ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಲೋಕಸಭೆ ಚುನಾವಣೆ ಸೀಟು ಹೊಂದಾಣಿಕೆ ಕಗ್ಗಂಟಾಗಿರುವ ಬೆನ್ನಲ್ಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಶುಕ್ರವಾರ ಐದು ಕ್ಷೇತ್ರಗಳ ಮುಖಂಡರ ಜತೆ ಸಮಾಲೋಚನೆ ನಡೆಸಿದರು. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಶಾಸಕರು, ಮಾಜಿ ಶಾಸಕರ ಜತೆ ಚರ್ಚಿಸಿದರು.
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಶಕ್ತಿಯಿದ್ದು ಆ ಪೈಕಿ ಎರಡು ಕ್ಷೇತ್ರಗಳಾದರೂ ಜೆಡಿಎಸ್ ಪಡೆಯಬೇಕು ಎಂಬ ಬೇಡಿಕೆ ಸಭೆಯಲ್ಲಿ ವ್ಯಕ್ತವಾಯಿತು ಎಂದು ಹೇಳಲಾಗಿದೆ. ಕಾಂಗ್ರೆಸ್ ನಾಯಕರು ಜೆಡಿಎಸ್‌ಗೆ ಸೀಟು ಬಿಟ್ಟುಕೊಡುವ ವಿಚಾರದಲ್ಲಿ ನೀಡುತ್ತಿರುವ ಹೇಳಿಕೆಗಳ ಬಗ್ಗೆಯೂ ಕೆಲವು ಮುಖ್ಯಮಂತ್ರಿಯವರ ಬಳಿ ಅಸಮಾಧಾನ ತೋಡಿಕೊಂಡರು ಎಂದು ತಿಳಿದು ಬಂದಿದೆ.
ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ಸ್ಪರ್ಧೆ ಮಾಡುವ ಸಾಧ್ಯತೆ ಇರುವುದರಿಂದ ಎಲ್ಲರೂ ಒಟ್ಟಾಗಿ ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಸೂಚನೆ ಸಹ ಸಭೆಯಲ್ಲಿ ನೀಡಲಾಯಿತು ಎಂದು ತಿಳಿದು ಬಂದಿದೆ.
ಮಂಡ್ಯ ಹಾಗೂ ಹಾಸನ ಕ್ಷೇತ್ರಗಳ ವಿಚಾರದಲ್ಲಿ ನಡೆದಿರುವ ಜಟಾಪಟಿಯ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಯಿತಾದರೂ ಆ ಎರಡೂ ಕ್ಷೇತ್ರಗಳ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ. ಅಲ್ಲಿ ಪಕ್ಷ ಕಾಂಗ್ರೆಸ್ ಹೊರತುಪಡಿಸಿ ಶಕ್ತಿಯುತವಾಗಿರುವುದರಿಂದ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು ಎನ್ನಲಾಗಿದೆ.
ಗೌಡರ ಜೊತೆ ಡಿಕೆಶಿ ಚರ್ಚೆ: ಈ ಮಧ್ಯೆ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ದಿಢೀರ್ ಬೆಳವಣಿಗೆಯಲ್ಲಿ ಶುಕ್ರವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಪದ್ಮನಾಭನಗರ ನಿವಾಸಕ್ಕೆ ಆಗಮಿಸಿದ ಅವರು, ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು. ಲೋಕಸಭೆ ಚುನಾವಣೆ ಸೀಟು ಹಂಚಿಕೆ ಕುರಿತು ಕಾಂಗ್ರೆಸ್-ಜೆಡಿಎಸ್ ನಡುವೆ ಕಗ್ಗಂಟು ಉಂಟಾಗಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ.