ರಾಮನಗರ: ಜಿದ್ದಾಜಿದ್ದಿಯ ಅಖಾಡವೆನಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಇದೀಗ ಉಭಯ ಪಕ್ಷಗಳ ಕಣ್ಣು ಚನ್ನಪಟ್ಟಣ ಮತ್ತು ಕನಕಪುರ ಕ್ಷೇತ್ರದ ಮೇಲೆ ನೆಟ್ಟಿದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಎಂಎಲ್‌ಸಿ ಯೋಗೇಶ್ವರ್ ಪ್ರಾಬಲ್ಯ ವಿರುವ ಚನ್ನಪಟ್ಟಣದಲ್ಲಿ ಮತಗಳನ್ನು ಶಿಕಾರಿ ಮಾಡಲು ಕಾಂಗ್ರೆಸ್ ಕಾರ್ಯತಂತ್ರ ಮಾಡುತ್ತಿದೆ. ಇತ್ತ ಡಿ.ಕೆ.ಶಿವಕುಮಾರ್ ಭದ್ರಕೋಟೆಯಲ್ಲಿ ಮತ ಕಸಿಯಲು ಜೆಡಿಎಸ್-ಬಿಜೆಪಿ ಪ್ಲಾನ್ ಮಾಡಿವೆ.
ಹಿಂದಿನ ಲೋಕಸಭಾ ಚುನಾವಣಾ ಮತಗಳಿಕೆ ಪ್ರಮಾಣ, ಪ್ರಸ್ತುತ ರಾಜಕೀಯ ಬೆಳವಣಿಗೆ ಹಾಗೂ ಕಳೆದ ವಿಧಾನಸಭೆಯಲ್ಲಿ ಪಕ್ಷಗಳ ಸಾಧನೆಯನ್ನು ಪರಿಗಣಿಸಿದರೆ, ಕನಕಪುರದಲ್ಲಿ ಬಿಜೆಪಿ ಮತ್ತು ಜೆಡಿಎಸ್, ಚನ್ನಪಟ್ಟಣದಲ್ಲಿ ಕಾಂಗ್ರೆಸ್ ತೀರಾ ಪೇಲವ ಎನಿಸಿದ್ದು. ಈ ಕ್ಷೇತ್ರಗಳಲ್ಲಿ ಎದುರಾಗಬಹುದಾದ ಡ್ಯಾಮೇಜ್ ಕಂಟ್ರೋಲ್‌ಗೆ ಎರಡೂ ಪಕ್ಷಗಳು ಮುಂದಾಗಿವೆ. ಹೀಗಾಗಿ ಈ ಎರಡೂ ಕ್ಷೇತ್ರಗಳತ್ತ ಎಲ್ಲರ ಚಿತ್ತ ನೆಟ್ಟಿದೆ.
ಚನ್ನಪಟ್ಟಣದ ಮೇಲೆ ಡಿಕೆ ಸಹೋದರರ ಕಣ್ಣು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಡಿ.ಕೆ.ಸುರೇಶ್ ಎರಡು ಸಾರ್ವತ್ರಿಕ ಚುನಾವಣೆ, ಒಂದು ಉಪಚುನಾವಣೆಯಲ್ಲಿ ಲೀಡ್ ಪಡೆದಿದ್ದಾರೆ. ಆದರೆ, 2013ರ ಉಪಚುನಾವಣೆ, 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಅಂದು ಸಮಾಜವಾದಿ ಪಕ್ಷದಿಂದ ಗೆದ್ದು ಶಾಸಕರಾಗಿದ್ದ ಯೋಗೇಶ್ವರ್ ಬೆಂಬಲ ನೀಡಿದ್ದರು. 2019ರ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ 37 ಸಾವಿರ ಮತಗಳ ಮುನ್ನಡೆ ಪಡೆದರಾದರೂ, ಜೆಡಿಎಸ್ ಜತೆ ಆ ಚುನಾವಣೆಯಲ್ಲಿ ಮೈತ್ರಿಯಾಗಿದ್ದ ಹಿನ್ನೆಲೆ ಯಲ್ಲಿ ಅವರು ಹೆಚ್ಚು ಮತ ಪಡೆಯಲು ಅನು ಕೂಲ ವಾಗಿತ್ತು. ಆದರೆ, ಇದೀಗ ಪರಿಸ್ಥಿತಿ ಬದಲಾಗಿದ್ದು ಚನ್ನಪಟ್ಟಣ ದಲ್ಲಿ ಪ್ರಬಲ ಪಕ್ಷಗಳು ಎನಿಸಿರುವ ಜೆಡಿಎಸ್ ಮತ್ತು ಬಿಜೆಪಿ ಜಂಟಿಯಾಗಿ ಚುನಾವಣೆ ಎದುರಿಸುತ್ತಿವೆ. ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧೆಮಾಡಿರುವ ವಿಧಾನಸಭಾ ಚುನಾವಣೆಗಳಲ್ಲಿ ಠೇವಣಿ ಕಳೆದು ಕೊಂಡಿದೆ.
ಈ ಎಲ್ಲಾ ಸಂಗತಿಯನ್ನು ಮನದಟ್ಟು ಮಾಡಿಕೊಂಡಿರುವ ಡಿಕೆಎಸ್ ಸಹೋದರರು ಚನ್ನಪಟ್ಟಣದಲ್ಲಿ ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ.
ಕ್ಷೇತ್ರದಲ್ಲಿ ರಾಜಕೀಯ ಸಮೀಕರಣಗಳನ್ನು ನಡೆಸುವ ಜತೆಗೆ ಚನ್ನಪಟ್ಟಣದಲ್ಲಿ ಸಂಸದ ಡಿ.ಕೆ.ಸುರೇಶ್ ಹೆಚ್ಚು ಸುತ್ತಾಡುವ ಮೂಲಕ ವಿಪಕ್ಷದ ಮುಖಂಡರಿಗೆ ಗಾಳ ಹಾಕುತ್ತಿದ್ದಾರೆ. ಇನ್ನು ಚನ್ನಪಟ್ಟಣದ ಸ್ಥಳೀಯ ನಾಯಕರಿಗೆ ಹೆಚ್ಚು ಮತ ಕೊಡಿಸ ಬೇಕು ಎಂಬ ಟಾಸ್ಕ್ ನೀಡಿದ್ದು, ಚನ್ನಪಟ್ಟಣದಲ್ಲಿ ಮೈತ್ರಿ ಕೂಟ ಹೆಚ್ಚು ಮತಗಳನ್ನು ಗಳಿಸದಂತೆ ನೋಡಿಕೊಳ್ಳುವುದು ಕಾಂಗ್ರೆಸ್ ಮುಂದಿರುವ ಸವಾಲಾಗಿದೆ.
ಕನಕಪುರದತ್ತ ಮೈತ್ರಿ ನಾಯಕರ ಕಣ್ಣು: ಮೈತ್ರಿ ಪಕ್ಷಕ್ಕೆ ಸಾಕಷ್ಟು ಸವಾಲಾಗಿರುವ ಕ್ಷೇತ್ರ ಎಂದರೆ ಅದರು ಕನಕಪುರ. ಡಿಕೆಎಸ್ ಸಹೋದರರ ಭದ್ರಕೋಟೆಯಾ ಗಿರುವ ಕನಕಪುರ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಭಯ ಪಕ್ಷದ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ಡಿಕೆಶಿ ಭದ್ರಕೋಟೆಯಲ್ಲಿ ತಮ್ಮ ಪ್ರಾಬಲ್ಯ ಸ್ಥಾಪಿಸಿ, ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್‌ಗೆ ತವರು ನೆಲದಲ್ಲಿ ಕೇಕ್‌ವಾಕ್ ಆಗದಂತೆ ತಡೆಯಲು ಮೈತ್ರಿ ನಾಯಕರು ತಂತ್ರ ರೂಪಿಸುತ್ತಿದ್ದಾರೆ.
ಈಗಾಗಲೇ ಕನಕಪುರದಲ್ಲಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಭೆ ನಡೆಸಲಾಗಿದ್ದು, ಎಂಎಲ್‌ಸಿ ಯೋಗೇಶ್ವರ್ ಈ ಕ್ಷೇತ್ರದ ಉಸ್ತುವಾರಿಯನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಮೈತ್ರಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದ್ದಾರೆ.
ಕನಕಪುರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ 1.20 ಲಕ್ಷ ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಡಿ.ಕೆ.ಸುರೇಶ್‌ಗೆ ಅಷ್ಟೊಂದು ಮತ ಬರದಂತೆ ತಡೆಯುವುದು ಬಿಜೆಪಿ-ಜೆಡಿಎಸ್ ತಂತ್ರವಾಗಿದೆ. ಮೈತ್ರಿ ಪಕ್ಷಗಳು ಕನಕಪುರ ಕೋಟೆಯನ್ನು ಭೇದಿಸುವರೇ ಕಾಯ್ದು ನೋಡಬೇಕಿದೆ.
– ಸು.ನಾ.ನಂದಕುಮಾರ್