Advertisement

BJP ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಗೆ ಲೋಕ ಚುನಾವಣೆಯ ನೆರಳು

12:00 AM Jul 30, 2023 | Team Udayavani |

ಹೊಸದಿಲ್ಲಿ: ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ಕೆಲವರನ್ನು ಪಟ್ಟಿಯಿಂದ ಕೈಬಿಡಲಾಗಿದ್ದರೆ ಮತ್ತೆ ಕೆಲವು ಅಚ್ಚರಿ ಆಯ್ಕೆಗಳನ್ನು ಮಾಡಲಾಗಿದೆ. 2024ರ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಮರ ಒಲವು ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿರುವ ಬಿಜೆಪಿ, ಉತ್ತರಪ್ರದೇಶದ ಪಸ್ಮಂದಾ ಮುಸ್ಲಿಂ ಸಮುದಾಯದವರೊಬ್ಬರಿಗೆ ಪಕ್ಷದ ಉಪಾಧ್ಯಕ್ಷ ಸ್ಥಾನವನ್ನು ನೀಡಿದೆ. ಅಲಿಗಢ ಮುಸ್ಲಿಮ್‌ ವಿವಿಯ ಮಾಜಿ ಉಪಕುಲಪತಿ ತಾರಿಖ್‌ ಮನ್ಸೂರ್‌ ಅವರೇ ಈ ಸ್ಥಾನ ಪಡೆದವರು. ಇವರ ಸೇರ್ಪಡೆಯ ಮೂಲಕ ಬಿಜೆಪಿ ಪದಾಧಿಕಾರಿಗಳ ಪಟ್ಟಿಯಲ್ಲಿ ಇಬ್ಬರು ಮುಸ್ಲಿಮರಿಗೆ ಸ್ಥಾನ ದೊರೆತಂತಾಗಿದೆ. ಈಗಾಗಲೇ ಕೇರಳದ ಅಬ್ದುಲ್ಲಾ ಕುಟ್ಟಿ ಎಂಬವರು ಬಿಜೆಪಿಯ ಉಪಾಧ್ಯಕ್ಷ ಹುದ್ದೆಯಲ್ಲಿದ್ದಾರೆ.

Advertisement

ತಾರಿಖ್‌ ಮನ್ಸೂರ್‌ ಅವರು ಉ.ಪ್ರದೇಶದ ಅಲಿಗಢದವರು. ಅಲಿಗಢದ ಒಟ್ಟು ಮತದಾರರ ಪೈಕಿ ಶೇ.19ರಷ್ಟು ಮುಸ್ಲಿಮರೇ ಆಗಿದ್ದಾರೆ. ಅಲ್ಲದೇ ಕನಿಷ್ಠ 30 ಲೋಕಸಭಾ ಕ್ಷೇತ್ರಗಳಲ್ಲಿ ಮುಸ್ಲಿಮರ ಸಂಖ್ಯೆಯೇ ಹೆಚ್ಚಿದೆ. ಅಂದರೆ 15ರಿಂದ 20 ಕ್ಷೇತ್ರಗಳಲ್ಲಿ ಮುಸ್ಲಿಮ್‌ ಮತಗಳೇ ನಿರ್ಣಾಯಕ. ಅದರಲ್ಲೂ  ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಪಸ್ಮಂದಾ ಸಮುದಾಯದ ಮೇಲೆ ಈಗಾಗಲೇ ಬಿಜೆಪಿ ಕಣ್ಣಿಟ್ಟಿದ್ದು, ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲೂ ಈ ಸಮುದಾಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಪ್ರಶ್ನಿಸಿದ್ದರು. ಪಸ್ಮಂದಾ ಮುಸ್ಲಿಮರನ್ನು ಬಿಜೆಪಿಯ ಮತಬುಟ್ಟಿಗೆ ಸೇರಿಸಿಕೊಳ್ಳುವುದು ಬಿಜೆಪಿಯ ಲೆಕ್ಕಾಚಾರವಾಗಿದ್ದು, ಆ ಗುರಿ ಸಾಧಿಸುವ ನಿಟ್ಟಿನಲ್ಲಿ ತಾರಿಖ್‌ ಮನ್ಸೂರ್‌ ಅವರ ನೇಮಕವೂ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಲಾಗುತ್ತಿದೆ.

ಹೊಸ ಕಾರ್ಯದರ್ಶಿಗಳು: ಕಾಂಗ್ರೆಸ್‌ ನಾಯಕ ಎ.ಕೆ.ಆ್ಯಂಟನಿ ಅವರ ಪುತ್ರ ಅನಿಲ್‌ ಆ್ಯಂಟನಿ, ಉತ್ತರಪ್ರದೇಶದ ಪ್ರಭಾವಿ ಗುಜ್ಜರ್‌ ನಾಯಕ ಸುರೇಂದ್ರ ಸಿಂಗ್‌ ನಗರ್‌, ಅಸ್ಸಾಂನ ಬುಡಕಟ್ಟು ಜನಾಂಗದ ಕಾಮಾಕ್ಯ ಪ್ರಸಾದ್‌ ಟಾಸಾ ಅವರನ್ನು ಹೊಸ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿದೆ. ಒಟ್ಟಾರೆ ಪಟ್ಟಿಯಲ್ಲಿ 13 ಉಪಾಧ್ಯಕ್ಷರು, 9 ಪ್ರಧಾನ ಕಾರ್ಯದರ್ಶಿಗಳು, 13 ಮಂದಿ ಕಾರ್ಯದರ್ಶಿಗಳಿದ್ದಾರೆ.

ಯಾರಿಗೆ ಕೊಕ್‌?: ಕರ್ನಾಟಕದ ಸಿ.ಟಿ. ರವಿ ಮಾತ್ರವಲ್ಲದೇ ಅಸ್ಸಾಂ ಸಂಸದ ದಿಲೀಪ್‌ ಸೈಕಿಯ ಅವರಿಗೂ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೊಕ್‌ ನೀಡಲಾಗಿದೆ. ಜತೆಗೆ ವಿನೋದ್‌ ಸೋನ್ಕರ್‌, ಹರೀಶ್‌ ದ್ವಿವೇದಿ, ಸುನಿಲ್‌ ದೇವಧರ್‌ರನ್ನು ಕಾರ್ಯದರ್ಶಿ ಹುದ್ದೆಯಿಂದ ಕೆಳಗಿಳಿಸಲಾಗಿದೆ. ರಾಜ್ಯಸಭೆ ಸದಸ್ಯ ಸರೋಜ್‌ ಪಾಂಡೆಯನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದರೆ, ಪ.ಬಂಗಾಲದ ಸಂಸದ ದಿಲೀಪ್‌ ಘೋಷ್‌ರನ್ನು ಈ ಹುದ್ದೆಯಿಂದ ಇಳಿಸಲಾಗಿದೆ.

ತೆಲಂಗಾಣದ ಬಂಡಿ ಸಂಜಯ್‌ ಪ್ರಧಾನ ಕಾರ್ಯದರ್ಶಿ

Advertisement

ಇನ್ನು, ತೆಲಂಗಾಣದಲ್ಲಿ ಸದ್ಯದಲ್ಲೇ ವಿಧಾನಸಭೆ ಚುನಾವಣೆಯೂ ನಡೆಯಲಿರುವ ಹಿನ್ನೆಲೆಯಲ್ಲಿ, ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಬಂಡಿ ಸಂಜಯ್‌ ಕುಮಾರ್‌ರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಅದೇ ರೀತಿ ಚುನಾವಣೆ ಸಮೀಪಿಸುತ್ತಿರುವ ಮತ್ತೂಂದು ರಾಜ್ಯವಾದ ಛತ್ತೀಸಗಢದಲ್ಲಿ ಬುಡಕಟ್ಟು ನಾಯಕಿ ಲತಾ ಉಸೇಂದಿ ಅವರಿಗೆ ಉಪಾಧ್ಯಕ್ಷೆಯಾಗಿ ಬಡ್ತಿ ನೀಡಲಾಗಿದೆ. ತೆಲಂಗಾಣ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಬಂಡಿ ಸಂಜಯ್‌ರನ್ನು ಇತ್ತೀಚೆಗಷ್ಟೇ ತೆಗೆದುಹಾಕಲಾಗಿತ್ತು. ಈಗ ಅವರಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡುವ ಮೂಲಕ, ಸಂಜಯ್‌ ಅವರನ್ನು ಹೈಕಮಾಂಡ್‌ ಕಡೆಗಣಿಸಿಲ್ಲ, ಅವರಿಗೆ ಹೆಚ್ಚಿನ ಜವಾಬ್ದಾರಿಯನ್ನೇ ನೀಡಿದೆ ಎಂಬ ಸಂದೇಶವನ್ನು ಪಕ್ಷದ ಕಾರ್ಯಕರ್ತರಿಗೆ ತಲುಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next