ದಾವಣಗೆರೆ: ಮೇ 7ರಂದು ನಡೆಯಲಿರುವ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳು, ಸಿಬ್ಬಂದಿ, ನೌಕರರು, ರಕ್ಷಣಾ ಸಿಬ್ಬಂದಿಯವರು ಸೋಮವಾರ ಮತಗಟ್ಟೆಗಳಿಗೆ ತೆರಳಿದರು.
ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ ಮತ್ತು ಮಾಯಕೊಂಡ ಕ್ಷೇತ್ರದ ಮಸ್ಟರಿಂಗ್ ಕೇಂದ್ರದಲ್ಲಿ ಬೆಳಗ್ಗೆಯಿಂದ ಹಾಜರಾದ ಸಿಬ್ಬಂದಿ ತಮ್ಮ ನಿಯೋಜಿತ ಕೇಂದ್ರಗಳಿಗೆ ವಿದ್ಯುನ್ಮಾನ ಮತಯಂತ್ರ ಅಗತ್ಯ ಪರಿಕರಗಳ ಪಡೆದುಕೊಂಡು, ತಮ್ಮೊಂದಿಗೆ ನಿಯೋಜಿತಗೊಂಡ ಇತರೆ ಸಿಬ್ಬಂದಿಯ ಜೊತೆಗೆ ಸಾಗಿದ್ದು ಕಂಡು ಬಂದಿತು.
ಮತಕೇಂದ್ರ ತೆರಳುವ ಮುನ್ನ ಮತದಾರರ ಪಟ್ಟಿ, ಶಾಯಿ… ಹೀಗೆ ಪ್ರತಿಯೊಂದನ್ನೂ ಪುನರ್ ಪರಿಶೀಲಿಸಿ, ಸರಿಯಾಗಿದೆ ಎಂದು ಖಾತ್ರಿಪಡಿಸಿಕೊಂಡರು.
ಪ್ರತಿಯೊಂದು ಜವಾಬ್ದಾರಿ ಇರುತ್ತದೆ. ಕೊಂಚ ವ್ಯತ್ಯಯವಾದರೂ ಮತಗಟ್ಟೆಗಳಲ್ಲಿ ಸಮಸ್ಯೆ ಆಗಬಹುದು. ಹಾಗಾಗಿ ಎಲ್ಲವನ್ನೂ ಮತ್ತೊಮ್ಮೆ ಪರಿಶೀಲನೆ ಮಾಡಿಕೊಂಡೇ ಹೋಗಬೇಕಾಗುತ್ತದೆ. ಇವಿಎಂನಲ್ಲಿ ತೊಂದರೆಯಾದರೆ ಸೆಕ್ಟರ್ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಇನ್ನುಳಿದಂತೆ ನಾವು ಎಲ್ಲವನ್ನೂ ಜಾಗೃತಿಯಿಂದ ನೋಡಿಕೊಳ್ಳಬೇಕು ಎಂದು ಕೆಲ ನಿಯೋಜಿತ ಸಿಬ್ಬಂದಿ ತಿಳಿಸಿದರು.
ಮತಗಟ್ಟೆಗೆ ತೆರಳಿದ ನಂತರ ರಾತ್ರಿ, ಬೆಳಗ್ಗೆ ಉಪಹಾರದ ವ್ಯವಸ್ಥೆ ಮಾಡಲಾಗುತ್ತದೆ. ಕೆಲ ಗ್ರಾಮದಲ್ಲಿ ಮತಗಟ್ಟೆಗಳಲ್ಲಿ ಫ್ಯಾನ್ ಇತರೆ ವ್ಯವಸ್ಥೆಯೂ ಇರುವುದಿಲ್ಲ. ಆದರಲ್ಲೇ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡುತ್ತೇವೆ. ಇದು ದೇಶದ ಕೆಲಸ. ಅದರ ಮುಂದೆ ಸಣ್ಣಪುಟ್ಟ ಸಮಸ್ಯೆಯನ್ನು ಗಣನೆಗೂ ತೆಗೆದುಕೊಳ್ಳದೆ ನಾವೇ ನಿಭಾಯಿಸಿಕೊಳ್ಳುತ್ತೇವೆ ಎಂದು ಸಿಬ್ಬಂದಿಗಳು ಹೆಮ್ಮೆಯಿಂದ ಹೇಳಿದರು.
ಸೋಮವಾರ ನಡೆಯುವ ಲೋಕಸಭಾ ಚುನಾವಣೆ ಸುಸಜ್ಜಿತವಾಗಿ ನಡೆಯಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಕಳೆದ ಬಾರಿ ಶೇ. 79 ರಷ್ಟು ಮತದಾನವಾಗಿತ್ತು. ಈ ಬಾರಿ ಶೇ. 80 ಕ್ಕೂ ಹೆಚ್ಚು ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಮತದಾರರು ಮತ ಕೇಂದ್ರಕ್ಕೆ ಬಂದು ಮತದಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ತಿಳಿಸಿದರು.
ಉಪ ವಿಭಾಗಾಧಿಕಾರಿ ಎನ್. ದುರ್ಗಶ್ರೀ, ತಹಶೀಲ್ದಾರ್ ಡಾ. ಎಂ.ಬಿ. ಆಶ್ವಥ್ ಇತರರು ಇದ್ದರು.