Advertisement

Lok Sabha Polls: 3 ಕ್ಷೇತ್ರಗಳಲ್ಲಿ ಜಗದೀಶ್‌ ಶೆಟ್ಟರ್‌ಗೆ ಯಾವುದು ಹಿತ?

11:36 PM Mar 08, 2024 | Team Udayavani |

ಬೆಂಗಳೂರು: ಮಾತೃ ಪಕ್ಷಕ್ಕೆ ಮರಳಿರುವ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರನ್ನು ಯಾವ ಕ್ಷೇತ್ರದಿಂದ ಲೋಕಸಭಾ ಅಖಾಡಕ್ಕೆ ಇಳಿಸಬೇಕೆಂಬುದು ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಿಗೆ ತಲೆನೋವಾಗಿ ಪರಿಣಮಿಸಿದ್ದು, ಪಂಚಮಸಾಲಿ ಸಮುದಾಯದ ಒಳ ಏಟಿನ ಭಯಕ್ಕೆ ಶೆಟ್ಟರ್‌ ಬೆಳಗಾವಿ ಯಿಂದ ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.

Advertisement

ಶೆಟ್ಟರ್‌ ಅನ್ನು ಪಕ್ಷಕ್ಕೆ ಕರೆತರುವಾಗ ಲೋಕಸಭಾ ಟಿಕೆಟ್‌ ಭರವಸೆ ನೀಡ ಲಾಗಿತ್ತು. ಆದರೆ ಕ್ಷೇತ್ರ ಯಾವುದೆಂದು ತಿಳಿಸಿರಲಿಲ್ಲ. ಸಂಬಂಧ-ಸಾಮೀಪ್ಯ ಇತ್ಯಾದಿ ದೃಷ್ಟಿಯಿಂದ ಅವರು ಬೆಳಗಾವಿ ಯಿಂದ ಕಣಕ್ಕೆ ಇಳಿಯುವುದು ಸೂಕ್ತ ಎಂದು ಬಿಜೆಪಿಯ ಹಿರಿಯರು ನಿರ್ಧರಿಸಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ ಬೆಳಗಾವಿ ತಮಗಷ್ಟು ಸುರಕ್ಷಿತವಲ್ಲ ಎಂಬ ಲೆಕ್ಕಾಚಾರ ಶೆಟ್ಟರ್‌ ಅವರದ್ದಾಗಿದೆ.

ಹೀಗಾಗಿ ಯಡಿಯೂರಪ್ಪ ಅವರನ್ನು ಕೆಲವು ದಿನಗಳ ಹಿಂದೆ ಭೇಟಿ ಮಾಡಿರುವ ಅವರು ಹುಬ್ಬಳ್ಳಿ- ಧಾರವಾಡದಿಂದ ಸ್ಪರ್ಧೆಗೆ ಅವಕಾಶ ಕೊಡಿ ಎಂದು ಕೋರಿದ್ದಾರೆ. ಹೀಗಾಗಿ ಪ್ರತಿ ಕ್ಷೇತ್ರದಿಂದ ವರಿಷ್ಠರಿಗೆ ಕೊಟ್ಟ ಆಕಾಂಕ್ಷಿ/ಸಂಭಾವ್ಯರ ಪಟ್ಟಿಯಲ್ಲಿ ಪ್ರಹ್ಲಾದ್‌ ಜೋಷಿ ಜತೆಗೆ ಶೆಟ್ಟರ್‌ ಹೆಸರನ್ನೂ ಕಳುಹಿಸಲಾಗಿದೆ.

ಇದರೊಂದಿಗೆ ಹಾವೇರಿಯ ಸಂಭಾವ್ಯರ ಪಟ್ಟಿಯಲ್ಲೂ ಅವರ ಹೆಸರಿದೆ. ಹೀಗಾಗಿ ಬಿಜೆಪಿಯ “ಜಿಗರಿ’ ದೋಸ್ತ್ ಗಳಾದ ಜೋಷಿ-ಬೊಮ್ಮಾಯಿ ಪೈಕಿ ಯಾರಾದ ರೊಬ್ಬರನ್ನು ರೇಸಿನಲ್ಲಿ ಹಿಂದಿಕ್ಕುವ ಅನಿವಾರ್ಯಕ್ಕೆ ಶೆಟ್ಟರ್‌ ಸಿಲುಕಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಹಿಂಜರಿಕೆಗೆ ಕಾರಣವೇನು ?
ಬಿಜೆಪಿ ಮೂಲಗಳ ಪ್ರಕಾರ ಎರಡು ದೃಷ್ಟಿಕೋನಗಳಿಂದ ಶೆಟ್ಟರ್‌ ಬೆಳಗಾವಿ ಬೇಡ ಎಂಬ ವಾದ ಮುಂದಿಟ್ಟಿದ್ದಾರೆ.

Advertisement

ಮೊದಲನೆಯದಾಗಿ ಬೆಳಗಾವಿಯಲ್ಲಿ ವ್ಯಕ್ತಿ/ಕುಟುಂಬ ಕೇಂದ್ರಿತ ಸಾಮ್ರಾಜ್ಯ ರಾಜಕಾರಣ ವಿಜೃಂಭಿಸುತ್ತದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡರಲ್ಲೂ ಇದೇ ಪರಿಸ್ಥಿತಿ ಇದೆ. ಅಲ್ಲಿನ ಆಂತರಿಕ ಸಂಬಂಧ-ದ್ವೇಷ ಚುನಾವಣೆಯಿಂದ ಚುನಾವಣೆಗೆ ಬದಲಾಗುತ್ತಲೇ ಇರುತ್ತದೆ. ಹೀಗಾಗಿ ಪಕ್ಕದ ಜಿಲ್ಲೆ ಯಿಂದ ಬರುವ ತಮ್ಮನ್ನು ಈ ವ್ಯವಸ್ಥೆ ಹೇಗೆ ಸ್ವೀಕರಿಸಬಹುದು ಎಂಬ ದೊಡ್ಡ ಪ್ರಶ್ನೆ ಶೆಟ್ಟರ್‌ ಅವರನ್ನು ಕಾಡುತ್ತಿದೆ.

ಎರಡನೆಯದಾಗಿ ಹುಬ್ಬಳ್ಳಿ- ಧಾರವಾಡ, ಬೆಳಗಾವಿ, ಬಾಗಲ ಕೋಟೆ, ವಿಜಯಪುರ, ಚಿಕ್ಕೋಡಿ ಭಾಗದಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯದ ಮತ ನಿರ್ಣಾಯಕವಾಗಿದೆ. ಆದರೆ ಕಳೆದ ವಿಧಾನಸಭಾ ಚುನಾವಣೆ ಕಾಲದಿಂದಲೇ ಈ ಸಮುದಾಯ ಬಿಜೆಪಿ ಬಗ್ಗೆ ತುಸು ಮುನಿಸಿಕೊಂಡಿದೆ. ವಿಜಯಪುರ ಮೀಸಲು ಕ್ಷೇತ್ರ ಹೊರತುಪಡಿಸಿ ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಪಂಚಮಸಾಲಿಗಳಿಗೆ ಅವಕಾಶ ಕಲ್ಪಿಸಿಲ್ಲ.

ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಾಗಲಕೋಟೆ, ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿಯಿಂದ ಪಂಚಮಸಾಲಿ ಸಮುದಾಯಕ್ಕೆ ಅವಕಾಶ ನೀಡಲಾಗಿತ್ತು. ಈ ಬಾರಿಯೂ ಕಾಂಗ್ರೆಸ್‌ ಪಂಚಮ ಸಾಲಿ ಸಮುದಾಯಕ್ಕೆ ಮಣೆ ಹಾಕಿದರೆ ಗೆಲುವಿನ ಹಾದಿ ಕಠಿನ ವಾಗ ಬಹುದೆಂಬುದು ಶೆಟ್ಟರ್‌ ಲೆಕ್ಕಾಚಾರ. ಹೀಗಾಗಿ ತಮ್ಮ ತವರು ಕ್ಷೇತ್ರವಾದ ಹುಬ್ಬಳ್ಳಿ- ಧಾರವಾಡದಿಂದಲೇ ಅವಕಾಶ ಕೊಡಿ ಎನ್ನುತ್ತಿದ್ದಾರೆ.

ಅನಂತಕುಮಾರ್‌ ಹೆಗಡೆ ರಾಜ್ಯ ರಾಜಕಾರಣಕ್ಕೆ?
ಉತ್ತರ ಕನ್ನಡ ಜಿಲ್ಲೆ ಸಂಸದ ಅನಂತಕುಮಾರ್‌ ಹೆಗಡೆಯವರನ್ನು ರಾಜ್ಯ ರಾಜಕಾರಣಕ್ಕೆ ಕರೆ ತಂದರೆ ಹೇಗೆ ಎಂಬ ಚರ್ಚೆಯೊಂದು ದಿಲ್ಲಿ ಬಿಜೆಪಿ ಮಟ್ಟದಲ್ಲಿ ಸುಳಿದು ಹೋಗಿದೆ. ಸದ್ಯಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅನಂತಕುಮಾರ್‌ ಹೆಗಡೆಗೆ ಪರ್ಯಾಯ ಶಕ್ತಿ ಬಿಜೆಪಿಯಲ್ಲಿಲ್ಲ. ಅವರನ್ನು ಪಕ್ಕಕ್ಕೆ ಇಟ್ಟು ಬೇರೊಬ್ಬ ಅಭ್ಯರ್ಥಿಯನ್ನು ಈ ಹೊತ್ತಿನಲ್ಲಿ ಪರಿಚಯಿಸಿದರೆ ಆಗುವ ನಷ್ಟದ ಬಗ್ಗೆಯೂ ಪಕ್ಷ ಲೆಕ್ಕಾಚಾರ ಹಾಕಿದೆ. ಹೀಗಾಗಿ ಬದಲಿ ಅಭ್ಯರ್ಥಿಯನ್ನು ತರುವುದೇ ಆದರೆ ಅನಂತಕುಮಾರ್‌ ಹೆಗಡೆಯವರೇ ಮುಂದೆ ನಿಂತು ಬಿಜೆಪಿ ಅಭ್ಯರ್ಥಿ ಪರ ಈ ಚುನಾವಣೆ ನಡೆಸಬೇಕು. ಇದಕ್ಕೆ ಪ್ರತಿಯಾಗಿ ಅವರನ್ನು ರಾಜ್ಯ ರಾಜಕಾರಣಕ್ಕೆ ಕರೆತರಲಾಗುವುದು ಎಂಬ ಖಚಿತ ಭರವಸೆ ನೀಡಬೇಕೆಂಬ ಸಾಧ್ಯಾಸಾಧ್ಯತೆಯನ್ನು ಸಂಘ-ಪರಿವಾರದ ಕೆಲವು ಹಿರಿಯರು ಮುಂದಿಟ್ಟಿದ್ದಾರೆ.

ಶಿವರಾಂ ಹೆಬ್ಬಾರ್‌ ಪಕ್ಷ ತೊರೆದರೆ ಯಲ್ಲಾಪುರ ಕ್ಷೇತ್ರದಿಂದಲೇ ಅನಂತಕುಮಾರ್‌ ಹೆಗಡೆಯವರನ್ನು ಕಣಕ್ಕೆ ಇಳಿಸಬಹುದು ಎಂಬ ಆಯ್ಕೆಯನ್ನೂ ನೀಡಲಾಗಿದೆ.

ಪ್ರತಿಯೊಂದು ಕ್ಷೇತ್ರವೂ ಮಹತ್ವದ್ದಾಗಿರುವ ಈ ಹೊತ್ತಿನಲ್ಲಿ ಪ್ರಯೋಗ ಬೇಡ ಎಂಬುದು ಯಡಿಯೂರಪ್ಪನವರ ನಿಲುವು. ದಿಲ್ಲಿಯ ಸಭೆಯಲ್ಲೂ ಅವರು ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಒಂದೊಮ್ಮೆ ಯಡಿಯೂರಪ್ಪನವರ ಸಲಹೆಯನ್ನೇ ವರಿಷ್ಠರು ಸ್ವೀಕರಿಸಿದರೆ ಅನಂತಕುಮಾರ್‌ ಹೆಗಡೆ ಮತ್ತೊಮ್ಮೆ ಅಖಾಡಕ್ಕೆ ಇಳಿಯುವುದು ಪಕ್ಕಾ. ಜತೆಗೆ ಮೈಸೂರು, ಮಂಗಳೂರು, ಉಡುಪಿ-ಚಿಕ್ಕಮಗಳೂರು ಹಾಗೂ ಬೆಂಗಳೂರಿನ ಮೂರು ಕ್ಷೇತ್ರಗಳಲ್ಲೂ ಅಭ್ಯರ್ಥಿ ಬದಲಿಸಬೇಕೆಂಬ ವಾದಕ್ಕೆ ತೆರೆ ಬೀಳಬಹುದು ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next