ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಸಭೆಗಳು ಮತ್ತು ಪ್ರಚಾರ ಕಾರ್ಯಗಳನ್ನು ಆರಂಭಿಸಲು ಪಕ್ಷಗಳು ಸಿದ್ಧತೆ ನಡೆಸುತ್ತಿವೆ. ಈ ಹಿನ್ನೆಲೆ ಯಲ್ಲಿ ಕಳೆದ ಲೋಕಸಭೆ ಚುನಾವಣೆಗಿಂತಲೂ ಈ ಬಾರಿ ಬಾಡಿಗೆ ವಿಮಾನಗಳು ಮತ್ತು ಕಾಪ್ಟರ್‌ಗಳಿಗೆ ಶೇ.40ರಷ್ಟು ಬೇಡಿಕೆ ಹೆಚ್ಚಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಬ್ಯುಸಿನೆಸ್ ಏರ್‌ಕ್ರಾಫ್ಟ್ ಆಪರೇ ಟರ್ಸ್ ಅಸೋಸಿಯೇಶನ್ ವ್ಯವಸ್ಥಾಪಕ ನಿರ್ದೇಶಕರಾದ ಆರ್.ಕೆ.ಬಲಿ ಈ ಕುರಿತು ಮಾಹಿತಿ ನೀಡಿದ್ದು, ಕಡಿಮೆ ಸಮಯದಲ್ಲಿ ಗ್ರಾಮೀಣ ಮತ್ತು ದೂರದ ಪ್ರದೇಶ ಗಳಿಗೆ ತೆರಳಲು ಅನುಕೂಲವಾಗುವ ಕಾರಣ ಕಾಪ್ಟರ್ ಮತ್ತು ಖಾಸಗಿ ಜೆಟ್‌ಗಳಿಗೆ ಬೇಡಿಕೆ ಹೆಚ್ಚಿದೆ. ಬಾಡಿಗೆ ವಿಮಾನಗಳಿಗೆ ಗಂಟೆಗೆ 4.5 ಲಕ್ಷ ರೂ.ಗಳಿಂದ 5.25 ಲಕ್ಷ ರೂ.ಗಳ ವರೆಗೆ ಶುಲ್ಕವಿದ್ದು, ಕಾಪ್ಟರ್‌ಗಳಿಗೆ 1.5 ಲಕ್ಷ ರೂ.ಗಳ ವೆಚ್ಚವಾಗುತ್ತದೆ. ಹಾಗಾಗಿ ಕಾಪ್ಟರ್‌ಗಳಿಗೆ ಹೆಚ್ಚು ಬೇಡಿಕೆ ಸೃಷ್ಟಿಯಾಗಲಿದೆ ಎಂದಿದ್ದಾರೆ.
ಪಕ್ಷಾಂತರ ಪರ್ವ ಜೋರು
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಾಂತರ ಪರ್ವ ಜೋರಾಗಿದೆ. ಹರಿಯಾಣದ ಹಿಸ್ಸಾರ್ ಕ್ಷೇತ್ರದ ಬಿಜೆಪಿ ಸಂಸದ ಬ್ರಿಜೇಂದ್ರ ಸಿಂಗ್ ಬಿಜೆಪಿ ತೊರೆದು, ಕಾಂಗ್ರೆಸ್ ಸೇರ್ಪಡೆಗೊಂಡಿ ದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿ ಕಾರ್ಜುನ ಖರ್ಗೆ ಅವರ ದಿಲ್ಲಿ ನಿವಾಸದಲ್ಲಿ ಸಿಂಗ್ ಕಾಂಗ್ರೆಸ್ ಸೇರಿದ್ದಾರೆ. ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯ ಗಳಿಂದ ನಾನು ಪಕ್ಷ ತೊರೆದಿದ್ದೇನೆ. ರೈತರ ಪ್ರತಿಭಟನೆ, ಅಗ್ನಿವೀರರ ವಿಚಾರ, ಕುಸ್ತಿಪಟುಗಳ ಪ್ರತಿಭಟನೆಯವರೆಗೆ ಹಲವಾರು ವಿಚಾರಗಳಲ್ಲಿ ನನಗೆ ಭಿನ್ನ ನಿಲುವಿತ್ತು. ಹಾಗಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಕುಟುಂಬ ಸೇರ್ಪಡೆಗೊಂಡಿದ್ದೇನೆ ಎಂದು ಸಿಂಗ್ ಹೇಳಿದ್ದಾರೆ.
ತೆಲಂಗಾಣದ ಭಾರತ್ ರಾಷ್ಟ್ರ ಸಮಿತಿ(ಬಿಆರ್‌ಎಸ್) ಯ 4 ಮತ್ತು ಕಾಂಗ್ರೆಸ್ ಒಬ್ಬ ನಾಯಕರು ರವಿವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅಲ್ಲದೇ ರಾಜ ಸ್ಥಾನದಲ್ಲಿ ಕಾಂಗ್ರೆಸ್‌ನ ಇಬ್ಬರು ಮಾಜಿ ಸಚಿವರು ಸೇರಿ ಹಲವು ನಾಯಕರು ಬಿಜೆಪಿಗೆ ಸೇರಿದ್ದಾರೆ.
ಸಂಸದರಾದ ಗೋದಮ್ ನಾಗೇಶ್ ಮತ್ತು ಸೀತಾರಾಮ್ ನಾಯಕ್, ಮಾಜಿ ಶಾಸಕರಾದ ಸೈದೀ ರೆಡ್ಡಿ ಮತ್ತು ಜಲಗಾಮ್ ವೆಂಕಟರಾವ್, ಕಾಂಗ್ರೆಸ್‌ನ ಶ್ರೀನಿವಾಸ್ ಗೋಮಸೆ ಅವರು ಬಿಜೆಪಿ ಸೇರಿದರು.
ರಾಜಸ್ಥಾನ ಮಾಜಿ ಸಚಿವ ರಾಜೇಂದ್ರ ಯಾದವ್, ಲಾಲ್ ಚಂದ್ ಕಟಾರಿಯಾ, ಕಾಂಗ್ರೆಸ್‌ನ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಸೇವಾದಳ್ ಸುರೇಶ್ ಚೌಧರಿ ಸೇರಿ ಹಲವು ಪ್ರಭಾವಿ ನಾಯಕರು ಚುನಾವಣ ಹೊಸ್ತಿಲಲ್ಲಿ ಕಮಲ ಪಾಳಯ ಸೇರಿದ್ದಾರೆ.