Advertisement

ಲೋಕ ಕಲ್ಯಾಣ ಮಂತ್ರ, ಒಂದು ಕತೆಯಂಥ ಕತೆ !

07:20 AM Jan 07, 2018 | Harsha Rao |

ವತ್ಸಾ, ಬಾ….” ಗುರುಗಳು ಅಕ್ಕರೆಯಿಂದ ಕರೆದರು.
ಈ ಹುಡುಗ ವಿಧೇಯನಾಗಿ ನಡೆದು ಬಂದು ಗುರುಗಳ ಎದುರು ನಿಂತು ನಮಸ್ಕರಿಸಿದ. ಅವನ ಮೈದಡವಿ ಆಶೀರ್ವದಿಸಿದ ಗುರುಗಳು ಹೀಗೆಂದರು, “”ನಿನ್ನ ಸೇವೆಯಿಂದ ಸಂತುಷ್ಟನಾಗಿದ್ದೇನೆ. ಇಂದು ಸಂಜೆ ನಿನಗೆ ಒಂದು ಮಂತ್ರ ಹೇಳಿಕೊಡಲಿದ್ದೇನೆ. ಅದನ್ನು ಪಠಿಸಿದರೆ, ವಿಶಿಷ್ಟ ಅನುಭೂತಿ ನಿನ್ನದಾಗುತ್ತದೆ” ಎಂದರು.

Advertisement

ಗುರುವಿನ ಈ ಮಾತು ಕೇಳಿ ಆ ಶಿಷ್ಯನಿಗೆ ಕಣ್ತುಂಬಿ ಬಂತು. “”ಗುರುವರ್ಯಾ, ನಿಮ್ಮ ಕಾಳಜಿಗೆ ಕೃತಜ್ಞತೆಗಳು. ನೀವು ಹೇಳಿಕೊಟ್ಟಿದ್ದನ್ನು ಶ್ರದ್ಧಾ ಭಕ್ತಿಯಿಂದ ಕಲಿಯುತ್ತೇನೆ. ನಿಮ್ಮ ಮಾತುಗಳನ್ನು ಶಿರಸಾವಹಿಸಿ ಪಾಲಿಸುತ್ತೇನೆ” ಎಂದ.
ಮರುದಿನ ಸಂಜೆ ಗುರುಗಳು ಹೊಸದೊಂದು ಮಂತ್ರ ಹೇಳಿಕೊಟ್ಟರು. “”ವತ್ಸಾ, ನಿನಗೆ ಈಗ ಹೇಳಿಕೊಟ್ಟಿದ್ದು ಕಲ್ಯಾಣಮಂತ್ರ. ಈ ಮಂತ್ರವನ್ನು ಶ್ರದ್ಧೆ, ಭಕ್ತಿ ಮತ್ತು ತನ್ಮಯತೆಯಿಂದ ಪಠಿಸಿದರೆ ಮೋಕ್ಷಕ್ಕೆ ದಾರಿ ಸಿಗುತ್ತದೆ. ಈ ಮಂತ್ರ ಪಠಣೆಯಿಂದ ಎಲ್ಲಾ ಬಗೆಯ ಪ್ರಾಪಂಚಿಕ ಈಷ್ಯಗಳಿಂದಲೂ ಪಾರಾಗುವುದಕ್ಕೆ ಸಾಧ್ಯವಿದೆ. ನಿನಗೀಗ ಒಂದು ಎಚ್ಚರಿಕೆಯ ಮಾತನ್ನೂ ಹೇಳಬೇಕಾಗಿದೆ. ಮೋಕ್ಷಕ್ಕೆ ದಾರಿ ತೋರಿಸುವ ಈ ಕಲ್ಯಾಣ ಮಂತ್ರವನ್ನು ಎಂಥ ಸಂದರ್ಭ ಬಂದರೂ ಬೇರೊಬ್ಬರಿಗೆ ಹೇಳಿಕೊಡಬೇಡ. ಏಕಾಂತದಲ್ಲಿರುವಾಗ ನೀನೊಬ್ಬನೇ ಇದನ್ನು ಧ್ಯಾನಿಸು. ಒಂದು ವೇಳೆ ಈ ಮಂತ್ರವನ್ನು ಉಳಿದವರಿಗೂ ಹೇಳಿಕೊಟ್ಟರೆ, ಆಗ ಸಂಕಟಗಳಿಂದ ಪಾರಾಗುವ ಸುಲಭದ ದಾರಿ ಎಲ್ಲರಿಗೂ ಗೊತ್ತಾಗಿಬಿಡುತ್ತದೆ. ಹಾಗೇನಾದರೂ ಆಗಿಬಿಟ್ಟರೆ ಕಲ್ಯಾಣ ಮಂತ್ರಕ್ಕೆ ಇರುವ ಪ್ರಾಮುಖ್ಯವೇ ಹೋಗಿ ಬಿಡುತ್ತದೆ. ಹಾಗಾಗಿ, ಯಾವುದೇ ಕಾರಣಕ್ಕೂ ಈ ಮಂತ್ರವನ್ನು ಮತ್ತೂ¤ಬ್ಬರಿಗೆ ಹೇಳಿಕೊಡಬೇಡ” ಎಂದರು.

“”ಹಾಗೆಯೇ ಆಗಲಿ ಗುರುಗಳೇ” ಎಂದು ಉತ್ತರಿಸಿದ ಶಿಷ್ಯ.
ಇದಾಗಿ ಎರಡು ದಿನಗಳ ನಂತರ ಆ ಊರಿನ ದೇವಾಲಯದ ಬಳಿ ಜನಜಾತ್ರೆಯೇ ಸೇರಿರುವುದೆಂದೂ, ಯಾವುದೋ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯುತ್ತಿದೆ ಎಂದೂ ಗುರುಗಳಿಗೆ ಸುದ್ದಿ ಬಂತು. ಅದುವರೆಗೂ, ಆ ಊರಿನಲ್ಲಿ ಯಾವುದೇ ವಿಶಿಷ್ಟ ಕಾರ್ಯಕ್ರಮ ನಡೆದರೂ ಆ ಬಗ್ಗೆ ಮುಂಚಿತವಾಗಿಯೇ ಗುರುಗಳಿಗೆ ಸುದ್ದಿ ಕಳಿಸಲಾಗುತ್ತಿತ್ತು. ಯಾವುದೇ ಪೂರ್ವ ಸೂಚನೆಯನ್ನೂ ಕೊಡದೆ ನಡೆಸುತ್ತಿರುವ ಈ ಕಾರ್ಯಕ್ರಮ ಯಾವುದು ಎಂದು ತಿಳಿಯುವ ಕುತೂಹಲದಿಂದ ದೇವಾಲಯದ ದಾರಿಯಲ್ಲಿ ಬಂದ ಗುರುಗಳು ಎದುರಿಗೆ ಕಂಡ ದೃಶ್ಯವನ್ನು ನೋಡಿ ಪೆಚ್ಚಾದರು. ಕಾರಣ ಎರಡು ದಿನಗಳ ಹಿಂದೆಯಷ್ಟೆ ಕಲಿತಿದ್ದ ಕಲ್ಯಾಣ ಮಂತ್ರವನ್ನು ಅವರ ಪಟ್ಟಶಿಷ್ಯ, ನೆರೆದಿದ್ದ ನೂರಾರು ಮಂದಿಗೆ ಹೇಳಿಕೊಡುತ್ತಿದ್ದ. 
“”ಈ ಮಂತ್ರ ಪಠಣದಿಂದ ಪ್ರಾಪಂಚಿಕ ಕಷ್ಟಗಳು ದೂರವಾಗುತ್ತವೆ ಎಂದು ನನ್ನ ಗುರುಗಳು ತಿಳಿಸಿದ್ದಾರೆ. ಹಾಗಾಗಿ, ಎಲ್ಲರೂ ಇದನ್ನು ತಪ್ಪದೇ ಕಲಿಯಿರಿ” ಎಂದು  ಕಿವಿಮಾತನ್ನೂ ಹೇಳುತ್ತಿದ್ದ !

ತಮ್ಮ ಶಿಷ್ಯ ಎಚ್ಚರಿಕೆಯ ಮಾತಿಗೆ ಕಿಂಚಿತ್ತೂ  ಬೆಲೆ ಕೊಡದೆ ಮೋಕ್ಷಕ್ಕೆ ದಾರಿ ತೋರುವ ಮಂತ್ರವನ್ನು ನೂರಾರು ಮಂದಿಗೆ ಹೇಳಿಕೊಟ್ಟ ಶಿಷ್ಯನ ಬಗ್ಗೆ ಗುರುಗಳಿಗೆ ಸಿಟ್ಟು  ಬಂತು. ಅವನ ಉಪದೇಶ  ಮುಗಿಯುತ್ತಿದ್ದಂತೆಯೇ “”ವತ್ಸಾ, ರಾಮಾನುಜಾ… ಏನಿದು ನಿನ್ನ ವರ್ತನೆ? ನಿನ್ನೆ ನಾನು ಹೇಳಿದ್ದ ಎಚ್ಚರಿಕೆಯ ಮಾತು ಇಷ್ಟು ಬೇಗ ಮರೆತು ಹೋಯಿತೆ? ಕಲ್ಯಾಣ ಮಂತ್ರವನ್ನು ಬೇರೆ ಯಾರಿಗೂ ಹೇಳಿಕೊಡಬೇಡ ಎಂದು ಎಚ್ಚರಿಸಿದ್ದೆ ತಾನೆ?” ಎಂದರು.

“”ಗುರುವರ್ಯಾ, ನನ್ನ ಸುತ್ತಲೂ ಇರುವ ನೂರಾರು ಮಂದಿ ಬಗೆಬಗೆಯ ಕಷ್ಟಗಳಿಂದ ನರಳುವುದನ್ನು ನಿತ್ಯವೂ ನೋಡುತ್ತಿದ್ದೇನೆ. ಅದನ್ನೆಲ್ಲ ಕಂಡ ಮೇಲೂ ಕಲ್ಯಾಣ ಮಂತ್ರದ ಲಾಭವನ್ನು ಒಬ್ಬನೇ ಪಡೆದುಕೊಳ್ಳಲು ನನಗೆ ಮನಸ್ಸು ಬರಲಿಲ್ಲ. ಹಾಗಾಗಿಯೇ ಅದನ್ನು ಎಲ್ಲರಿಗೂ ಹೇಳಿಕೊಟ್ಟೆ. ನನ್ನ ವರ್ತನೆ ಉದ್ಧಟತನದ್ದು ಅನ್ನಿಸಿದರೆ ದಯವಿಟ್ಟು ಕ್ಷಮಿಸಿ…” ಈ ಶಿಷ್ಯ ಕೈ ಮುಗಿದು ಪ್ರಾರ್ಥಿಸಿದ.

Advertisement

“”ನೆಮ್ಮದಿಯನ್ನು ಲೋಕಕ್ಕೆ ಹಂಚಬೇಕು ಎಂಬ ನಿನ್ನ ಸದಾಶಯವನ್ನೂ ಮೆಚ್ಚದಿರುವುದು ಹೇಗೆ?” ಎಂದುಕೊಂಡು ಗುರುಗಳೂ ಸುಮ್ಮನಾದರು.

– ಎ. ಆರ್‌. ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next