ಹೊಸದಿಲ್ಲಿ: ಸಾಮಾಜಿಕ ತಾಣಗಳ ಮೇಲೆ ವಿಶೇಷ ನಿಗಾ ಇಡಲಾಗಿದ್ದು, ಟೀಕೆ ಮಾಡಲು ಅವಕಾಶವಿದೆ ಆದರೆ ಯಾವುದೇ ಸುಳ್ಳು ಸುದ್ದಿ ಹರಿಯಬಿಡಲು ಅವಕಾಶ ನೀಡುವುದಿಲ್ಲ. ಮತದಾರರಿಗೆ ಸುಳ್ಳು ಸುದ್ದಿ ಮತ್ತು ಪರಿಶೀಲಿಸದ ಮಾಹಿತಿಯನ್ನು ರವಾನಿಸದಂತೆ ರಾಜಕೀಯ ಪಕ್ಷಗಳಿಗೆ ಮುಖ್ಯ ಚುನಾವಣ ಆಯುಕ್ತ ರಾಜೀವ್ ಕುಮಾರ್ ಅವರು ಸೂಚನೆ ನೀಡಿದ್ದಾರೆ.
ಚುನಾವಣ ದಿನಾಂಕ ಘೋಷಣೆಗೂ ಮುನ್ನ ಸುದೀರ್ಘ ವಿವರ ನೀಡಿದ ರಾಜೀವ್ ಕುಮಾರ್ ಅವರು ”ನಾವು ರಾಷ್ಟ್ರಕ್ಕೆ ನಿಜವಾದ ಹಬ್ಬದ, ಪ್ರಜಾಸತ್ತಾತ್ಮಕ ವಾತಾವರಣವನ್ನು ನೀಡಲು ಬದ್ಧರಾಗಿದ್ದೇವೆ. 17 ನೇ ಲೋಕಸಭೆಯ ಅವಧಿಯು ಜೂನ್ 16, 2024 ರಂದು ಮುಕ್ತಾಯಗೊಳ್ಳಲಿದೆ. ಆಂಧ್ರ ಪ್ರದೇಶ, ಒಡಿಶಾ, ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂನ ವಿಧಾನಸಭೆಗಳ ಅವಧಿಯು ಸಹ ಜೂನ್ 2024 ರಲ್ಲಿ ಮುಗಿಯಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿಯೂ ಚುನಾವಣೆಗಳು ನಡೆಯಬೇಕಿವೆ” ಎಂದರು.
ಚುನಾವಣೆಯಲ್ಲಿ ರಕ್ತಪಾತ, ಹಿಂಸಾಚಾರಕ್ಕೆ ಜಾಗವಿಲ್ಲ.ಹಿಂಸಾಚಾರದ ಮಾಹಿತಿ ಎಲ್ಲಿಂದ ಬಂದರೂ ಅವರ ವಿರುದ್ಧ ತತ್ ಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
”ನಮ್ಮಲ್ಲಿ ಒಟ್ಟು 96.8 ಕೋಟಿ ಮತದಾರರಿದ್ದಾರೆ.1.8 ಕೋಟಿ ಮೊದಲ ಬಾರಿಗೆ ಮತದಾರರು ಮತ್ತು 20-29 ವರ್ಷದೊಳಗಿನ 19.47 ಕೋಟಿ ಮತದಾರರಿದ್ದಾರೆ. 2 ರಾಜ್ಯಗಳಲ್ಲಿ ಮಹಿಳಾ ಮತದಾರರ ಅನುಪಾತವು ಪುರುಷ ಮತದಾರರಿಗಿಂತ ಹೆಚ್ಚಾಗಿದೆ” ಎಂದು ತಿಳಿಸಿದರು.
10.5 ಲಕ್ಷ ಮತಗಟ್ಟೆಗಳು, 1.5 ಕೋಟಿ ಮತಗಟ್ಟೆ ಅಧಿಕಾರಿಗಳು ಮತ್ತು ಭದ್ರತಾ ಸಿಬಂದಿ, 55 ಲಕ್ಷ ಇವಿಎಂಗಳು, 4 ಲಕ್ಷ ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.