ಬೆಂಗಳೂರು: ವರ್ಷದ ಹಿಂದಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಧೂಳಿಪಟ ಮಾಡಿದ್ದ ಕಾಂಗ್ರೆಸ್‌ಗೆ ಲೋಕಸಭಾ ಚುನಾವಣೆಯಲ್ಲಿ ಸಿಕ್ಕಿದ್ದು “ಸಮಾಧಾನಕರ ಬಹುಮಾನ’.
ವಿಧಾನಸಭಾ ಚುನಾವಣೆಯಲ್ಲಿ ಪಂಚ ಗ್ಯಾರಂಟಿಗಳನ್ನು ನೀಡಿತ್ತು. ಚುನಾವಣೆಗೂ ಮೊದಲೇ ಗ್ಯಾರಂಟಿ ಚೆಕ್‌ಗೆ ಖುದ್ದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸಹಿ ಮಾಡಿ, ಮನೆ-ಮನೆಗೆ ಹಂಚಿದ್ದರು. ಅದಕ್ಕೆ ಸ್ವತಃ ಹೈಕಮಾಂಡ್ ಪ್ರಚಾರದ ವೇಳೆ ಅಧಿಕೃತ ಮುದ್ರೆ ಒತ್ತಿತ್ತು. ಪರಿಣಾಮ 135 ಸ್ಥಾನಗಳೊಂದಿಗೆ ಅಧಿಕಾರದ ಗದ್ದುಗೆ ಏರಿತ್ತು. ನಿರೀಕ್ಷಿತ ಫಲಿತಾಂಶದಿಂದಾಗ ಇದೇ ತಂತ್ರವನ್ನು ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲೂ ಅನುಸರಿಸಿತ್ತು. ಆದರೆ, ರಾಜ್ಯದಲ್ಲೇ ಫಲಿತಾಂಶ ನಿರೀಕ್ಷಿತವಾಗಲಿಲ್ಲ!
ಅಧಿಕಾರಕ್ಕೆ ಬಂದು ಕೇವಲ ವರ್ಷದಲ್ಲಿ ಐದೂ ಗ್ಯಾರಂಟಿಗಳನ್ನು ಸರ್ಕಾರ ಅನುಷ್ಠಾನಗೊಳಿಸಿದೆ. 25 ಗ್ಯಾರಂಟಿಗಳನ್ನು ಘೋಷಿಸಿದ್ದಲ್ಲದೆ, ಅದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರ ಸಹಿಯೊಂದಿಗೆ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಿಸಿತ್ತು. ಈ ಮಧ್ಯೆ ನಮ್ಮ ಗ್ಯಾರಂಟಿಗಳನ್ನೇ ಬಿಜೆಪಿ ನಕಲು ಮಾಡುತ್ತಿದೆ ಎಂಬ ಆರೋಪ ಕೇಳಿಬಂತು. ಅಷ್ಟರಮಟ್ಟಿಗೆ ಯೋಜನೆಗಳು ಜನಪ್ರಿಯತೆ ಗಳಿಸಿದ್ದವು. ಇದೆಲ್ಲವೂ ಚುನಾವಣೆಯಲ್ಲಿ ಎರಡಂಕಿ ಗೆಲುವು ತಂದುಕೊಡಲಿದೆ ಎಂಬ ವಿಶ್ವಾಸ ಕಾಂಗ್ರೆಸ್ ನಾಯಕರಲ್ಲಿತ್ತು. ಆದರೆ, 28ರಲ್ಲಿ ಒಂಬತ್ತು ಸ್ಥಾನಗಳಿಗಷ್ಟೇ ತೃಪ್ತಿಪಟ್ಟುಕೊಳ್ಳುವಂತಾಯಿತು.
ಕಳೆದೆರಡು ದಶಕಗಳಲ್ಲಿ ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದಂಕಿ ದಾಟಿಲ್ಲ ನಿಜ. ಆದರೆ, ಈ ಸಲ ಎರಡಂಕಿ ಹತ್ತಿರಕ್ಕೆ ಬಂದಿದೆ. 2014ರಲ್ಲಿ ಮೋದಿ ಅವರ ದೊಡ್ಡ ಅಲೆ ಇತ್ತು. ಆಗ ರಾಜ್ಯದಲ್ಲಿ ಇದೇ ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವದಲ್ಲಿತ್ತು. ಆಗಲೂ ಅನ್ನಭಾಗ್ಯದಂತಹ ಹಲವು ಜನಪ್ರಿಯ ಯೋಜನೆಗಳಿದ್ದವು. ಆದಾಗ್ಯೂ ಕಾಂಗ್ರೆಸ್‌ಗೆ 9 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿತ್ತು. ಈಗ ಅದು ಪುನರಾವರ್ತನೆಯಾಗಿದೆ. ಇನ್ನು 2019ರ ಚುನಾವಣೆಗೆ ಹೋಲಿಸಿದರೆ, ಕೇವಲ ಒಂದರಿಂದ ಒಂಬತ್ತು ಸ್ಥಾನಗಳನ್ನು ಗಳಿಸಿಕೊಂಡಿದ್ದು ಉತ್ತಮ ಪ್ರದರ್ಶನ ಎಂದೇ ವಿಶ್ಲೇಷಿಸಲಾಗುತ್ತಿದೆ.