Advertisement
ಕರ್ನಾಟಕದ ಮೊದಲ ಹಂತದ ಮತದಾನವು ಕೋಲಾರವೂ ಸೇರಿದಂತೆ 14 ಕ್ಷೇತ್ರಗಳಲ್ಲಿ ಏ.26ರಂದು ನಡೆಯಲಿದೆ. ಮತದಾನಕ್ಕೆ ಎರಡು ದಿನ ಮುಂಚಿತವಾಗಿಯೇ ಬಹಿರಂಗ ಪ್ರಚಾರ ಅಂತ್ಯಗೊಳ್ಳುವುದರಿಂದ ಕೇವಲ ಹತ್ತೇ ದಿನಗಳಲ್ಲಿ ಅಭ್ಯರ್ಥಿಗಳು ಪ್ರಚಾರದ ಭರಾಟೆಯನ್ನು ಮುಕ್ತಾಯಗೊಳಿ ಸಬೇಕಾಗುತ್ತದೆ. ಆದರೆ, ಕೋಲಾರದ ಎಂಟೂ ಕ್ಷೇತ್ರಗಳಲ್ಲಿ ಪ್ರಚಾರ ಎನ್ನುವುದು ಮುಖಂಡರ ಹಂತದ ಸಭೆಗಳಿಗೆ ಸೀಮಿತವಾಗುತ್ತಿದೆಯೇ ಹೊರತು, ಸಾಮಾನ್ಯ ಮತದಾರರನ್ನು ತಲುಪಿಯೇ ಇಲ್ಲ.
Related Articles
Advertisement
ಚುನಾವಣಾ ಪ್ರಚಾರ ನೀರಸ: ಕೇವಲ ಒಂದು ವರ್ಷದ ಹಿಂದಷ್ಟೇ ಜರುಗಿದ್ದ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳು ಪೈಪೋಟಿ ಮೇಲೆ ವಾರ್ಡು, ಗ್ರಾಮಗಳನ್ನು ಸುತ್ತಾಡಿದ್ದರು. ಪ್ರತಿದಿನ ಸಂಜೆ ಅಭ್ಯರ್ಥಿಗಳ ಪರವಾಗಿ ಸ್ಥಳೀಯ ಮುಖಂಡರು ಕರಪತ್ರಗಳನ್ನು ನೀಡುತ್ತಿದ್ದರು. ಹೋಟೆಲ್, ಡಾಬಾಗಳಲ್ಲಿ ಚುನಾವಣಾ ಪಾರ್ಟಿಗಳು ಎಗ್ಗಿಲ್ಲದಂತೆ ನಡೆಯುತ್ತಿತ್ತು. ಜನಸಾಮಾನ್ಯ ಮತದಾರರು ನೇರವಾಗಿ ಚುನಾವಣೆ ಕುರಿತು ಮಾತನಾಡುವ ಹಂತಕ್ಕೆ ಬಂದು
ತಲುಪಿಬಿಟ್ಟಿದ್ದರು. ಆದರೆ, ಲೋಕಸಭಾ ಚುನಾ ವಣೆ ಯಲ್ಲಿ ಕನಿಷ್ಠ ಮತ ದಾನ ಯಂತ್ರದಲ್ಲಿ ಅಭ್ಯರ್ಥಿಯ ಕ್ರಮ ಸಂಖ್ಯೆ ಎಷ್ಟು ಎನ್ನುವುದನ್ನು ಮತದಾರರಿಗೆ ಅರ್ಥ ಮಾಡಿಸುವ ಪ್ರ ಯತ್ನ ಮಾಡುತ್ತಿಲ್ಲ. ದಿನಕ್ಕೆ ಒಂದೆರೆಡು ಸಭೆಗಳಲ್ಲಿ ಭಾಗವಹಿಸುವುದರಲ್ಲಿ ಅಭ್ಯರ್ಥಿಗಳಿಗೆ ದಿನ ಕಳೆಯು ತ್ತಿದೆ. ಲೋಕಸಭೆ ಚುನಾವಣೆ ಎಂದರೆ ಇಷ್ಟೆನಾ ಎಂದು ಜನ ಮಾತನಾಡಿಕೊಳ್ಳುವಷ್ಟರ ಮಟ್ಟಿಗೆ ಕೋ ಲಾರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನೀರಸವಾಗಿ ಸಾಗುವಂತಾಗಿದೆ.
ವೈವಿಧ್ಯಮ ಕಾರ್ಯಕ್ರಮ: ಮತದಾನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಸ್ಪೀಪ್ ಸಮಿತಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ವೈವಿಧ್ಯಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಹಿಂದಿನ ಚುನಾವಣೆಗಳಲ್ಲಿ ಕಡಿಮೆ ಮತದಾನವಾಗಿರುವ ವಾರ್ಡ್ ಗ್ರಾಮಗಳ ಪ್ರತಿ ಮನೆಗೂ ಕಡ್ಡಾಯ ಮತದಾನ ಮಾಡಿ ಎಂಬ ಸಂದೇಶವನ್ನು ಕಳುಹಿಸುತ್ತಿದ್ದಾರೆ. ಆದರೆ, ಜನರಲ್ಲಿ ಚುನಾವಣೆ ಕುರಿತಂತೆ ರಾಜಕೀಯ ಪಕ್ಷಗಳು ಆಸಕ್ತಿ ಮೂಡಿಸದ ಕಾರಣದಿಂದ ಮತದಾನ ಪ್ರಮಾಣ ಹೆಚ್ಚಳವಾಗಿಸುವ ಪ್ರಯತ್ನಗಳು ಎಷ್ಟರ ಮಟ್ಟಿಗೆ ನಿರೀಕ್ಷೆ ಮೀರುತ್ತದೋ ಕಾದು ನೋಡಬೇಕಾಗಿದೆ.
ಪ್ರಮುಖ ಪಕ್ಷಗಳ ಅಭ್ಯರ್ಥಿಗಳಿಂದ ದಿನಕ್ಕೆರೆಡು ಸಭೆ:
ಅಭ್ಯರ್ಥಿಗಳ ಘೋಷಣೆಯಾದ ಒಂದೆರೆಡು ದಿನಕ್ಕೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿತ್ತು. ಎರಡೂ ಪಕ್ಷಗಳಿಂದ ಒಂದಷ್ಟು ಮುಖಂಡರು ಆಗಮಿಸಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದರು. ಆನಂತರದ ಒಂದು ವಾರ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್‌ರನ್ನು ಎಂಟೂ ವಿಧಾನಸಭಾ ಕ್ಷೇತ್ರಗಳಿಗೆ ಪರಿಚಯಿಸುವ ಕೆಲಸವಾಯಿತು. ಹಾಗೆಯೇ, ಮೈತ್ರಿ ಅಭ್ಯರ್ಥಿ ಎಂ.ಮಲ್ಲೇಶ್‌ಬಾಬು ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ನಡುವೆ ಬೆಸುಗೆ ಹಾಕುವ ಸಮನ್ವಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕಾಯಿತು. ಇದರ ನಡುವೆ ಸುದ್ದಿ ವಾಹಿನಿಗಳು ಸಂಜೆ ವೇಳೆ ಏರ್ಪಡಿಸುತ್ತಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳಿಗೆ ಪುರುಸೊತ್ತಿಲ್ಲದಂತಾಯಿತು. ಮತ್ತೂಂದು ವಾರ ಯುಗಾದಿ ಹಾಗೂ ರಂಜಾನ್ ಆಚರಣೆಯ ರಜಾ ಕಾಲದಲ್ಲಿ ಮುಕ್ತಾಯವಾಗಿದೆ. ಮತದಾನ ಪ್ರಕ್ರಿಯೆಗೆ ಕೇವಲ 10 ದಿನ ಮಾತ್ರವೇ ಬಾಕಿ ಇದೆ. ಈಗಲೂ ಕೋಲಾರ ಕ್ಷೇತ್ರದ ಎರಡು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ತಾಲೂಕುಮಟ್ಟದ ಸಭೆಗಳಲ್ಲಿ ದಿನಕ್ಕೆರೆಡು ಸಭೆಗಳಂತೆ ಭಾಗವಹಿಸಿ ಹೈರಾಣಾಗುತ್ತಿದ್ದಾರೆ.
ನಾಯಕರ ಕಡಗಣನೆ :
ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಒಂದಷ್ಟು ಹಿರಿಯ ಮುಖಂಡರು ಬಂದು ಹೋಗಿದ್ದು ಬಿಟ್ಟರೆ ಇದುವರೆಗೂ ಕೋಲಾರ ಜಿಲ್ಲೆಗೆ ಸ್ಟಾರ್ ಪ್ರಚಾರಕರು ಬಂದಿದ್ದು ಎರಡು ಪಕ್ಷಗಳಿಂದಲೂ ಕಡಿಮೆಯೇ. ರಾಜಕೀಯ ಪಕ್ಷಗಳು ಕೋಲಾರ ಕ್ಷೇತ್ರವನ್ನು ಕಡೆಗಣಿಸಿರುವುದು ಕಾಣಿಸುತ್ತಿದೆ. ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪರವಾಗಿ ಎಚ್.ಡಿ.ಕುಮಾರಸ್ವಾಮಿ ಇದುವರೆಗೂ ಜಿಲ್ಲೆಗೆ ಬಾರದಿರುವುದು ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಕೊರತೆಯ ಭಾವನೆ ಮೂಡಿಸಿದೆ.
17ರಂದು ಜಿಲ್ಲೆಗೆ ಶಾ, ರಾಹುಲ್ ಗಾಂಧಿ ಆಗಮನ? :
ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿ ಏ.17ರಂದು ಕೋಲಾರ ಜಿಲ್ಲೆಯ ಮಾಲೂರು ಪಟ್ಟಕ್ಕೆ ಆಗಮಿಸುತ್ತಾರೆಂದು ಹೇಳಲಾಗುತ್ತಿದೆ. ಹಾಗೆಯೇ ಈ ಕಾರ್ಯಕ್ರಮದ ನಂತರ ಅಮಿತ್ ಶಾ ಕೋಲಾರ ಕ್ಷೇತ್ರವು ಸೇರಿದಂತೆ ಚಿಕ್ಕಬಳ್ಳಾಪುರ ಬೆಂಗಳೂರು ಗ್ರಾಮಾಂತರ ಪ್ರದೇಶಕ್ಕೆ ಸೇರಿದಂತೆ ಒಂದು ಕಡೆ ಸಭೆ ಮಾಡಿ ಪ್ರಚಾರ ಮಾಡುವ ಕಾರ್ಯಕ್ರಮ ನಿಗದಿಯಾಗಲಿದೆ. ಇವೆರೆಡು ದೊಡ್ಡ ಕಾರ್ಯಕ್ರಮಗಳ ನಂತರ ಎರಡೂ ಪಕ್ಷಗಳು ಮತದಾನಕ್ಕೆ ಸಜ್ಜಾಗುವ ಪ್ರಕ್ರಿಯೆ ಆರಂಭವಾಗಿ ಬಿಡುತ್ತದೆ.
ಲೋಕಸಭಾ ಚುನಾವಣೆ ಪ್ರಚಾರ ನಡೆಯುತ್ತಿರುವ ಕುರಿತು ಪತ್ರಿಕೆ, ಸುದ್ದಿ ವಾಹಿನಿ, ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿದ್ದೇವೆ. ಇದುವರೆಗೂ ಯಾವುದೇ ಪಕ್ಷದವರು ವಾರ್ಡ್‌ಗಳಿಗೆ ಭೇಟಿ ಕೊಟ್ಟು ಮತ ಕೇಳಿಲ್ಲ. ಜಿಲ್ಲಾಡಳಿತ ಕಡ್ಡಾಯ ಮತ ದಾನ ಮಾಡುವಂತೆ ಕಾರ್ಯಕ್ರಮ ಆಯೋಜಿಸುತ್ತಿದೆ. ಆದರೆ, ರಾಜಕೀಯ ಪಕ್ಷಗಳ ಪ್ರಚಾರ ಸಾಮಾನ್ಯ ಜನರನ್ನು ತಲುಪಿಯೇ ಇಲ್ಲ.-ಯತಿರಾಜ್, ನಾಗರಿಕ, ಕೋಲಾರ
– ಕೆ.ಎಸ್.ಗಣೇಶ್