Advertisement
ಯಾವುದೇ ಗೊಂದಲಗಳಿಲ್ಲದ ಒಂದೇ ಹೆಸರಿರುವ ಕ್ಷೇತ್ರಗಳನ್ನು ಮಾತ್ರ ಅಂತಿಮಗೊಳಿಸಿರುವ ಕಾಂಗ್ರೆಸ್, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆಯಂತೂ ನೀಡಿದೆ. ಆದರೆ ಅಂತಿಮಗೊಳ್ಳದೆ ಉಳಿದಿರುವ 21 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿದೆ. ಇದರಲ್ಲಿ ಪ್ರತಿಷ್ಠಿತ ಕಣಗಳಿವೆ. ಕೆಲವೆಡೆ ಸಚಿವರನ್ನು ಅಗ್ನಿಪರೀಕ್ಷೆಗೆ ಗುರಿಪಡಿಸಲಿರುವ ಅಖಾಡಗಳೂ ಇವೆ. ಎದುರಾಳಿಗಳ ನಡೆಯನ್ನು ಕಾದುನೋಡುವ ತಂತ್ರವೂ ಹೈಕಮಾಂಡ್ ನಡೆಯ ಹಿಂದಿದೆ ಎನ್ನಲಾಗಿದೆ.
ಲೋಕಸಭೆ ಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಮೊದಲ ಪಟ್ಟಿಯಲ್ಲಿ ಇನ್ನಷ್ಟು ಹೆಸರು ಪ್ರಕಟವಾಗಬೇಕಿತ್ತು. ಮಾ. 11ರಂದು ಸ್ಕ್ರೀನಿಂಗ್ ಕಮಿಟಿ ಸಭೆ ಬಳಿಕ ಆ ಹೆಸರುಗಳು ಅಂತಿಮವಾಗಲಿವೆ ಎಂದು ಶುಕ್ರವಾರ ಡಿ.ಕೆ. ಶಿವಕುಮಾರ್ ಹೇಳಿದರು.
Related Articles
Advertisement
17 ಕ್ಷೇತ್ರಗಳಿಗೆ ನೀವು ಪಟ್ಟಿ ತೆಗೆದುಕೊಂಡು ಹೋಗಿದ್ದಿರಿ ಎಂದು ಕೇಳಿದಾಗ, ನಾನು ಎಷ್ಟು ಪಟ್ಟಿ ತೆಗೆದುಕೊಂಡು ಹೋಗಿದ್ದೆ ಎಂಬುದು ಮುಖ್ಯವಲ್ಲ. ಇದು ನನ್ನ ಪಕ್ಷ ಅಲ್ಲ. ನಮ್ಮ ಹೈಕಮಾಂಡ್ ನಾಯಕರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಕೆ.ಸಿ. ವೇಣುಗೋಪಾಲ್, ರಾಹುಲ್ ಗಾಂಧಿ ಸಹಿತ ಅನೇಕ ನಾಯಕರು ಚರ್ಚೆ ಮಾಡುತ್ತಾರೆ. ನಾವು ಕೇವಲ ಅಭ್ಯರ್ಥಿಗಳ ಹೆಸರನ್ನು ಪ್ರಸ್ತಾವ ಮಾಡುತ್ತೇವೆ ಅಷ್ಟೇ. ನಮ್ಮ ಪಕ್ಷದ ಸಿಇಸಿ ಸಮಿತಿ ಸದಸ್ಯರು ಅವರದೇ ಆದ ಮೂಲಗಳಿಂದ ಮಾಹಿತಿ ಪಡೆದುಕೊಂಡಿರುತ್ತಾರೆ. ಇವರೆಲ್ಲ ಸೇರಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.
ಈಗ ಪ್ರಕಟವಾಗಿರುವ 7 ಕ್ಷೇತ್ರಗಳ ಪೈಕಿ ಎಷ್ಟರಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಕೇಳಿದಾಗ, ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂದರು.