿದೆ. ಅಧಿವೇಶನ ಪೂರ್ಣಗೊಳ್ಳುವುದಕ್ಕೆ ಮುನ್ನ ಈ ಮಹತ್ವದ ವಿಚಾರಕ್ಕೆ ತಾರ್ಕಿಕ ಅಂತ್ಯ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next