Advertisement

ಪ್ರಿಯಾಂಕಾ-ಯೋಗಿ ವಾಕ್ಸಮರ

09:48 AM Mar 26, 2019 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿ, ಬಿರುಸಿನ ಪ್ರಚಾರ ಶುರುವಾಗಿರುವಂತೆಯೇ ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನಡುವೆ ಕಬ್ಬು ಬೆಳೆಗಾರರಿಗೆ ಸಂಬಂಧಿಸಿ ಮಾತಿನ ಚಕಮಕಿ ನಡೆದಿದೆ.

Advertisement

ರಾಜ್ಯದಲ್ಲಿ ಕಬ್ಬು ಬೆಳೆಗಾರರಿಗೆ 10 ಸಾವಿರ ಕೋಟಿ ರೂ. ಪಾವತಿಸಲು ಬಾಕಿ ಇದೆ ಎಂಬ ಕುರಿತ ಮಾಧ್ಯಮ ವರದಿಯನ್ನು ಉಲ್ಲೇಖೀಸಿ, ಸರಕಾರದ ವಿರುದ್ಧ ಹರಿಹಾಯ್ದಿರುವ ಪ್ರಿಯಾಂಕಾ ವಾದ್ರಾ, “ಈ ಚೌಕಿದಾರರೆಲ್ಲ ಕೇವಲ ಶ್ರೀಮಂತರಿಗಾಗಿ ಕೆಲಸ ಮಾಡುತ್ತಾರೆಯೇ ಹೊರತು ಬಡವರಿಗಾಗಿ ಅಲ್ಲ. ಕಬ್ಬು ಬೆಳೆಗಾರರ ಕುಟುಂಬಗಳು ಹಗಲು ರಾತ್ರಿಯೆನ್ನದೇ ಪರಿಶ್ರಮ ಪಡುತ್ತಿದ್ದರೆ, ರಾಜ್ಯ ಸರಕಾರವು ಅವರ ಬಾಕಿ ಪಾವತಿಸುವತ್ತ ಗಮನವನ್ನೇ ನೀಡುತ್ತಿಲ್ಲ’ ಎಂದು ಆರೋಪಿಸಿದ್ದಾರೆ. ಅಲ್ಲದೆ, “ರೈತರಿಗೆ 10 ಸಾವಿರ ಕೋಟಿ ರೂ. ಬಾಕಿ ಎಂದರೆ ಸಣ್ಣ ಮೊತ್ತವಲ್ಲ. ಅದು ಅವರ ಮಕ್ಕಳ ಶಿಕ್ಷಣ, ಆಹಾರ, ಆರೋಗ್ಯ ಎಲ್ಲದಕ್ಕೂ ಅಗತ್ಯವಿರುವಂಥದ್ದು. ಮೊತ್ತ ಬಾಕಿ ಉಳಿಯುವುದರಿಂದ ಮುಂದಿನ ಉತ್ಪಾದನೆಯೂ ಸ್ಥಗಿತಗೊಂಡಂತಾಗುತ್ತದೆ. ಇದೆಲ್ಲ ಸರಕಾರಕ್ಕೆ ಕಾಣಿಸುತ್ತಿಲ್ಲ’ ಎಂದೂ ಕಿಡಿಕಾರಿದ್ದಾರೆ.

ಹಿತೈಷಿಗಳೆಲ್ಲ ಎಲ್ಲಿದ್ದಿರಿ?: ಪ್ರಿಯಾಂಕಾ ಹೇಳಿಕೆಗೆ ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ತಿರುಗೇಟು ನೀಡಿದ್ದು, “2012ರಿಂದ 17ರವರೆಗೆ ರೈತ ಸಮುದಾಯ ಹಸಿವಿನಿಂದ ಬಳಲುತ್ತಿದ್ದಾಗ ಈ ರೈತರ ಹಿತೈಷಿಗಳೆಲ್ಲ ಎಲ್ಲಿ ಹೋಗಿದ್ದರು’ ಎಂದು ಪ್ರಶ್ನಿಸಿದ್ದಾರೆ. ನಮ್ಮ ಸರಕಾರ ರಚನೆ ಯಾದಾಗ 57,800 ಕೋಟಿ ರೂ. ಮೊತ್ತ ಪಾವತಿಸಲು ಬಾಕಿಯಿತ್ತು. ಆದರೆ, ನಾವದನ್ನು ಪಾವತಿಸಿದ್ದೇವೆ. ಎಸ್‌ಪಿ-ಬಿಎಸ್‌ಪಿ ಅಧಿಕಾರದಲ್ಲಿದ್ದಾಗ ಕಬ್ಬು ಬೆಳೆಗಾರರಿಗಾಗಿ ಅವರು ಏನನ್ನೂ ಮಾಡಲಿಲ್ಲ. ಹೀಗಾಗಿ ರೈತರು ಹಸಿವಿನಿಂದ ಸಾಯಬೇಕಾಯಿತು ಎಂದೂ ಯೋಗಿ ಹೇಳಿದ್ದಾರೆ.

ಮಸೂದ್‌ ಅಜರ್‌ನ ಅಳಿಯ: ಇದೇ ವೇಳೆ, ರವಿವಾರ ಸಹರಾನ್ಪುರದಲ್ಲಿ ರ್ಯಾಲಿ ನಡೆಸಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್‌, ಸಹರಾನ್ಪುರದ ಕಾಂಗ್ರೆಸ್‌ ಅಭ್ಯರ್ಥಿಯನ್ನು ಜೈಶ್‌ ಉಗ್ರ ಮಸೂದ್‌ ಅಜರ್‌ನ ಅಳಿಯ ಎಂದು ಕರೆದಿದ್ದಾರೆ. “ಪ್ರತಿಪಕ್ಷಗಳು ಉಗ್ರರಿಗೆ ಬಿರಿಯಾನಿ ತಿನ್ನಿಸಿದರೆ, ಮೋದಿ ಸರಕಾರವು ಅವರಿಗೆ ಬುಲೆಟ್‌ಗಳನ್ನು ತಿನ್ನಿಸಿತು. ಈಗ ಉಗ್ರ ಅಜರ್‌ನ ಅಳಿಯ ಈ ಕ್ಷೇತ್ರವನ್ನು ಪ್ರವೇಶಿಸಿದ್ದು, ಉಗ್ರರ ಭಾಷೆಯಲ್ಲೇ ಮಾತನಾಡುತ್ತಿದ್ದಾರೆ’ ಎಂದಿದ್ದಾರೆ ಯೋಗಿ.

ಅಜಂಗಡದಿಂದ ಅಖೀಲೇಶ್‌ ಸ್ಪರ್ಧೆ: ಸಮಾಜವಾದಿ ಪಕ್ಷದ ಮುಖಂಡ ಅಖೀಲೇಶ್‌ ಯಾದವ್‌ ಉತ್ತರಪ್ರದೇಶದ ಅಜಂಗಡ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ತಮ್ಮ ಅಪ್ಪ ಮುಲಾಯಂ ಸಿಂಗ್‌ ಯಾದವ್‌ ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರವನ್ನು ಅಖೀಲೇಶ್‌ ಆಯ್ಕೆ ಮಾಡಿಕೊಂಡಿದ್ದಾರೆ. 79 ವರ್ಷದ ಮುಲಾಯಂ ಈ ಬಾರಿ ಸುರಕ್ಷಿತ ಸೀಟ್‌ ಆಗಿರುವ ಮೈನ್‌ಪುರಿಯಿಂದ ಸ್ಪರ್ಧಿಸಲಿದ್ದಾರೆ. ಇದೇ ವೇಳೆ, ರವಿವಾರ ಎಸ್‌ಪಿ ತನ್ನ 40 ಮಂದಿ ಸ್ಟಾರ್‌ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಆರಂಭದಲ್ಲಿ ಮುಲಾಯಂ ಸಿಂಗ್‌ ಹೆಸರನ್ನು ಪಟ್ಟಿಯಲ್ಲಿ ಸೇರಿಸಿರಲಿಲ್ಲ. ಈ ಬಗ್ಗೆ ಸುದ್ದಿಯಾಗುತ್ತಲೇ, ಪಕ್ಷವು ಮುಲಾಯಂ ಹೆಸರನ್ನು ಪಟ್ಟಿಗೆ ಸೇರಿಸಿದೆ.

Advertisement

ಫೇಸ್‌ಬುಕ್‌ಗೂ ಕಾಲಿಟ್ಟ “ಚೌಕಿದಾರ’
ಟ್ವಿಟರ್‌ನಲ್ಲಿ ಪ್ರಧಾನಿ ಮೋದಿಯವರಿಂದ ಆರಂಭವಾಗಿದ್ದ “ಮೇ ಭಿ ಚೌಕಿದಾರ್‌’
(ನಾನೂ ಕಾವಲುಗಾರ) ಅಭಿಯಾನ ಈಗ ಮತ್ತೂಂದು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ಗೂ ಕಾಲಿಟ್ಟಿದೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಈ ಅಭಿಯಾನ ವನ್ನು ಫೇಸ್‌ಬುಕ್‌ಗೂ ಒಯ್ದಿದ್ದಾರೆ.

ರವಿವಾರ ತಮ್ಮ ಫೇಸ್‌ಬುಕ್‌ ಪ್ರೊಫೈಸ್‌ ಪಿಕ್ಚರ್‌ ಅನ್ನು ಬದಲಿಸಿಕೊಂಡ ಅವರು, ಇತರರೂ ತಮ್ಮ ತಮ್ಮ ಹೆಸರುಗಳ ಮುಂದೆ “ಚೌಕಿದಾರ’ ಎಂದು ಸೇರಿಸು ವಂತೆ ಕರೆ ನೀಡಿದ್ದಾರೆ. ಇದಾದ ಎರಡೇ ಗಂಟೆಗಳಲ್ಲಿ ಶಾ ಅವರ ಪ್ರೊಫೈಲ್‌ ಫೋಟೋಗೆ 44 ಸಾವಿರ ಲೈಕ್‌ಗಳು ಬಂದಿದ್ದು, 2,600 ಮಂದಿ ಕಾಮೆಂಟ್‌ ಹಾಕಿದ್ದಾರೆ. 1,300ಕ್ಕೂ ಹೆಚ್ಚು ಶೇರ್‌ಗಳನ್ನೂ ಇದು ಕಂಡಿದೆ.

“ಎಲೆಕ್ಷನ್‌ ಟೂರಿಸಂ’
ಚುನಾವಣಾ ಕಾವು ಏರುತ್ತಿರುವ ಈ ಹೊತ್ತಿನಲ್ಲಿ ಗುಜರಾತ್‌ನ ಪ್ರವಾಸೋದ್ಯಮ ಕ್ಷೇತ್ರದ ಏಜೆಂಟ್‌ಗಳು ಇದನ್ನು ತಮ್ಮ ಲಾಭಕ್ಕೆ ಪರಿವರ್ತಿಸಿಕೊಂಡಿದ್ದಾರೆ. ಗುಜರಾತ್‌ಗೆ ಬರುವ ವಿದೇಶಿಗರಿಗೆ ಭಾರತದ ಚುನಾವಣೆಯ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ “ಎಲೆಕ್ಷನ್‌ ಟೂರಿಸಂ’ ಎಂಬ ಪರಿಕಲ್ಪನೆಯನ್ನು ಮತ್ತೆ ಚಾಲ್ತಿಗೆ ತರಲಾಗಿದೆ. 2014ರಲ್ಲಿ ಮೊದಲ ಬಾರಿಗೆ ಅನುಷ್ಠಾನಕ್ಕೆ ತರಲಾಗಿದ್ದ ಪರಿಕಲ್ಪನೆಯ ಈಗಿನ ಪ್ಯಾಕೇಜ್‌ನಲ್ಲಿ ವಿದೇಶಿ ಪ್ರವಾಸಿಗರನ್ನು ರಾಜಕೀಯ ಸಮ್ಮೇಳನಗಳು, ಅಭಿಯಾನಗಳು ಹಾಗೂ ಇನ್ನಿತರ ಚುನಾವಣಾ ಸಂಬಂಧಿ ಚಟುವಟಿಕೆಗಳನ್ನು ತೋರಿಸಲು ಆಯಾ ಸ್ಥಳಗಳಿಗೆ ಕೊಂಡೊಯ್ಯಲಾಗುತ್ತದೆ.

26 ಲಕ್ಷ ಬಾಟಲಿ ಶಾಯಿ
ಮತದಾನದ ವೇಳೆ ಕೈ ಬೆರಳಿಗೆ ಶಾಯಿ ಹಾಕುವ ನಿಟ್ಟಿನಲ್ಲಿ ಚುನಾವಣಾ ಆಯೋಗ 26 ಲಕ್ಷ ಬಾಟಲ್‌ಗ‌ಳಷ್ಟು ವಿಶೇಷ ಶಾಯಿಗಳಿಗೆ ಬೇಡಿಕೆ ಸಲ್ಲಿಸಿದೆ. ಅದರ ಮೊತ್ತವೇ 33 ಕೋಟಿ ರೂ. ಎಂದು ಮೈಸೂರು ಪೈಂಟ್ಸ್‌ ಆ್ಯಂಡ್‌ ವಾರ್ನಿಶ್‌ ಲಿಮಿಟೆಡ್‌ನ‌ ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ ದೊಡ್ಡಮನಿ ಹೇಳಿದ್ದಾರೆ. “ಪಿಟಿಐ’ ಸುದ್ದಿಸಂಸ್ಥೆ ಜತೆ ಮಾತನಾಡಿದ ಅವರು, ಚುನಾವಣಾ ಆಯೋಗ ಇದುವರೆಗೆ ಸಲ್ಲಿಸಿದ ಅತ್ಯಂತ ದೊಡ್ಡ ಬೇಡಿಕೆ ಇದಾಗಿದೆ. ಜತೆಗೆ 2014ರ ಚುನಾವಣೆಗೆ ಹೋಲಿಸಿದರೆ ಇದು ಅತ್ಯಂತ ದೊಡ್ಡ
ಸಂಖ್ಯೆಯದ್ದು ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next