ಮಂಗಳೂರು/ಉಡುಪಿ: ಲೋಕಸಭೆ ಚುನಾವಣೆ ಪ್ರಚಾರಕ್ಕೆ ಇನ್ನು ಎರಡು ದಿನವಷ್ಟೇ ಉಳಿದಿದ್ದು, ಮಂಗಳವಾರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.
ಎ. 18ರಂದು ಮತದಾನ ನಡೆಯಲಿದ್ದು, ನೀತಿ ಸಂಹಿತೆ ಪ್ರಕಾರ ಮತದಾನಕ್ಕೆ 48 ಗಂಟೆ ಬಾಕಿ ಇರುವಂತೆಯೇ ಬಹಿರಂಗ ಸಭೆ, ರೋಡ್ ಶೋ ಸೇರಿದಂತೆ ಬಹಿರಂಗ ಪ್ರಚಾರ ನಡೆಸಲು ಅವಕಾಶವಿಲ್ಲ. ಈ ಮೂಲಕ 17 ದಿನಗಳಿಂದ ಕ್ಷೇತ್ರದಲ್ಲಿ ನಡೆಯುತ್ತಿದ್ದ ಅಬ್ಬರದ ಚುನಾವಣ ಪ್ರಚಾರವು ಮಂಗಳವಾರ ಸಂಜೆಗೆ ಮುಕ್ತಾಯವಾಗಲಿದೆ.
ಅಭ್ಯರ್ಥಿಗಳು, ಏಜೆಂಟರು, ಬೆಂಬಲಿಗರು ಮನೆ-ಮನೆ ಗಳಿಗೆ ತೆರಳಿ ಪ್ರಚಾರ ಮಾಡಬಹುದಾಗಿದೆ. ಚುನಾವಣೆ ಮುಕ್ತ ಹಾಗೂ ಶಾಂತಿಯುತವಾಗಿ ನಡೆಸುವ ದೃಷ್ಟಿಯಿಂದ ಮತದಾನ ದಿನಾಂಕದ 48 ಗಂಟೆಗಳ ಮೊದಲು ಕಾನೂನು ಬಾಹಿರವಾಗಿ ಗುಂಪು ಸೇರುವುದನ್ನು ಸಾರ್ವಜನಿಕ ಸಭೆ, ಮೆರವಣಿಗೆ, ಬಹಿರಂಗ ಪ್ರಚಾರ ತಡೆಗಟ್ಟಲು ಈ ಅವಧಿಯಲ್ಲಿ ಸಾಮಾನ್ಯವಾಗಿ ಕಲಂ 144ರನ್ವಯ ನಿಷೇಧಾಜ್ಞೆ ಕ್ರಮವನ್ನು ಅನುಸರಿಸಲಾಗುತ್ತದೆ. ಮನೆಮನೆ ಪ್ರಚಾರದಲ್ಲೂ 5ಕ್ಕಿಂತ ಜಾಸ್ತಿ ಮಂದಿ ಭಾಗವಹಿಸಲು ಅವಕಾಶವಿರುವುದಿಲ್ಲ.
ಕ್ಷೇತ್ರದ ಹೊರಗಿನವರಿಗೆ ಅವಕಾಶವಿಲ್ಲ
ನೀತಿ ಸಂಹಿತೆಯಂತೆ ಮತದಾನದ ಕೊನೆಯ 48 ಗಂಟೆ ಗಳಲ್ಲಿ ಕ್ಷೇತ್ರದ ಮತದಾರರಲ್ಲದ ಪಕ್ಷದ ನಾಯಕರು, ತಾರಾ ಪ್ರಚಾರಕರು ಸೇರಿದಂತೆ ಹೊರಗಿನವರು ಕ್ಷೇತ್ರದಲ್ಲಿ ಉಳಿದುಕೊಳ್ಳಲು ಅವಕಾಶವಿಲ್ಲ. ಈ ಬಗ್ಗೆ ಚುನಾವಣಾ ಆಯೋಗ ನಿಗಾ ಇರಿಸಲಿದೆ.
ದ.ಕ. ಲೋಕಸಭಾ ಕ್ಷೇತ್ರದಲ್ಲಿ ಅಂತಿಮವಾಗಿ 13 ಮಂದಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಅಂತಿಮವಾಗಿ 12 ಮಂದಿ ಕಣದಲ್ಲಿ ಇದ್ದಾರೆ.