ಹೊಸದಿಲ್ಲಿ: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಶತಾಯಗತಾಯ ಸೋಲಿಸುವ ಹೆಬ್ಬಯಕೆಯಿಂದ “ಸಮಾನ ಮನಸ್ಕರ ತೃತೀಯ ರಂಗ’ ಕಟ್ಟಲು ನಿರ್ಧರಿಸಿರುವ ವಿಪಕ್ಷಗಳ ನಾಯಕರು, ಸೋಮವಾರ ಹೊಸದಿಲ್ಲಿಯಲ್ಲಿ ಸಭೆ ಸೇರಿ ಚರ್ಚೆ ನಡೆಸಿದರು.
ಮಂಗಳವಾರ ಆರಂಭವಾಗಲಿರುವ ಸಂಸತ್ತಿನ ಅಧಿವೇಶನಕ್ಕೂ ಮುನ್ನ ಹಾಗೂ ಹೊರ ಬೀಳಲಿರುವ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶಕ್ಕೆ ಮೊದಲು ಈ ಸಭೆ ನಡೆದಿರುವುದು ವಿಶೇಷ.ಆಂಧ್ರ ಪ್ರದೇಶ ಸಿಎಂ ಹಾಗೂ ತೆಲುಗು ದೇಶಂ ಪಾರ್ಟಿಯ ಅಧ್ಯಕ್ಷ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ, ಲೋಕಸಭಾ ಚುನಾವಣೆಗೆ ರೂಪಿಸಬೇಕಿರುವ ಕಾರ್ಯತಂತ್ರಗಳು, ತಮ್ಮ ರಾಜ್ಯಗಳಲ್ಲಿ ಈ ಪ್ರಾದೇಶಿಕ ಪಕ್ಷಗಳು ನಡೆಯಬೇಕಾದ ಹಾದಿಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಸಭೆಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಜೆಡಿಎಸ್ ಧುರೀಣ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ತೃಣ ಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ದಿಲ್ಲಿ ಸಿಎಂ ಹಾಗೂ ಆಪ್ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್, ಎನ್‌ಸಿಪಿ ನಾಯಕ ಶರದ್ ಪವಾರ್, ಡಿಎಂಕೆ ನಾಯಕ ಸ್ಟಾಲಿನ್, ನ್ಯಾಷನಲ್ ಕಾನ್ಫರೆನ್ಸ್ ಧುರೀಣ ಫಾರೂಕ್ ಅಬ್ದುಲ್ಲಾ, ಆರ್‌ಜೆಡಿಯ ತೇಜಸ್ವಿ ಯಾದವ್, ಸಿಪಿಎಂನ ಸೀತಾರಾಂ ಯೆಚೂರಿ, ಸಿಪಿಐ ನಾಯಕರಾದ ಸುಧಾಕರ್ ರೆಡ್ಡಿ, ಡಿ. ರಾಜಾ, ಲೋಕ ತಾಂತ್ರಿಕ ದಳದ ನಾಯಕ ಶರದ್ ಯಾದವ್ ಹಾಗೂ ಜಾರ್ಖಂಡ್ ವಿಕಾಸ್ ಮೋರ್ಚಾದ ನಾಯಕ ಬಾಬುಲಾಲ್ ಮರಾಂಡಿ ಸೇರಿದಂತೆ ಒಟ್ಟು 20 ಪಕ್ಷಗಳ ಮುಖಂಡರು ಭಾಗವಹಿಸಿದ್ದರು. ಕಾಂಗ್ರೆಸ್ ನಾಯಕರಾದ ಅಹ್ಮದ್ ಪಟೇಲ್, ಎ.ಕೆ.ಆ್ಯಂಟನಿ, ಗುಲಾಂ ನಬಿ ಆಜಾದ್, ಅಶೋಕ್ ಗೆಹೊಟ್ ಸಹ ಹಾಜರಿದ್ದರು. ವಿಶೇಷವೆಂದರೆ, ಸಮಾಜವಾದಿ ಪಕ್ಷದ ನಾಯಕ ಅಖೀಲೇಶ್ ಯಾದವ್ ಹಾಗೂ ಬಿಎಸ್‌ಪಿ ನಾಯಕಿ ಮಾಯಾವತಿ ಅವರು ಈ ಸಭೆಗೆ ಗೈರಾಗುವ ಮೂಲಕ, ಪ್ರತಿ ಪಕ್ಷಗಳಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸುಳಿವನ್ನೂ ನೀಡಿದರು.
ಬಿಜೆಪಿ ವಿರುದ್ಧ ವಾಗ್ಧಾಳಿ: ಸಭೆಯ ನಂತರ ಮಾತನಾಡಿದ ರಾಹುಲ್ ಗಾಂಧಿ, ಸರ್ಕಾರಿ ಸಂಸ್ಥೆಗಳ ಮೇಲೆ ಬಿಜೆಪಿ “ಗದಾ ಪ್ರಹಾರ’ ನಡೆಸುತ್ತಿದೆ. ಇದರ ಫಲವಾಗಿಯೇ ಸೋಮವಾರ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮುಖ್ಯಸ್ಥ ಊರ್ಜಿತ್ ಪಟೇಲ್ ರಾಜೀನಾಮೆ ನೀಡಿದ್ದಾರೆ. ದೇಶದ ಸಂಸ್ಥೆಗಳನ್ನು ರಕ್ಷಿಸಲು ವಿಪಕ್ಷಗಳೆಲ್ಲವೂ ಒಗ್ಗೂಡ ಲೇಬೇಕಿದೆ ಎಂದರು. ಇದೇ ವಿಚಾರವನ್ನು ಉಲ್ಲೇಖೀಸಿದ ಮಮತಾ ಬ್ಯಾನರ್ಜಿ, ದೇಶದಲ್ಲಿ ಆರ್ಥಿಕ ಅಸ್ಥಿರತೆಯ ಜೊತೆಗೆ ಆರ್ಥಿಕ ತುರ್ತು ಪರಿಸ್ಥಿತಿ ಏರ್ಪಟ್ಟಿದೆ. ಊರ್ಜಿತ್ ಪಟೇಲ್ ರಾಜೀನಾಮೆ ಪ್ರಕರಣವನ್ನು ಪರಿಶೀಲಿಸುವಂತೆ ರಾಷ್ಟ್ರಪತಿಯವರಿಗೆ ವಿಪಕ್ಷಗಳ ನಿಯೋಗವೊಂದು ಮಂಗಳವಾರ ಮನವಿ ಸಲ್ಲಿಸಲಿದೆ ಎಂದರು.
ಕೇಜ್ರಿವಾಲ್‌ಗೆ ಸ್ಟಾಲಿನ್ ಕಿವಿಮಾತು
“ದೇಶಕ್ಕೀಗ ಮಹಾ ಘಟಬಂಧನ’ದ ಅವಶ್ಯಕತೆಯಿದೆ. ಈ ಘಟಬಂಧನದಲ್ಲಿ ನಿಮ್ಮದೂ ಒಂದು ವಿಶೇಷ ಪಾತ್ರವಿದೆ. ಹಾಗಾಗಿ, ಕಾಂಗ್ರೆಸ್ ಪಕ್ಷವನ್ನು ಅವಹೇಳನ ಮಾಡದಿರಿ’. ಇದು, ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಹೇಳಿದ ಕಿವಿಮಾತು. ವಿಪಕ್ಷಗಳ ಸಭೆ ಹಿನ್ನೆಲೆಯಲ್ಲಿ ದಿಲ್ಲಿಗೆ ಆಗಮಿಸಿರುವ ಅವರು, ಭಾನುವಾರ ಸಂಜೆ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ ಚರ್ಚಿಸಿದಾಗ ಹೀಗೆ ಹೇಳಿದ್ದಾರೆ.
ಬಿಜೆಪಿ ಟಾಂಗ್
“ಮಹಾ ಘಟಬಂಧನ’ಕ್ಕಾಗಿ ನಡೆದ ವಿಪಕ್ಷಗಳ ಸಭೆಯನ್ನು ಟೀಕಿಸಿರುವ ಬಿಜೆಪಿಯ ಮಹಾ ಕಾರ್ಯದರ್ಶಿ ಕೈಲಾಶ್ ವಿಜಯ್‌ವಾರ್ಗಿಯಾ, ಬಿಜೆಪಿಯನ್ನು ಮಣಿಸಲೆಂದು ಸರ್ವ ವಿಪಕ್ಷಗಳೂ ಏಕಾಸ್ತ್ರವಾಗಿ ಒಗ್ಗೂಡಿರುವುದನ್ನು ನೋಡಲು ಖುಷಿಯೆನಿಸುತ್ತದೆ. ಈಗಲೇ ಈ ಪಕ್ಷಗಳು ತಮ್ಮ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸಲಿ ನೋಡೋಣ. ಅಭ್ಯರ್ಥಿ ಘೋಷಣೆ ನಂತರವೂ ಇದೇ ಒಗ್ಗಟ್ಟು ಇವರಲ್ಲಿ ಇರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ ಎಂದು ಚಟಾಕಿ ಹಾರಿಸಿದ್ದಾರೆ.