Advertisement

ಜಿಲ್ಲೆಯಲ್ಲಿ ಕಾಣುತ್ತಿದೆ ಮೈತ್ರಿ ಅಭ್ಯರ್ಥಿ ಗೆಲುವಿನ ಅಲೆ

04:53 PM Apr 15, 2019 | Naveen |

ದಾವಣಗೆರೆ: ಈಗ ನಡೆಯುತ್ತಿರುವ ಹಣಬಲ ಮತ್ತು ಜನಬಲದ ಚುನಾವಣೆಯಲ್ಲಿ ಜನಬಲದ ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಚ್‌.ಬಿ. ಮಂಜಪ್ಪ ಗೆಲುವು ಖಚಿತ ಎಂದು ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಶಾಮನೂರು ಟಿ. ಬಸವರಾಜ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಚ್‌.ಬಿ. ಮಂಜಪ್ಪ ಸಾಮಾನ್ಯ, ಹಿಂದುಳಿದ ವರ್ಗದ ರೈತ ಕುಟುಂಬದಿಂದ ಬಂದವರು. ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾಗಿ ಆಡಳಿತ ಅನುಭವ ಹೊಂದಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಗೆಲುವು ಖಚಿತ ಎನ್ನುವ ಅಲೆ ಕಾಣುತ್ತಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಸದ ಜಿ.ಎಂ. ಸಿದ್ದೇಶ್ವರ್‌ 10 ಸಾವಿರ ಕೋಟಿ ಅನುದಾನ ತಂದಿರುವುದಾಗಿ ಹೇಳುತ್ತಿದ್ದಾರೆ. ಸಿದ್ದೇಶ್ವರ್‌ ಅವರು ಮನೆಯಲ್ಲಿ ಮಲಗಿದ್ದರೂ ಬರಬೇಕಾದ 10 ಸಾವಿರ ಕೋಟಿ ಬಂದೇ ಬರುತ್ತದೆ. ಅವರು ಖುದ್ದು ವಿಶೇಷ ಮುತುವರ್ಜಿ ವಹಿಸಿ ತಂದಿರುವ ಅನುದಾನ, ಮಾಡಿರುವ ಅಭಿವೃದ್ಧಿ ಕಾರ್ಯಗಳು ಎಷ್ಟು ಎಂಬುದು ಮುಖ್ಯ ಎಂದು ಹೇಳಿದರು.

ಕಾಂಗ್ರೆಸ್‌ನವರು ನಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಿದ್ದೇಶ್ವರ್‌ ಹೇಳುತ್ತಿದ್ದಾರೆ. ಅವರು ಹೇಳಿಕೊಳ್ಳುತ್ತಿರುವಂತೆ ಎಲ್ಲಾ ಇಲಾಖೆಗಳಿಂದ ಬಿಡುಗಡೆಯಾಗಿರುವ ಅನುದಾನ ಲೆಕ್ಕ ಹಾಕಿದರೆ ನಮ್ಮದು 40 ಸಾವಿರ ಕೋಟಿ ಆಗುತ್ತದೆ. ಸಿದ್ದೇಶ್ವರ್‌ ಏನಾದರೂ ವಿಶೇಷವಾಗಿ ಪ್ರಯತ್ನ ಮಾಡಿ ಸಾವಿರಾರು ಕೋಟಿ
ಅನುದಾನ, ಜಿಲ್ಲೆಯಲ್ಲಿ ಒಂದು ಕಾರ್ಖಾನೆ ಮಾಡಿದ್ದರೆ ಅದನ್ನು ನಾವೇ ಸ್ವಾಗತ ಮಾಡುತ್ತಿದ್ದೆವು. ಆದರೆ, ಯಾವುದೇ ಅನುದಾನ ತರದೆ, ಅಭಿವೃದ್ಧಿ ಕೆಲಸ ಮಾಡದೇ ಇರುವ ಕಾರಣಕ್ಕಾಗಿಯೇ ಅವರು ಮೋದಿ ನೋಡಿ ಮತ ಹಾಕಿ ಎಂದು ಕೇಳುತ್ತಿದ್ದಾರೆ ಎಂದು ದೂರಿದರು.

ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಸಾಕಷ್ಟು ಶ್ರಮ ವಹಿಸಿ ಜಲಸಿರಿ ಯೋಜನೆಗೆ 224 ಕೋಟಿ, ಬೀರೂರು- ಸಮ್ಮಸಗಿ ರಸ್ತೆ ನಿರ್ಮಾಣ, ಗಾಜಿನಮನೆ, ಆಶ್ರಯ ಯೋಜನೆ, ಭೂಗತ ಕೇಬಲ್‌, ಮೇಲ್ಸೇತುವೆ, 22 ಕೆರೆ ಏತ ನೀರಾವರಿ ಯೋಜನೆಗೆ ಕೋಟ್ಯಾಂತರ ಅನುದಾನ ತಂದಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ಆರ್‌.ಎಚ್‌. ನಾಗಭೂಷಣ್‌ ಮಾತನಾಡಿ, ಎಸ್‌.ಎಸ್‌. ಮಲ್ಲಿಕಾರ್ಜುನ್‌ ಎಂದರೆ ಅಭಿವೃದ್ಧಿ. ಅಭಿವೃದ್ಧಿ ಎಂದರೆ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಎನ್ನುವಂತೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಲ್ಪ ಮತಗಳಲ್ಲಿ ಸೋತಿದ್ದರಿಂದ ಮನಸ್ಸಿಗೆ ನೋವು ಮಾಡಿಕೊಂಡಿದ್ದಾರೆ. ಅವರ ಸೋಲು ದಾವಣಗೆರೆಯ ಅಪಮಾನ ಎಂದರೆ ತಪ್ಪಾಗಲಾರದು. ಅವರ ಬೆಂಬಲಿತ ಅಭ್ಯರ್ಥಿ ಎಚ್‌.ಬಿ. ಮಂಜಪ್ಪ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಕೆಪಿಸಿಸಿ ಕಾರ್ಯದರ್ಶಿ ಡಿ. ಬಸವರಾಜ್‌, ಮಹಾನಗರ ಪಾಲಿಕೆ ಮಾಜಿ ಸದಸ್ಯ ಡಿ.ಎನ್‌. ಜಗದೀಶ್‌, ಜಯಪ್ರಕಾಶ್‌, ಲಿಯಾಖತ್‌ ಅಲಿ, ಡಿ. ಶಿವಕುಮಾರ್‌, ಸಂದೀಪ್‌, ಫಾರೂಖ್‌, ಎಚ್‌. ಹರೀಶ್‌ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಬಿಜೆಪಿ ಸಾಧನೆ ಶೂನ್ಯ
ಕಾಂಗ್ರೆಸ್‌ನವರು ನಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಂಸದ ಸಿದ್ದೇಶ್ವರ್‌ ಹೇಳುತ್ತಿದ್ದಾರೆ. ಪ್ರಚಾರ ಮಾಡಲು ಅವರು ಸಾಧಿಸಿರುವುದಾದರೂ ಏನು ಎಂದು ಕೇಳಿದರೆ ಏನೂ ಇಲ್ಲ. ಕಳೆದ 15 ವರ್ಷದಿಂದ ಜಿಲ್ಲೆಯಲ್ಲಿ ಅವರ ಸಾಧನೆ ಶೂನ್ಯ. ಮಲ್ಲಿಕಾರ್ಜುನ್‌ ಅವರಗಿಂತಲೂ ಉನ್ನತ ಸ್ಥಾನದಲ್ಲಿದ್ದರೂ ಅಭಿವೃದ್ಧಿಯ ಬದ್ಧತೆ ತೋರಲಿಲ್ಲ. ಈ ಕೆಲಸ ಆಗಲೇಬೇಕು ಎಂದು ಹಠಕ್ಕೆ ಬಿದ್ದು ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ, ಅಭಿವೃದ್ಧಿ ಕೆಲಸ ಮಾಡಲಿಲ್ಲ. ಬದಲಿಗೆ ಜಿಲ್ಲಾಡಳಿತಕ್ಕೆ ಪತ್ರ ಬರೆಯುವ ಕೆಲಸ ಮಾಡಿದರು. ಲಾಟರಿ ಹೊಡೆದಂತೆ ಸಂಸದರಾಗುತ್ತಿರುವ ಅವರು ಆಟಕ್ಕುಂಟು ಲೆಕ್ಕಕ್ಕಿಲ್ಲ… ಎನ್ನುವಂತೆ ಆಗಿದ್ದಾರೆ. ಸಣ್ಣ ಮಕ್ಕಳಂತೆ ಅವರಿರವರ ಮೇಲೆ ದೂರು ಹೇಳಿದರೆ ಹೊರತು ಜಿಲ್ಲೆಯಲ್ಲಿ ಒಂದೇ ಒಂದು ಲ್ಯಾಂಡ್‌ ಮಾರ್ಕ್‌ ಕೆಲಸ ಮಾಡಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಕಾರ್ಯದರ್ಶಿ ಡಿ.
ಬಸವರಾಜ್‌ ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next