Advertisement
ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಂಗಳವಾರ ರಾಜ್ಯ ಬಿಜೆಪಿ ಆಯೋಜಿಸಿದ್ದ ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರೇ ನಮ್ಮ ಪ್ರಧಾನಿ ಅಭ್ಯರ್ಥಿ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಕಾಂಗ್ರೆಸ್ಸಿನ ಪ್ರಧಾನಿ ಅಭ್ಯರ್ಥಿ ಯಾರು? ಯಾವನದ್ದಾದರೂ ಹೆಸರು ಹೇಳುತ್ತಾರಾ ಎಂದು ಏಕವಚನದಲ್ಲೇ ಗುಡುಗಿದರು.
ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ ಅವರು ಒಂದು ದಿನವೂ ವಿಶ್ರಾಂತಿ ಪಡೆಯದೆ ದೇಶದ ಉದ್ದಗಲಕ್ಕೂ ಹೋಗಿ ಪ್ರಚಾರ ಮಾಡುತ್ತಿದ್ದಾರೆ. ನನಗೀಗ 81 ವರ್ಷ ಮುಗಿದು 82 ವರ್ಷವಾಗಿದೆ. ಮನೆಯಲ್ಲಿ ಕೂರುವ ಪ್ರಶ್ನೆಯೂ ಇಲ್ಲ. ಬಿಜೆಪಿ ಗೆಲ್ಲುವವರೆಗೂ ನಾವ್ಯಾರೂ ಮನೆ ಸೇರುವುದೂ ಇಲ್ಲ. ಅಭ್ಯರ್ಥಿ ಯಾರೇ ಇರಲಿ, ಎನ್‌ಡಿಎ ಗೆಲ್ಲಿಸುತ್ತೇವೆ ಎನ್ನುವ ಭರವಸೆ ಕೊಡೋಣ. ನಾನು ನಮ್ಮೆಲ್ಲರ ಮುಖಂಡರ ಜತೆ ಪ್ರವಾಸ ಮಾಡುತ್ತೇನೆ. ಬನ್ನಿ ಹೋಗೋಣ ಪ್ರತಿ ಮೊಹಲ್ಲಾಗೆ. ರಾಜ್ಯದಲ್ಲಿ ತುಘಲಕ್ ದರ್ಬಾರ್ ಸರಕಾರ ತೊಲಗಿಸೋಣ ಎಂದು ಕರೆ ನೀಡಿದರು.
Related Articles
Advertisement
ಸ್ವಾತಂತ್ರ್ಯದ ಅಮೃತಕಾಲದಲ್ಲಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರ ಆಗಬೇಕೆಂದು ಪ್ರಧಾನಿ ಮೋದಿ ವಿರಮಿಸದೆ ಶ್ರಮಿಸುತ್ತಿದ್ದಾರೆ. ಯಾವುದೇ ಭ್ರಷ್ಟಾಚಾರದ ಆರೋಪ ಇಲ್ಲದೆ ಪ್ರಧಾನಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಯುಪಿಎ ಸರಕಾರ ಭ್ರಷ್ಟಾಚಾರವನ್ನೇ ದೇಶಕ್ಕೆ ಕೊಡುಗೆಯಾಗಿ ಕೊಟ್ಟಿತ್ತು. ಎನ್‌ಡಿಎ ಸರಕಾರ ಕಟ್ಟಕಡೆಯ ವ್ಯಕ್ತಿಗೂ ಅಭಿವೃದ್ಧಿಯ ಫಲವನ್ನು ಕೊಡುಗೆಯಾಗಿ ಕೊಡುತ್ತಿದೆ. ರಾಜ್ಯದಲ್ಲಿ ಭರವಸೆ ಇಟ್ಟು ಅಧಿಕಾರಕ್ಕೆ ತಂದ ಕಾಂಗ್ರೆಸ್ ಸರಕಾರಕ್ಕೆ ಜನ ಶಾಪ ಹಾಕುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಒಂದೇ ವೇದಿಕೆಗೆ ಬಂದ ಬಳಿಕ ಕಾಂಗ್ರೆಸ್ ತತ್ತರಿಸಿದೆ.– ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ 10 ತಿಂಗಳಲ್ಲಿ 10 ಭ್ರಷ್ಟಾಚಾರ ಮಾಡಿದೆ. ಏಕೋ ಏನೋ ಸಿದ್ದರಾಮಯ್ಯರಿಗೂ ಬರಗಾಲಕ್ಕೂ ನಂಟಿದೆ. ಯಡಿಯೂರಪ್ಪ ಅವರಿದ್ದಾಗ ಮಳೆ ಬಂದರೆ, ಸಿದ್ದರಾಮಯ್ಯ ಬಂದ ಕೂಡಲೇ ಬರ ಬರುತ್ತದೆ. ಯಾಕಾದರೂ ಕಾಂಗ್ರೆಸ್‌ಗೆ ಮತ ಹಾಕಿದೆವೋ ಎಂದು ಮತದಾರರಿಗೆ ಅನ್ನಿಸಿದೆ. ನೀರಿಗೆ ಹಾಹಾಕಾರ ಇದೆ. ಟ್ಯಾಂಕರ್ ನೀರಿನ ದರ ಹೆಚ್ಚಾಗಿದೆ. ಜನ ಬೆಂಗಳೂರು ಬಿಟ್ಟು ಹೋಗುತ್ತಿದ್ದಾರೆ. ಗ್ಯಾರಂಟಿ ಬದಿಗೊತ್ತಿ, 33 ದಿನ ರಜೆ ಪಡೆಯದೆ ಕೆಲಸ ಮಾಡೋಣ, ಮೋದಿಗೆ ಮತ ಹಾಕಿಸೋಣ.
– ಆರ್. ಅಶೋಕ್, ವಿಧಾನಸಭೆ ವಿಪಕ್ಷ ನಾಯಕ ಯುಪಿಎ ಸರಕಾರ ಮಾಡಿದ ಅನಾಹುತ, ತಪ್ಪುಗಳ ಹೊಂಡ ತುಂಬಲು 10 ವರ್ಷ ಬೇಕು. ಅನಂತರದ 10 ವರ್ಷ ಅಭಿವೃದ್ಧಿಗೆ ಬೇಕು ಎಂದು ಮೋದಿ ಹೇಳಿದ್ದರು. ಮೊದಲ 10 ವರ್ಷದಲ್ಲೇ ಅಭಿವೃದ್ಧಿ, ಸುರಕ್ಷತೆಗೆ ಆದ್ಯತೆ ಕೊಟ್ಟರು. ಮೂರನೇ ಬಾರಿ ಗೆದ್ದು ಅಭಿವೃದ್ಧಿಗೆ ವೇಗ ಕೊಡಬೇಕು, ದೇಶದ ರಕ್ಷಣೆಗೆ ವ್ಯವಸ್ಥೆ ರೂಪಿಸಿ ಜನರ ಬದುಕು ಹಸನುಗೊಳಿಸಲು ಯೋಜನೆ ರೂಪಿಸುತ್ತಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೂ ಮೋದಿ ಆಡಳಿತವನ್ನು ಒಪ್ಪಿ ಬೆಂಬಲಿಸಿದ್ದಾರೆ. ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಿದರೆ ಗೆಲುವು ನಿಶ್ಚಿತ.
– ಶೋಭಾ ಕರಂದ್ಲಾಜೆ, ಬೆಂಗಳೂರು ಉತ್ತರ ಅಭ್ಯರ್ಥಿ