Advertisement

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

12:39 AM Apr 25, 2024 | Team Udayavani |

ರಾಜ್ಯದ ಪ್ರಜಾಪ್ರಭುತ್ವದ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. 14 ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಮತದಾನ ನಡೆಯಲಿದೆ. ಮತದಾನ ಎನ್ನುವುದು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಅತ್ಯಂತ ಮಹತ್ವದ ಕಾರ್ಯ. ಉದಾಸೀನತೆಯಿಂದ ಮತದಾನವನ್ನು ಮಿಸ್‌ ಮಾಡಿಕೊಳ್ಳುವವರ ಸಂಖ್ಯೆ ಈಗಲೂ ಸಾಕಷ್ಟಿದೆ. ಅದರಲ್ಲೂ ನಗರ ಭಾಗದ ಹಲವರಿಗೆ ಮತದಾನದ ಕುರಿತು ಆಸಕ್ತಿಯೇ ಇಲ್ಲದಿರುವುದು ಇಡೀ ಪ್ರಜಾಪ್ರಭುತ್ವದ ಸೋಲು. ಈ ಹಿನ್ನೆಲೆಯಲ್ಲಿ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ “ಉದಯವಾಣಿ’ ನಾಡಿನ ಗಣ್ಯರನ್ನು ಮಾತನಾಡಿಸಿ ಅಭಿಪ್ರಾಯವನ್ನು ಸಂಗ್ರಹಿಸಿತು. ಪ್ರತಿಯೊಬ್ಬ ಗಣ್ಯರ ಮಾತಿನ ತಥ್ಯ ಒಂದೇ- ದೇಶದ ಅಭಿವೃದ್ಧಿ ದೃಷ್ಟಿಯಿಂದ ಪ್ರತಿಯೊಬ್ಬರೂ ಮತದಾನದಲ್ಲಿ ಭಾಗವಹಿಸಿ, ಯಾವುದೇ ಜಾತಿ, ಧರ್ಮದ ಹಂಗಿಲ್ಲದೆ ಮತಚಲಾಯಿಸಿ ಎಂದು ಮನವಿ ಮಾಡಿದ್ದಾರೆ. ಅಭ್ಯರ್ಥಿಯ ಬಗ್ಗೆ ತಿಳಿದು ಮತಚಲಾಯಿಸಿ, ಮತವನ್ನು ಮಾರಿಕೊಳ್ಳಬೇಡಿ ಎಂದು ಹಲವು ಗಣ್ಯರು ಕೋರಿದ್ದಾರೆ.

Advertisement

ಪ್ರಾಮಾಣಿಕ ಅಭ್ಯರ್ಥಿಗೆ ಮತ ಹಾಕಿ
ಪ್ರಾಮಾಣಿಕ ಅಭ್ಯರ್ಥಿಗೆ ಅಮೂಲ್ಯವಾದ ಮತ ಹಾಕಿದರೆ ಉತ್ತಮ. ಭ್ರಷ್ಟಾಚಾರದ ವಿರುದ್ಧ ಹೋರಾಡುವವರನ್ನು ಆರಿಸಿ ತರಬೇಕು. ಇದರಿಂದ ದೇಶದ ಅಭಿವೃದ್ಧಿಗೆ ಸಹಕಾರವಾಗುತ್ತದೆ. ಎಲ್ಲರೂ ಮತದಾನ ಮಾಡಿ ಅಮೂಲ್ಯವಾದ ಹಕ್ಕು ಚಲಾಯಿಸಿ.
-ನ್ಯಾ.ಬಿ.ಎಸ್‌.ಪಾಟೀಲ್‌, ಲೋಕಾಯುಕ್ತರು

ಮೂಲಭೂತ ಹಕ್ಕು ಚಲಾಯಿಸಿ
ಮತದಾನ ಮಾಡುವ ಮೂಲಕ ಹಕ್ಕು ಚಲಾಯಿಸಿ. ಮತದಾನದಿಂದ ದೂರ ಉಳಿದರೆ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಮಾಡುವ ಅತಿ ದೊಡ್ಡ ಅನ್ಯಾಯ. ಜವಾಬ್ದಾರಿಯುತ ನಾಯಕರನ್ನು ಆಯ್ಕೆ ಮಾಡಿ.
-ಡಾ. ಎಚ್‌.ಸುದರ್ಶನ ಬಲ್ಲಾಳ್‌, ಅಧ್ಯಕ್ಷರು, ಮಣಿಪಾಲ ಸಮೂಹ ಆಸ್ಪತ್ರೆಗಳು

ಪ್ರತಿಯೊಂದು ಮತವೂ ಮಹತ್ವದ್ದೇ
ನಮ್ಮ ವೈಯಕ್ತಿಕ ಸಂಭ್ರಮಗಳನ್ನು ಹೇಗೆ ಮಿಸ್‌ ಮಾಡಿಕೊಳ್ಳುವುದಿಲ್ಲವೋ ಅದೇ ರೀತಿ ಈ ಸಂಭ್ರಮ ವನ್ನು ಮಿಸ್‌ ಮಾಡಬಾರದು. ಮತದಾನ ಅನ್ನೋ ಮ್ಯಾಚ್‌ನಲ್ಲಿ ಒಂದೇ ಬಾಲ್‌ ಇರೋದು. ಅದರಲ್ಲೇ ಸಿಕ್ಸರ್‌ ಹೊಡಿಬೇಕು. ಪ್ರತಿಯೊಂದು ಮತವೂ ಮಹತ್ವದ್ದೇ.
-ರಮೇಶ್‌ ಅರವಿಂದ್‌, ಚಿತ್ರನಟ

ನಮಗೆ ಸಿಕ್ಕ ಶ್ರೇಷ್ಠ ಹಕ್ಕು
ಪ್ರಜಾಪ್ರಭುತ್ವದಲ್ಲಿ ನಮಗೆ ಸಿಕ್ಕ ಶ್ರೇಷ್ಠ ಹಕ್ಕು ಮತದಾನ. ಈ ಹಕ್ಕನ್ನು ನಾವು ಸರಿಯಾಗಿ ಬಳಸಿದರೆ ನ‌ಮ್ಮ ಭವಿಷ್ಯ ಚೆನ್ನಾಗಿರುತ್ತದೆ. ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ, ಗೆದ್ದ ನಂತರವೂ ಕೆಲಸ ಮಾಡುವ ವ್ಯಕ್ತಿಯನ್ನು ಆಯ್ಕೆ ಮಾಡುವತ್ತ ನಿಮ್ಮ ಮತ ಚಲಾವಣೆಯಾಗಲಿ.
-ಗಣೇಶ್‌, ಚಿತ್ರನಟ

Advertisement

5 ವರ್ಷಗಳ ಭವಿಷ್ಯ ನಮ್ಮ ಕೈಯಲ್ಲಿದೆ
ಮುಂದಿನ 5 ವರ್ಷಗಳ ದೇಶದ ಭವಿಷ್ಯ ನಮ್ಮ ಕೈಯಲ್ಲಿದೆ. ಐದು ವರ್ಷ ಕಾಲ ದೇಶ ಹೇಗಿರಬೇಕು ಎಂದು ನಿರ್ಧರಿಸಬೇಕಾದರೆ ನಾವು ಮತದಾನ ಮಾಡಬೇಕು.
-ಎಚ್‌.ನೇಹಾ, 2011ರ ಏಕಲವ್ಯ ಪ್ರಶಸ್ತಿ ವಿಜೇತ ಪವರ್‌ ಲಿಫ್ಟರ್‌

ಮತ ಮಾರಿಕೊಳ್ಳದಿರಿ
ನಿಮ್ಮ ಮತ ನಿಮ್ಮ ಹಕ್ಕು. ಯಾವ ಕಾರಣಕ್ಕೂ ಇದನ್ನು ಮಾರಿಕೊಳ್ಳದಿರಿ. ಅದರಲ್ಲೂ ಮೊದಲ ಬಾರಿಗೆ ಮತದಾನ ಮಾಡುವವರು ಎಚ್ಚರದಿಂದ ಮತ ಚಲಾಯಿಸಿ. ಮತದಾನದ ಅರಿವು ಹೆಚ್ಚಾಗಬೇಕಾದರೆ ಒಳ್ಳೆಯ ಶಿಕ್ಷಣದ ಅಗತ್ಯವೂ ಇದೆ.
-“ದುನಿಯಾ’ ವಿಜಿ, ಚಿತ್ರನಟ

Advertisement

Udayavani is now on Telegram. Click here to join our channel and stay updated with the latest news.

Next