ನವದೆಹಲಿ: ನೀಟ್ ಯುಜಿ(NEET UG) ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಕೂಡಲೇ ಚರ್ಚೆಯನ್ನು ಕೈಗೆತ್ತಿಕೊಳ್ಳಬೇಕೆಂದು ವಿಪಕ್ಷಗಳು ಪಟ್ಟು ಹಿಡಿದು ಕೋಲಾಹಲ ನಡೆಸಿದ ಪರಿಣಾಮ ಶುಕ್ರವಾರ (ಜೂನ್ 28) ಲೋಕಸಭಾ ಸ್ಪೀಕರ್ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದ ಪ್ರಸಂಗ ನಡೆಯಿತು.
ಇದನ್ನೂ ಓದಿ:INDWvsSAW; ಶಫಾಲಿ ದ್ವಿಶತಕ, ಸ್ಮೃತಿ ಶತಕ: ಹರಿಣಗಳನ್ನು ಹೈರಾಣಾಗಿಸಿದ ಭಾರತೀಯ ಜೋಡಿ
ನೀಟ್ ನಲ್ಲಿ ನಡೆದ ಅಕ್ರಮದ ಕುರಿತು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕೂಡಲೇ ಚರ್ಚೆ ಕೈಗೆತ್ತಿಕೊಳ್ಳುವಂತೆ ಬೇಡಿಕೆ ಇಡಲು ಇಂಡಿಯಾ (INDIA) ಬ್ಲಾಕ್ ಮುಖಂಡರು ನಿರ್ಧರಿಸಿದ್ದರು.
ಗುರುವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ನಿವಾಸದಲ್ಲಿ ನಡೆದ ಇಂಡಿಯಾ ಬ್ಲಾಕ್ ಒಕ್ಕೂಟದ ಪಕ್ಷಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ನೀಟ್ ಅಕ್ರಮದ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕೆಂದು ವಿಪಕ್ಷಗಳು ಪಟ್ಟು ಹಿಡಿದಿದ್ದವು.
ಒಂದು ವೇಳೆ ಇಂದು ಲೋಕಸಭೆಯಲ್ಲಿ ನೀಟ್ ಕುರಿತು ಚರ್ಚಿಸಲು ಅವಕಾಶ ನೀಡದಿದ್ದರೆ, ಸದನದೊಳಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ವಿಪಕ್ಷಗಳ ಮುಖಂಡರು ಸ್ಪೀಕರ್ ಗೆ ತಿಳಿಸಿದ್ದರು.
ಈ ಬಗ್ಗೆ ಪರಿಶೀಲಿಸಿ ಅವಕಾಶ ನೀಡುವುದಾಗಿ ಸ್ಪೀಕರ್ ಓಂ ಬಿರ್ಲಾ ಹೇಳಿದ್ದು, ಸುಗಮ ಕಲಾಪ ನಡೆಯಲು ವಿಪಕ್ಷಗಳು ಸಹಕರಿಸಬೇಕೆಂದು ಮನವಿ ಮಾಡಿಕೊಂಡರು. ಆದರೆ ವಿಪಕ್ಷಗಳು ನೀಟ್ ಕುರಿತು ಚರ್ಚೆಯಾಗಬೇಕೆಂದು ಪಟ್ಟು ಹಿಡಿದು, ಘೋಷಣೆ ಕೂಗಿ, ಕೋಲಾಹಲ ಎಬ್ಬಿಸಿದಾಗ, ಕಲಾಪವನ್ನು ಸೋಮವಾರದವರೆಗೆ ಮುಂದೂಡಿರುವುದಾಗಿ ಘೋಷಿಸಿದರು.