ಕಡಬ: ನೂತನ ಕಡಬ ತಾಲೂಕಿನ ಭಾಗವಾಗಿರುವ ಕಡಬ ಹೋಬಳಿಯಿಂದ ಕಳೆದ ಬಾರಿ ಯಂತೆ ಈ ಬಾರಿಯೂ ಇಬ್ಬರು ಅಭ್ಯರ್ಥಿಗಳು ಲೋಕ ಸಭಾ ಚುನಾವಣೆ ಕಣದಲ್ಲಿದ್ದಾರೆ.
ದಕ್ಷಿಣ ಕನ್ನಡ ಕ್ಷೇತ್ರದ ಸಂಸದ ನಳಿನ್ ಕುಮಾರ್ ಅವರು ಕಡಬ ಹೋಬಳಿಯ ಪಾಲ್ತಾಡಿ ಗ್ರಾಮದ ಕುಂಜಾಡಿ ಮೂಲದವರಾದರೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಕಡಬ ಹೋಬಳಿಯ ಚಾರ್ವಾಕ ಗ್ರಾಮದವರು. ಇಬ್ಬರೂ ಬಿಜೆಪಿಯ ಅಭ್ಯರ್ಥಿಗಳು.
ನಳಿನ್ ಕುಮಾರ್ ಕಟೀಲು ಪಾಲ್ತಾಡಿಯ ಕುಂಜಾಡಿ ಯಲ್ಲಿ ಹುಟ್ಟಿ ಬೆಳೆದು ವ್ಯವಹಾರ ನಿಮಿತ್ತ ಮಂಗಳೂರು ಸೇರಿದವರು.
ತಾಯಿ ಕುಂಜಾಡಿಯಲ್ಲಿಯೇ ಇರುವುದರಿಂದ ಅವರಿಗೆ ಕುಂಜಾಡಿಯೊಂದಿಗೆ ಇಂದಿಗೂ ನಿಕಟಸಂಪರ್ಕ. ಆರೆಸ್ಸೆಸ್ ಪ್ರಚಾರಕರಾಗಿ ಸಾಮಾಜಿಕ ಜೀವನ ಪ್ರಾರಂಭಿಸಿದ್ದ ನಳಿನ್ ಬಿಜೆಪಿಯ ಸಾಮಾನ್ಯಕಾರ್ಯಕರ್ತನಾಗಿ ಬೆಳೆದವರು. 2009ರ ಚುನಾವಣೆಯಲ್ಲಿ ಅಚ್ಚರಿ ಎಂಬಂತೆ ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಪ್ರಯತ್ನದಲ್ಲಿಯೇ ವಿಜಯ ಮಾಲೆ ಧರಿಸಿದ್ದಲ್ಲದೆ, 2014ರ ಚುನಾವಣೆಯಲ್ಲೂ ಜಯ ಗಳಿಸಿದ್ದರು. 2 ಬಾರಿಯೂ ಕಾಂಗ್ರೆಸ್‌ನ ಹಿರಿಯ ನಾಯಕ ಬಿ. ಜನಾರ್ದನ ಪೂಜಾರಿ ಅವರ ಎದುರಾಳಿಯಾಗಿದ್ದರು. ಇದೀಗ 3ನೇ ಬಾರಿಗೆ ಚುನಾವಣಾ ಕಣದಲ್ಲಿದ್ದಾರೆ.
ಚಾರ್ವಾಕ ಗ್ರಾಮದ ಶೋಭಾ ಕರಂದ್ಲಾಜೆ ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ 2ನೇ ಬಾರಿಗೆ ಕಣದಲ್ಲಿದ್ದಾರೆ. ಆರೆಸ್ಸೆಸ್‌ನ ಮಹಿಳಾ ವಿಭಾಗವಾದ ರಾಷ್ಟ್ರ ಸೇವಿಕಾದ ಸಕ್ರಿಯ ಕಾರ್ಯಕರ್ತೆಯಾಗಿದ್ದ ಶೋಭಾ ರಾಮಮಂದಿರ ಹೋರಾಟ, ಕುಮಾರಧಾರಾ ಉಳಿಸಿ ಆಂದೋಲನದ ಮೂಲಕ ಮುಂಚೂಣಿಗೆ ಬಂದವರು.
ರಾಜಕಾರಣ ಪ್ರವೇಶಿಸಿ 2004ರಲ್ಲಿ ವಿಧಾನಪರಿಷತ್ ಸದಸ್ಯರಾದ ಅವರು 2008ರಲ್ಲಿ ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕ ರಾಗಿ ಆಯ್ಕೆಯಾದರು. ರಾಜ್ಯದ ಸಚಿವೆಯಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಖಾತೆ ಹಾಗೂ ಇಂಧನ ಖಾತೆಯನ್ನು ಸಮರ್ಥವಾಗಿ ನಿರ್ವಹಿಸಿದ್ದರು. ಕಳೆದ ಬಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಎದುರಾಳಿ ಜಯಪ್ರಕಾಶ ಹೆಗ್ಡೆಯವರನ್ನು ಸೋಲಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ಈ ಬಾರಿ ಮತ್ತೆ ಲೋಕಸಭಾ ಚುನಾವಣೆ ಕಣದಲ್ಲಿದ್ದಾರೆ.
– ನಾಗರಾಜ್ ಎನ್.ಕೆ.