ಬೆಳಗಾವಿ:ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು ಯಾರು? ಹಾಲಿ ಸಂಸದರಿಗೆ ಮತ್ತೂಮ್ಮೆ ಅವಕಾಶವೇ ಅಥವಾ ಹೊಸ ಮುಖಗಳಿಗೆ ಮಣೆಯೇ? ಇಂತಹ ಹಲವಾರು ಕುತೂಹಲದ ಚರ್ಚೆಗಳು ಈಗ ಜಿಲ್ಲೆಯ ರಾಜಕೀಯ ವಲಯದಲ್ಲಿ ಬಹಳ ಜೋರಾಗಿ ನಡೆದಿವೆ.
Advertisement
ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬೆಳಗಾವಿಗೆ ಆಗಮಿಸಿ ನಾಲ್ಕು ಜಿಲ್ಲೆಗಳ ಕೋರ್ ಕಮಿಟಿ ಸಭೆ ನಡೆಸುತ್ತಿರುವುದು ಈ ಚರ್ಚೆಗೆ ಪುಷ್ಟಿ ನೀಡಿದೆ. ಬೆಳಗಾವಿ ಕ್ಷೇತ್ರದಲ್ಲಿ ಪ್ರಮುಖ ನಾಯಕರಾದ ಹಾಲಿ ಸಂಸದೆ ಮಂಗಲಾ ಅಂಗಡಿ, ಈರಣ್ಣ ಕಡಾಡಿ, ಮಹಾಂತೇಶ ಕವಟಗಿಮಠ, ಸಂಜಯ ಪಾಟೀಲ, ಶ್ರದ್ಧಾ ಶೆಟ್ಟರ್ ಮೊದಲಾದವರು ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಚಿಕ್ಕೋಡಿ ಕ್ಷೇತ್ರದಲ್ಲಿ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಂಸದ ರಮೇಶ ಕತ್ತಿ, ಪ್ರಭಾಕರ ಕೋರೆ ಪುತ್ರ ಅಮಿತ್ ಕೋರೆ ಪ್ರಮುಖ ಆಕಾಂಕ್ಷಿಗಳಾಗಿದ್ಧಾರೆ.
Related Articles
Advertisement
ಮೂಲಗಳ ಪ್ರಕಾರ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಟಿಕೆಟ್ ವಿಷಯದಲ್ಲಿ ತೆರೆಮರೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಸಹೋದರ ಬಾಲಚಂದ್ರಗೆ ಟಿಕೆಟ್ ಕೊಡಿಸಲು ರಮೇಶ ಜಾರಕಿಹೊಳಿ ಸಾಧ್ಯವಾದ ಎಲ್ಲ ಪ್ರಯತ್ನ ನಡೆಸಿದ್ದಾರೆ. ಒಂದು ವೇಳೆ ತಮಗೆ ಟಿಕೆಟ್ ಕೊಡದೇ ಇದ್ದರೆ ಜಗದೀಶ ಶೆಟ್ಟರ್ ಅವರನ್ನು ಇಲ್ಲಿಗೆ ಕರೆತಂದು ನಿಲ್ಲಿಸಬೇಕು ಎಂಬ ಪ್ರಯತ್ನದಲ್ಲಿದ್ದಾರೆ. ಜಿಲ್ಲೆಯಲ್ಲಿ ತಮ್ಮ ಮುಂದೆ ಎರಡನೇ ನಾಯಕರು ಬೆಳೆಯಬಾರದು ಎಂಬುದು ಇದರ ಹಿಂದಿನ ಉದ್ದೇಶ. ಇದು ಜಿಲ್ಲೆಯ ನಾಯಕರಿಗೆ ಇಕ್ಕಟ್ಟಿನ ಸ್ಥಿತಿ ತಂದಿಟ್ಟಿದೆ.
ರಮೇಶ ಕತ್ತಿಯತ್ತಲೂ ಒಲವು: ಒಂದು ವೇಳೆ ಜಗದೀಶ ಶೆಟ್ಟರ್‌ಗೆ ಟಿಕೆಟ್ ಕೊಡಿಸಿದರೆ ಲಿಂಗಾಯತ ಸಮಾಜದವರಿಗೆ ಟಿಕೆಟ್ ಕೊಡಿಸಿದ್ದೇವೆ ಎಂದು ಹೇಳಿಕೊಳ್ಳಬಹುದು. ಇದರಿಂದ ನಮ್ಮ ಮೇಲೆ ಈ ಸಮಾಜಕ್ಕೆ ಇರುವ ಅಸಮಾಧಾನ ಹಾಗೂ ಮುನಿಸುಕಡಿಮೆಯಾಗುತ್ತದೆ ಎಂಬುದು ಜಾರಕಿಹೊಳಿ ಸಹೋದರರ ಲೆಕ್ಕಾಚಾರ. ಇದರ ಹೊರತಾಗಿ ಎರಡನೇ ಪ್ರಯತ್ನವಾಗಿ ಜಾರಕಿಹೊಳಿ ಸಹೋದರರು ಬೆಳಗಾವಿಯಿಂದ ರಮೇಶ ಕತ್ತಿ ಅವರನ್ನು ನಿಲ್ಲಿಸಲು ಸಹ ಲಾಬಿ ಮಾಡಬಹುದು ಎಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ. ರಮೇಶ ಕತ್ತಿ ಚಿಕ್ಕೋಡಿ ಅಥವಾ ಬೆಳಗಾವಿಯಿಂದ ಟಿಕೆಟ್ ಕೇಳಿರುವುದು ಇದಕ್ಕೆ ಪುಷ್ಟಿ ನೀಡಿದೆ. ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮುಂದೆ ಈ ಎಲ್ಲ ವಿಷಯಗಳು ಪ್ರಸ್ತಾಪವಾಗುವ ಸಾಧ್ಯತೆಗಳಿವೆ. ಆದರೆ ಜಗದೀಶ ಶೆಟ್ಟರ್‌ಗೆ ಟಿಕೆಟ್ ನೀಡುವುದು ಅಂದುಕೊಂಡಷ್ಟು ಸರಳವಾಗಿಲ್ಲ. ಇದಕ್ಕೆ ಅಸಮಾಧಾನವೇ ಹೆಚ್ಚು. ಮೇಲಾಗಿ ಜಗದೀಶ ಶೆಟ್ಟರ್ ಹೊರಗಿನವರು ಎಂಬ ಭಾವನೆ ಬರುತ್ತದೆ. ಇನ್ನು ಹಾಲಿ ಸಂಸದರಿಗೆ ಮತ್ತೊಮ್ಮೆ ಟಿಕೆಟ್ ನೀಡಬೇಕು ಎಂದರೆ ಅವರು ನಿರೀಕ್ಷೆ ಮಾಡಿದಷ್ಟು ಸಕ್ರಿಯವಾಗಿಲ್ಲ ಎಂಬ ಅಭಿಪ್ರಾಯ ಇದೆ. ಮಂಗಲಾ ಅಂಗಡಿ ಪುತ್ರಿ ಶ್ರದ್ಧಾ (ಜಗದೀಶ ಶೆಟ್ಟರ್ ಸೊಸೆ) ಹುಬ್ಬಳ್ಳಿಗೆ ಸಂಬಂಧಪಟ್ಟವರು. ಪಕ್ಷದಲ್ಲಿ ಹಾಗೂ ಜನರ ಜತೆ ಅಷ್ಟು ಸಂಪರ್ಕದಲ್ಲಿ ಇಲ್ಲ ಎಂಬ ಮಾತುಗಳು ಕೇಳಿಬಂದಿವೆ. ಈ ಎಲ್ಲ ಅಂಶಗಳು ಜಗದೀಶ ಶೆಟ್ಟರ್ ಗುಂಪಿಗೆ ಮತ್ತು ಜಾರಕಿಹೊಳಿ ಪ್ರಯತ್ನಕ್ಕೆ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದೆ. ಪಂಚಮಸಾಲಿ ಸಮಾಜದವರಿಗೆ ಟಿಕೆಟ್ ನೀಡಲು ಹೆಚ್ಚಿದ ಒತ್ತಡ
ಇದೆಲ್ಲದರ ಮಧ್ಯೆ ಟಿಕೆಟ್ ನೀಡುವ ವಿಚಾರದಲ್ಲಿ ಜಾತಿ ಲೆಕ್ಕಾಚಾರ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಲಿಂಗಾಯತ ಪಂಚಮಸಾಲಿ ಸಮಾಜದವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ. ವಿಧಾನಸಭೆ ಚುನಾವಣೆ ನಂತರ ಲಿಂಗಾಯತ ಸಮಾಜದವರು ಬದಲಾಗಿದ್ದಾರೆ. ಕಾಂಗ್ರೆಸ್ ಕಡೆಗಿನ ಒಲವು ಬಿಜೆಪಿ ಕಡೆ ತಿರುಗಿದೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲಿಸಿ ತಪ್ಪಾಗಿದೆ ಎಂಬುದು ಮನವರಿಕೆಯಾಗಿದೆ. ಇದು ನಮಗೆ ಅನುಕೂಲ
ಉಂಟು ಮಾಡಲಿದೆ ಎನ್ನುವುದು ಬಿಜೆಪಿ ನಾಯಕರ ಲೆಕ್ಕಾಚಾರ. ಇದೇ ಕಾರಣದಿಂದ ಲಿಂಗಾಯತ ಪಂಚಮಸಾಲಿ ಸಮಾಜದವರಿಗೆ ಟಿಕೆಟ್ ಕೊಡಬೇಕು ಎಂಬ ಬೇಡಿಕೆ ವ್ಯಕ್ತವಾಗಿದೆ. *ಕೇಶವ ಆದಿ