Advertisement
ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ವ್ಯತ್ಯಾಸವಾದರೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಮೇಲೂ ಅದರ ಪರಿಣಾಮ ಬೀರುವುದರಿಂದ ‘ಒಳ ಏಟು’ ಎಫೆಕ್ಟ್ ತಳಮಳ ಸೃಷ್ಟಿಸಿದೆ. ಅಷ್ಟೇ ಅಲ್ಲದೆ ಮೈಸೂರು, ಮಂಡ್ಯ , ಹಾಸನ, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬೆಂಗಳೂರು ಉತ್ತರ, ಕೇಂದ್ರ, ದಕ್ಷಿಣ ಕ್ಷೇತ್ರಗಳ ಫಲಿತಾಂಶದ್ದೇ ಇದೀಗ ಚಿಂತೆಯಾಗಿದೆ.
Related Articles
Advertisement
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸ್ಪರ್ಧೆ ಮಾಡಿದ್ದ ತುಮಕೂರಿನಲ್ಲಿ ಕೆ.ಎನ್.ರಾಜಣ್ಣ ಹಾಗೂ ಹಾಲಿ ಸಂಸದ ಮುದ್ದಹನುಮೇಗೌಡರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದು ಒಂದು ಕಡೆಯಾದರೆ ಮತ್ತೂಂದೆಡೆ ಕಾಂಗ್ರೆಸ್ ನಾಯಕರು ಆಂತರಿಕವಾಗಿ ಕೆಲಸ ಮಾಡಿಲ್ಲ ಎಂಬ ಆರೋಪವೂ ಇದೆ. ಹಾಸನದ ಮಟ್ಟಿಗೆ ಜೆಡಿಎಸ್‌ಗೆ ಹಾಗೂ ಬೆಂಗಳೂರು ಉತ್ತರ ಕ್ಷೇತ್ರದ ಮಟ್ಟಿಗೆ ಕಾಂಗ್ರೆಸ್‌ಗೆ ಒಳ ಏಟಿನ ಆತಂಕವಿಲ್ಲ ಎಂದು ಹೇಳಲಾಗಿದೆ.
ಆದರೂ, ಮಂಡ್ಯ, ಮೈಸೂರು, ತುಮಕೂರಿನಲ್ಲಿ ಒಂದು ರೀತಿಯಲ್ಲಿ ಸಮುದಾಯ ‘ಸಂಘರ್ಷ’ ಕೆಲಸ ಮಾಡಿದೆ ಎಂದು ಗುಪ್ತದಳ ಮಾಹಿತಿ ನೀಡಿದ್ದು, ಇದರಿಂದ ಎಲ್ಲೆಲ್ಲಿ ನಷ್ಟವಾಗಬಹುದು ಎಂಬುದೇ ಎರಡೂ ಪಕ್ಷಗಳ ನಾಯಕರನ್ನು ಚಿಂತೆಗೀಡು ಮಾಡಿದೆ.
ಮಂಡ್ಯ ಕ್ಷೇತ್ರದ ಗೆಲುವು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪ್ರತಿಷ್ಠೆಯಾದರೆ, ಮೈಸೂರು ಕ್ಷೇತ್ರದ ಗೆಲುವು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯಾಗಿದೆ. ಈ ಎರಡೂ ಕ್ಷೇತ್ರಗಳಲ್ಲೇ ಮೈತ್ರಿ ಧರ್ಮ ಪಾಲನೆಯಾಗಿಲ್ಲ ಎಂದಾದರೆ ಬೇರೆ ಕ್ಷೇತ್ರಗಳಲ್ಲಿ ಪಾಲನೆಯಾಗಿರುತ್ತಾ ? ಉತ್ತರ ಕರ್ನಾಟಕ ಭಾಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಮಾಡಿದ್ದ ಕಲಬುರಗಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸ್ಪರ್ಧೆ ಮಾಡಿದ್ದ ಬೀದರ್ ಕ್ಷೇತ್ರಗಳ ಕಥೆ ಏನಾಬಹುದು ಎಂಬ ಪ್ರಶ್ನೆ ಮೂಡಿದೆ.
ಹೀಗಾಗಿ, ಸೀಟು ಹೊಂದಾಣಿಕೆಯಾದರೆ ಅತಿ ಹೆಚ್ಚು ಸ್ಥಾನ ಗೆಲ್ಲಬಹುದು ಎಂಬ ಕಾಂಗ್ರೆಸ್-ಜೆಡಿಎಸ್‌ನ ಕೆಲ ನಾಯಕರ ನಿರೀಕ್ಷೆ ಎಷ್ಟರ ಮಟ್ಟಿಗೆ ಫಲ ಕೊಡಲಿದೆ ಹಾಗೂ ಫಲಿತಾಂಶದ ನಂತರ ಸಮ್ಮಿಶ್ರ ಸರ್ಕಾರದ ‘ಭವಿಷ್ಯ’ ಏನಾಗಬಹುದು ಕಾದು ನೋಡಬೇಕಾಗಿದೆ.
ಬಿಜೆಪಿಗಂತೂ ಖುಷ್…
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಧರ್ಮ ಪಾಲನೆಯಾಗದ ವಿಚಾರ ‘ಹೊಟ್ಟೆಯೊಳಗಿದ್ದ ಸತ್ಯ ಹೊರಗೆ ಬಂತು’ ಎಂಬಂತೆ ಬಹಿರಂಗವಾಗಿರುವುದರಿಂದ ಬಿಜೆಪಿ ಖುಷ್ ಆಗಿದೆ. ಇದೇ ಕಾರಣಕ್ಕೆ ನಾವು 20 ದಾಟುತ್ತೇವೆ ಎಂದು ಹೇಳಿದ್ದು ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಪ್ರಮುಖವಾಗಿ ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಚಾಮರಾನಗರ ಮಂಡ್ಯ, ತುಮಕೂರು ಕ್ಷೇತ್ರಗಳ ಬಗ್ಗೆ ಬಿಜೆಪಿ ಹೆಚ್ಚು ಭರವಸೆ ಹೊಂದಿದೆ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದರೆ ಅದು ಬಿಜೆಪಿಯದೇ ಗೆಲುವು ಎನ್ನುವ ಮಟ್ಟಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡುತ್ತಿರುವುದು ಇದಕ್ಕೆ ಪುಷ್ಠಿ ನೀಡುತ್ತಿದೆ.
-ಎಸ್.ಲಕ್ಷ್ಮಿನಾರಾಯಣ