ಮಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ದ.ಕ. ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆಗೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣ ಉಸ್ತುವಾರಿ, ಸಚಿವ ಮಧು ಬಂಗಾರಪ್ಪ ಅವರು ಎರಡನೇ ಸುತ್ತಿನ ಮಹತ್ವದ ಸಭೆಯನ್ನು ಶನಿವಾರ ರಾತ್ರಿ ಮಂಗಳೂರಿನಲ್ಲಿ ನಡೆಸಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ತಡರಾತ್ರಿ ವರೆಗೂ ಸಭೆ ನಡೆಸಿದ ಅವರು ನಾಯಕರಿಂದ ಅಭಿಪ್ರಾಯ ಸಂಗ್ರಹಿಸಿದರು. ಜಿಲ್ಲೆಯ ವಿವಿಧ ಬ್ಲಾಕ್‌ಗಳ ಅಧ್ಯಕ್ಷರು, ಪದಾಧಿಕಾರಿಗಳ ಜತೆ ಪ್ರತ್ಯೇಕವಾಗಿ ಮಾತನಾಡಿದರು. ಈ ವೇಳೆ ಯಾರು ಅಭ್ಯರ್ಥಿಯಾದರೆ ಉತ್ತಮ ಎನ್ನುವ ಅಭಿಪ್ರಾಯವನ್ನು ಪ್ರಮುಖರು ಮಧು ಬಂಗಾರಪ್ಪ ಅವರ ಮುಂದಿರಿಸಿದ್ದಾರೆ.
ಮಾಜಿ ಸಂಸದ ಬಿ. ಇಬ್ರಾಹಿಂ, ಮಾಜಿ ಸಚಿವರಾದ ಗಂಗಾಧರ ಗೌಡ, ಅಭಯಚಂದ್ರ, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕ ಜೆ.ಆರ್.ಲೋಬೊ, ಪ್ರಮುಖರಾದ ಇಬ್ರಾಹಿಂ ಕೊಡಿಜಾಲ್, ಜಿ.ಎ.ಭಾವ, ಮಿಥುನ್ ರೈ, ರಕ್ಷಿತ್ ಶಿವರಾಂ, ಇನಾಯತ್ ಅಲಿ, ಮಮತಾ ಗಟ್ಟಿ, ಜಿ.ಕೃಷ್ಣಪ್ಪ, ಕಣಚೂರು ಮೋನು, ಎಂ.ಶಶಿಧರ ಹೆಗ್ಡೆ, ಕವಿತಾ ಸನಿಲ್, ಪ್ರತಿಭಾ ಕುಳಾಯಿ, ಮುಂಚೂಣಿ ಘಟಕಗಳ ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರು, ಮಹಾನಗರ ಪಾಲಿಕೆ ಸದಸ್ಯರು, ಜಿ. ಪಂ. ಮಾಜಿ ಸದಸ್ಯರು, ಹಿರಿಯ ನಾಯಕರು ಉಪಸ್ಥಿತರಿದ್ದರು.
ಎರಡು ತಿಂಗಳ ಹಿಂದೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿದ್ದ ಮಧು ಬಂಗಾರದಪ್ಪ ಅವರು, ಪಕ್ಷದ ಹಿರಿಯ ಮುಖಂಡರು, ಮಾಜಿ ಸಂಸದರು, ಮಾಜಿ ಶಾಸಕರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಶಿಕ್ಷಣ ತಜ್ಞರು, ಕೈಗಾರಿಕೋದ್ಯಮಿಗಳ ಅಭಿಪ್ರಾಯ ಸಂಗ್ರಹಿಸಿ ಎಲ್ಲವನ್ನೂ ಕ್ರೋಡೀಕರಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಗುಪ್ತ ವರದಿ ಸಲ್ಲಿಸಿದ್ದರು. ರಾಜ್ಯಾಧ್ಯಕ್ಷರ ಸೂಚನೆಯಂತೆ ಮತ್ತೆ ಸಭೆ ನಡೆಸಿದ್ದು ಸಭೆಯ ವರದಿಯನ್ನು ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸಲಿದ್ದಾರೆ.
ಹಲವರ ಹೆಸರು ಪ್ರಸ್ತಾವ
ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ನಿಟ್ಟಿನಲ್ಲಿ ಸಭೆಯಲ್ಲಿ ಹಲವರ ಹೆಸರು ಪ್ರಸ್ತಾವವಾಗಿದೆ. ಮುಖ್ಯವಾಗಿ ಮಾಜಿ ಸಚಿವರಾದ ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಸಹಿತ ಹಲವರ ಹೆಸರನ್ನು ಮುಖಂಡರು ಬಂಗಾರಪ್ಪ ಅವರ ಮುಂದೆ ಇರಿಸಿದ್ದಾರೆ. ಈ ಬಾರಿ ಅಲ್ಪ ಸಂಖ್ಯಾಕರಿಗೆ ಅವಕಾಶ ನೀಡಬೇಕು ಎನ್ನುವ ಬೇಡಿಕೆಯನ್ನೂ ಅಲ್ಪ ಸಂಖ್ಯಾಕ ಮುಖಂಡರು ಇಟ್ಟಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.