Advertisement

ಕಾಂಗ್ರೆಸ್‌ಗೆ 9 ಸ್ಥಾನ ಬಿಟ್ಟುಕೊಟ್ಟ ಡಿಎಂಕೆ

12:30 AM Feb 21, 2019 | Team Udayavani |

ಚೆನ್ನೈ: ಮುಂಬರುವ ಲೋಕಸಭಾ ಚುನಾವಣೆಗಾಗಿ ತಮಿಳುನಾಡಿನಲ್ಲಿ ಬಿಜೆಪಿ- ಎಐಎಡಿಎಂಕೆ ತಮ್ಮ ಸೀಟು ಹಂಚಿಕೆಯನ್ನು ಪ್ರಚುರಪಡಿಸಿದ ಬೆನ್ನಿಗೆ ಕಾಂಗ್ರೆಸ್‌ ಹಾಗೂ ಡಿಎಂಕೆ ಪಕ್ಷಗಳೂ ಸೀಟು ಹಂಚಿಕೆ ನಿರ್ಧಾರವನ್ನು ಪ್ರಕಟಿಸಿವೆ. ಡಿಎಂಕೆ ಕೇಂದ್ರ ಕಚೇರಿ ಅಣ್ಣಾ ಅರಿವಾಲಯಂನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್‌, ಸೀಟು ಹಂಚಿಕೆ ವಿವರಗಳನ್ನು ಪ್ರಕಟಿಸಿದರು. ಒಟ್ಟು 39 ಲೋಕಸಭಾ ಕ್ಷೇತ್ರಗಳಿರುವ ತಮಿಳುನಾಡಿನಲ್ಲಿ ಕಾಂಗ್ರೆಸ್‌ಗೆ 9 ಸ್ಥಾನಗಳು ಹಾಗೂ ಪುದುಚೇರಿಯಲ್ಲಿ 1 ಸ್ಥಾನವನ್ನು ಬಿಟ್ಟುಕೊಡಲಾಗಿದ್ದು, ಇದರ ಆಧಾರದಲ್ಲಿ ಕ್ಷೇತ್ರವಾರು ಹಂಚಿಕೆ ಸದ್ಯದಲ್ಲೇ ಮಾಡಲಾಗುತ್ತದೆ ಎಂದು ಸ್ಟಾಲಿನ್‌ ತಿಳಿಸಿದರು. 

Advertisement

ಬಿಜೆಪಿ, ಶಿವಸೇನೆ ಭಿನ್ನ ಹೇಳಿಕೆ: ಲೋಕಸಭೆ, ವಿಧಾನಸಭೆ ಚುನಾವಣೆಗೆ ಮೈತ್ರಿ ಘೋಷಿಸಿಕೊಂಡಿರುವ ಬಿಜೆಪಿ- ಶಿವಸೇನೆ, ಮುಖ್ಯಮಂತ್ರಿ ಸ್ಥಾನದ ಬಗ್ಗೆ ಭಿನ್ನ ಹೇಳಿಕೆ ನೀಡಿವೆ. ಬಿಜೆಪಿ ನಾಯಕ, ಸಚಿವ ಚಂದ್ರಕಾಂತ್‌ ಪಾಟೀಲ್‌ ಹೆಚ್ಚು ಸ್ಥಾನ ಗೆದ್ದ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂದಿದ್ದಾರೆ. ಅದನ್ನು ತಿರಸ್ಕರಿಸಿರುವ ಶಿವಸೇನೆ ನಾಯಕ, ಸಚಿವ ರಾಮದಾಸ ಕದಂ, ಮುಖ್ಯಮಂತ್ರಿ ಸ್ಥಾನವನ್ನು ಹಂಚಿಕೆ ಮಾಡುವ ಬಗ್ಗೆ ಒಪ್ಪಂದವಾದ ಬಳಿಕವೇ ಬಿಜೆಪಿ ಜತೆಗೆ ಪಕ್ಷ ಸ್ಥಾನ ಹೊಂದಾಣಿಕೆ ಬಗ್ಗೆ ಅಂತಿಮಪಡಿಸಲು ಒಪ್ಪಿಕೊಂಡಿದೆ ಎಂದಿದ್ದಾರೆ. ಇದೇವೇಳೆ ಶಿವಸೇನೆ, ನಮ್ಮ ಮೈತ್ರಿಯನ್ನು ವಿರೋಧಿಸುವವರನ್ನು ಹುಳಗಳು. ಅವುಗಳನ್ನು ಹೊಸಕಿ ಹಾಕಲಾಗುತ್ತದೆ. ರಾಹುಲ್‌, ಪ್ರಿಯಾಂಕಾ ವಾದ್ರಾ ಪ್ರಧಾನಿ ನರೇಂದ್ರ ಮೋದಿ ಎದುರು ಪ್ರಬಲ ನಾಯಕರೇ ಅಲ್ಲ ಎಂದಿದೆ.

ಬಿಜೆಪಿ ಅಭಿಯಾನ
ಪ್ರಧಾನಿ ಮೋದಿ ಸರಕಾರದಡಿ ಜಾರಿಗೊಂಡ ವಿವಿಧ ಯೋಜನೆಗಳ ಫ‌ಲಾನುಭವಿಗಳನ್ನು ಭೇಟಿ ಮಾಡುವ ದೇಶವ್ಯಾಪಿ ಅಭಿಯಾನಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ, ಗುರುವಾರ ಚಾಲನೆ ನೀಡಲಿದ್ದಾರೆ. ಆಂಧ್ರಪ್ರದೇ ಶದಲ್ಲಿ ಈ ಅಭಿಯಾನ ಉದ್ಘಾಟನೆಗೊಳ್ಳಲಿದ್ದು, ಆನಂತರ ವಿವಿಧ ರಾಜ್ಯಗಳಿಗೂ ಇದು ಪಸರಿಸಲಿದೆ. ದೇಶಾದ್ಯಂತ, ಕೇಂದ್ರದ ವಿವಿಧ ಯೋಜನೆಗಳ ಫ‌ಲಾನುಭವಿಗಳ ಸಂಖ್ಯೆ ಒಟ್ಟು 22 ಕೋಟಿಯಷ್ಟಿದ್ದು, ಇವರೆಲ್ಲರನ್ನೂ ಭೇಟಿ ಮಾಡಿ ಯೋಜನೆಯ ಲಾಭಗಳನ್ನು ಮನದಟ್ಟು ಮಾಡುವ ಮೂಲಕ ಬಿಜೆಪಿಯ ಬಗ್ಗೆ ಉತ್ತಮ ಅಭಿಪ್ರಾಯ ಸೃಷ್ಟಿಸುವುದು ಈ ಯೋಜನೆಯ ಗುರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next