ಬೆಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ ಕೇರಳದ ವಯನಾಡು ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಸಂಪತ್ತು ಮರುಹಂಚಿಕೆ ಕುರಿತು ಮಾತನಾಡಿದ್ದಾರೆ ಎಂದು ಟೀಕಿಸಿರುವ ಕೇಂದ್ರ ಸಚಿವ ಅಮಿತ್ ಶಾ, ಜೂನ್ 4ರಂದು ಹೊರಬೀಳುವ ಫಲಿತಾಂಶದಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನಗಳು ದೊರಕುವುದು ನಿಶ್ಚಿತ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸಿದ ವೇಳೆ ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಮತ್ತೊಬ್ಬ ಕಾಂಗ್ರೆಸ್ ನಾಯಕ ಚಿದಂಬರಂ ಕೂಡಾ ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರದ್ದುಪಡಿಸುವುದಾಗಿ ಭರವಸೆ ನೀಡಿದ್ದಾರೆ. ಕರ್ನಾಟಕದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನಿಸಿದ ಶಾ, ನೇಹಾ ಹೀರೆಮಠ ಸಾವಿನ ವಿಚಾರವನ್ನು ಎತ್ತುವ ಹಕ್ಕು ಬಿಜೆಪಿಗೆ ಇದೆ ಎಂದು ಸಮರ್ಥಿಸಿಕೊಂಡರು.
ಕಾಂಗ್ರೆಸ್ ಪಕ್ಷ ಇಂತಹ ಹೇಳಿಕೆಗಳ ಮೂಲಕ ಮೊದಲಿನಿಂದಲೂ ಒಲೈಕೆ ರಾಜಕಾರಣವನ್ನೇ ಮಾಡುತ್ತಾ ಬಂದಿದೆ. ಈ ಬಾರಿ ಸಂಪತ್ತು ಮರು ಹಂಚಿಕೆ ಬಗ್ಗೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ. ಆದರೆ ಮತದಾರ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾನೆ ಎಂದು ಶಾ ಹೇಳಿದರು.
ಕರ್ನಾಟಕದಲ್ಲಿ ವಿಪಕ್ಷವಾಗಿ ಭಾರತೀಯ ಜನತಾ ಪಕ್ಷ ಕಾನೂನು ಸುವ್ಯವಸ್ಥೆ ಕುರಿತ ವಿಚಾರ ಬಂದಾಗ ಅದರ ಬಗ್ಗೆ ಧ್ವನಿ ಎತ್ತಲೇಬೇಕಾಗುತ್ತದೆ. ಅದೇ ರೀತಿ ಕಾಂಗ್ರೆಸ್ ಪಕ್ಷದ ಗುಪ್ತ ಯೋಜನೆಗಳನ್ನು ಕಾರ್ಯಗತಗೊಳಿಸಲು ಬಿಜೆಪಿ ಬಿಡುವುದಿಲ್ಲ ಎಂದು ಶಾ ತಿರುಗೇಟು ನೀಡಿದ್ದಾರೆ.
ನಾವು ಈ ಬಾರಿಯ ಚುನಾವಣೆಯಲ್ಲಿ 400 ಸ್ಥಾನ ಪಡೆಯುತ್ತೇವೋ ಅಥವಾ ಇಲ್ಲವೋ ಎಂಬುದನ್ನು ಜೂನ್ 4ರಂದು ಪ್ರಕಟವಾಗುವ ಫಲಿತಾಂಶದ ದಿನ ನೀವೇ ನೋಡಿ ಎಂದು ಶಾ ಅಭಿಪ್ರಾಯವ್ಯಕ್ತಪಡಿಸಿದರು.