Advertisement

Lok Sabha Election: ಜೆಡಿಎಸ್‌ ಭದ್ರಕೋಟೆ ಹಾಸನದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ

12:12 AM Apr 11, 2024 | Team Udayavani |

ಹಾಸನ: ಜೆಡಿಎಸ್‌ನ ತವರು ಕ್ಷೇತ್ರ ಹಾಸನ ಲೋಕಸಭಾ ಕ್ಷೇತ್ರ ರಾಜ್ಯದ ಅತ್ಯಂತ ಪ್ರತಿಷ್ಠಿತ ಕಣಗಳಲ್ಲಿ ಒಂದಾಗಿದ್ದು, ಬಿಜೆಪಿ-ಜೆಡಿಎಸ್‌ ಮೈತ್ರಿ ಹಾಗೂ ಕಾಂಗ್ರೆಸ್‌ ಪಕ್ಷದ ನಡುವಿನ ಜಿದ್ದಾಜಿದ್ದಿಗೆ ವೇದಿಕೆ ಸಜ್ಜುಗೊಂಡಿದೆ. ಇಲ್ಲಿ ಅಭ್ಯರ್ಥಿಯಾಗಿರುವ ತಮ್ಮ ಮೊಮ್ಮಗ ಪ್ರಜ್ವಲ್‌ ರೇವಣ್ಣ ಗೆಲುವಿಗೆ ಸ್ವತಃ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಟೊಂಕ ಕಟ್ಟಿ ನಿಂತಿರುವುದು ಕುತೂಹಲ ಕೆರಳಿಸಿದೆ.

Advertisement

ಬಹು ಹಿಂದಿನಿಂದಲೂ ದೇವೇಗೌಡರ ಕುಟುಂಬದ ರಾಜಕೀಯ ವೈರಿಗಳೆಂದೇ ಗುರುತಿಸಿಕೊಂಡಿರುವ ಪುಟ್ಟಸ್ವಾಮಿ ಗೌಡರ ಕುಟುಂಬದ ಮೂರನೇ ತಲೆಮಾರಿನ ಶ್ರೇಯಸ್‌ ಪಟೇಲ್‌ ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವುದು ಈ ಕ್ಷೇತ್ರದ ರೋಚಕತೆಯನ್ನು ಮತ್ತೂಂದು ಮಜಲಿಗೆ ಮುಟ್ಟಿಸಿದೆ. ಈ ಸಲ ಶ್ರೇಯಸ್‌ ಪಟೇಲರನ್ನು ಗೆಲ್ಲಿಸಿಕೊಳ್ಳುವ ಮೂಲಕ ಜೆಡಿಎಸ್‌ ಕೋಟೆಯನ್ನು ಛಿದ್ರ ಮಾಡಬೇಕೆನ್ನುವುದು ಕಾಂಗ್ರೆಸ್‌ ಇರಾದೆ. ಆದರೆ, ಮೈತ್ರಿ ಪಕ್ಷಗಳೂ ಸಹ ಇದನ್ನು ಜಿದ್ದಿಗೆ ತೆಗೆದುಕೊಂಡಿದೆ. ಬಿಜೆಪಿಗೆ ಮೊದಲ ಬಾರಿಗೆ ಲೋಕಸಭಾ ಕ್ಷೇತ್ರವನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳುವ ಉತ್ಸಾಹದಲ್ಲಿದ್ದರೆ, ಜೆಡಿಎಸ್‌ಗೆ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಹಾಸನ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಇನ್ನೊಂದೆಡೆ, ಜೆಡಿಎಸ್‌-ಬಿಜೆಪಿ ಮೈತ್ರಿ ತಳಮಟ್ಟದಲ್ಲಿ ಯಾವ ಮಟ್ಟಕ್ಕೆ ಯಶಸ್ವಿಯಾಗುತ್ತದೆ ಎನ್ನುವುದೇ ನಿಗೂಢ. ಆರಂಭದಿಂದಲೂ ಜೆಡಿಎಸ್‌ ಜತೆಗಿನ ಮೈತ್ರಿಯನ್ನು ವಿರೋಧಿಸುತ್ತಿದ್ದ ಬಿಜೆಪಿಯ ಮಾಜಿ ಶಾಸಕ ಪ್ರೀತಂ ಗೌಡರ ನಡೆ ಸಾಖಷ್ಟು ಕುತೂಹಲಕ್ಕೆ ಕಾರಣವಾಗಿದೆ. ಪ್ರೀತಂ ಜೆಡಿಎಸ್‌ ಅಭ್ಯರ್ಥಿಗೆ ಸಹಕರಿಸುವುದಿಲ್ಲ ಎಂಬ ವದಂತಿಗಳ ನಡುವೆ, ಅವರ ಕೆಲವು ಬೆಂಬಲಿಗರು ಕಾಂಗ್ರೆಸ್‌ ಜತೆ ಗುರುತಿಸಿಕೊಂಡಿರುವುದು ಜೆಡಿಎಸ್‌ಗೆ ಶಾಕ್‌ ಕೊಟ್ಟಿದೆ. ಪ್ರೀತಂ ಮೈಸೂರಿನಲ್ಲಿ ಠಿಕಾಣಿ ಹೂಡಿದ್ದಾರೆ. ಇದೆಲ್ಲ ಚುನಾವಣ ಕಣದ ಮೇಲೆ ಯಾವ ಪರಿಣಾಮ ಬೀರುತ್ತದೆ ಎನ್ನುವುದು ಕುತೂಹಲ.

ಜೆಡಿಎಸ್‌ದೇ ಪ್ರಾಬಲ್ಯ: 1991ರ ಚುನಾವಣೆಯಲ್ಲಿ ಎಚ್‌.ಡಿ.ದೇವೇಗೌಡರು ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸಿದ್ದ ನಂತರ ಈವರೆಗೆ 1999ರಲ್ಲಿ ಮಾತ್ರ ಕಾಂಗ್ರೆಸ್‌ನ ಜಿ.ಪುಟ್ಟಸ್ವಾಮಿಗೌಡ ಅವರು ಗೆದ್ದಿದ್ದು ಬಿಟ್ಟರೆ ಸತತ 4 ಬಾರಿ ಸೇರಿದಂತೆ ಕಳೆದ 3 ದಶಕಗಳಲ್ಲಿ 7 ಬಾರಿ ಜನತಾದಳ ಮತ್ತು ಜೆಡಿಎಸ್‌ ಅಭ್ಯರ್ಥಿಗಳು ಜಯಗಳಿ ಸುತ್ತಾ ಜೆಡಿಎಸ್‌ ಪ್ರಾಬಲ್ಯ ಸಾಧಿಸಿಕೊಂಡೇ ಬಂದಿದೆ. ಮತ್ತೆ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ಅವರು 2ನೇ ಬಾರಿ ಸ್ಪರ್ಧೆಗಿಳಿದು ಮರು ಆಯ್ಕೆ ಬಯಸಿದ್ದಾರೆ.

ಜೆಡಿಎಸ್‌ ಅಭ್ಯರ್ಥಿಗೆ ಬಿಜೆಪಿಯ ಇಬ್ಬರು ಶಾಸಕರು ಸೇರಿ 6 ಶಾಸ ಕರ ಬಲವಿದೆ. ಆದರೆ, ಕಾಂಗ್ರೆಸ್‌ ಇಬ್ಬರು ಶಾಸಕರ ಬಲವನ್ನಷ್ಟೇ ಅವಲಂಬಿಸಿದೆ. ಕಳೆದ ಬಾರಿ ಪ್ರಜ್ವಲ್‌ ರೇವಣ್ಣ ಆಡಳಿತ ಪಕ್ಷ ಮತ್ತು 6 ಶಾಸಕರ ಬಲದೊಂದಿಗೆ ಚುನಾವಣೆ ಎದುರಿಸಿದ್ದರೆ. ಈ ಬಾರಿ ಅವರಿಗೆ ಆಡಳಿತ ಪಕ್ಷದ ಬಲವಿಲ್ಲ. ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್‌ ಪಟೇಲ್‌ಗೆ ಆಡಳಿತ ಪಕ್ಷದ ಬಲದ ಜೊತೆಗೆ ಇಬ್ಬರು ಶಾಸಕರ ಬಲವಿದೆ.

ಜೆಡಿಎಸ್‌ಗೆ ಬಿಜೆಪಿ, ನಮೋ ಬಲ: ಒಕ್ಕಲಿಗರ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಸ್ಪರ್ಧೆಗಿಳಿದಿರುವ ಇಬ್ಬರು ಅಭ್ಯರ್ಥಿಗಳೂ ಒಕ್ಕಲಿಗ ಸಮು ದಾಯದವರೇ. ಸಾಂಪ್ರದಾಯಿಕವಾಗಿ ಒಕ್ಕಲಿಗರು ಜೆಡಿಎಸ್‌ ಪರ ಒಲವು ಹೊಂದಿರುವುದರ ಜೊತೆಗೆ ಮೈತ್ರಿ ಕಾರಣಕ್ಕಾಗಿ ಕ್ಷೇತ್ರದಲ್ಲಿ 3ನೇ ಸ್ಥಾನದಲ್ಲಿರುವ ಲಿಂಗಾಯತರ ಬಲವನ್ನೂ ಜೆಡಿಎಸ್‌ ಈ ಬಾರಿ ನಂಬಿ ಕೊಂಡಿದೆ. ಜೆಡಿಎಸ್‌ ಅಧಿಕಾರದಲ್ಲಿದ್ದಾಗ ಹಾಸನ ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳು, ಕಳೆದ 5 ವರ್ಷಗಳಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಅವರು ಮಂಜೂರು ಮಾಡಿಸಿರುವ ಕೇಂದ್ರ ಸರ್ಕಾರದ ಯೋಜನೆಗಳೂ ಬಹುಮುಖ್ಯವಾಗಿ ಬಿಜೆಪಿಯ ಮೈತ್ರಿ ಹಾಗೂ ಪ್ರಧಾನಿ ನರೇಂದ್ರ ಮೋದಿಯ ನಾಮಬಲ ಜೆಡಿಎಸ್‌ ಪಾಲಿಗೆ ವರದಾನವಾಗಿದೆ.

Advertisement

ಜೆಡಿಎಸ್‌ ಅಧಿಕಾರದಲ್ಲಿದ್ದಾಗಲೆಲ್ಲ ಹಾಸನ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದೆ. ಜನರು ನೀಡಿದ ಅಧಿಕಾರವನ್ನು ಅಭಿವೃದ್ಧಿಗಾಗಿಯೇ ಬಳಸಿದ್ದೇವೆಯೇ ಹೊರತು ಸ್ವಾರ್ಥ ಸಾಧನೆ ಮಾಡಿಲ್ಲ. ಸಂಸದನಾಗಿ 5 ವರ್ಷಗಳಲ್ಲಿ ಕ್ಷೇತ್ರಕ್ಕೆ ಹೆದ್ದಾರಿ, ರೈಲ್ವೆ ಯೋಜನೆಗಳು ಸೇರಿ 15 ಸಾವಿರ ಕೋಟಿ ರೂ.ಅನುದಾನ ತಂದಿದ್ದೇನೆ. ಮತ್ತೂಮ್ಮೆ ಜನಸೇವೆಗೆ ಅವಕಾಶ ಕೊಡಿ.
ಪ್ರಜ್ವಲ್‌ ರೇವಣ್ಣ , ಜೆಡಿಎಸ್‌ – ಬಿಜೆಪಿ ಮೈತ್ರಿ ಅಭ್ಯರ್ಥಿ

ಪಂಚಾಯತಿಯಿಂದ ಪಾರ್ಲಿಮೆಂಟ್‌ವರೆಗಿನ ಅಧಿಕಾರವನ್ನು ಎರಡು ದಶಕಗಳಿಂದ ಹಾಸನ ಜಿಲ್ಲೆಯಲ್ಲ ಒಂದೇ ಕುಟುಂಬದವರಿಗೇ ಕೊಟ್ಟಿದ್ದೀರಿ. ಈ ಬಾರಿ ನನಗೂ ಒಂದು ಅವಕಾಶ ಕೊಡಿ. ರಾಜ್ಯ ಸರ್ಕಾರದ ಗ್ಯಾರಂಟಿಗಳು ಮತದಾರರಿಗೆ ತಲಪುತ್ತಿರುವಂತೆಯೇ ನಾನೂ ಕೂಡ ಕ್ಷೇತ್ರದ ಮತದಾರರಿಗೆ ಮಿನಮ್ರನಾಗಿ ಸೇವೆ ಮಾಡುತ್ತೇನೆ.
– ಶ್ರೇಯಸ್‌ ಪಟೇಲ್‌ ಕಾಂಗ್ರೆಸ್‌ ಅಭ್ಯರ್ಥಿ

– ಎನ್‌.ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next