ಬೆಳ್ತಂಗಡಿ: ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು ಶೀಘ್ರ ಇತ್ಯರ್ಥಗೊಳಿಸುವ ದೃಷ್ಟಿಯಿಂದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನ್ಯಾಯಾಲಯದ ಆವರಣಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್‌ಗಳನ್ನು ಆಯೋಜಿಸಲಾಗಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ, ಪ್ರಧಾನ ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶ ದೇವರಾಜು ಎಚ್.ಎಂ. ಹೇಳಿದರು.
ಬೆಳ್ತಂಗಡಿ ನ್ಯಾಯಾಲಯದ ಆವರಣದಲ್ಲಿ ಜೂ.2ರಂದು ಕರೆದ ಜಾಗೃತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಜೂ.25ರಂದು ಬೆಳ್ತಂಗಡಿ ನ್ಯಾಯಾ ಲಯದ ಆವರಣದಲ್ಲಿ ರಾಷ್ಟ್ರೀಯ ಇ-ಮೆಗಾ ಲೋಕ ಅದಾಲತ್‌ನ್ನು ಆಯೋಜಿಸಲಾಗಿದೆ. ಅಂದು ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಚೆಕ್ ಅಮಾನ್ಯ ಪ್ರಕರಣ, ಆರ್ಥಿಕ ವಸೂಲಾತಿ ಪ್ರಕರಣ, ವಿದ್ಯುತ್ ಹಾಗೂ ನೀರಿನ ಶುಲ್ಕ ಸಂಬಂಧಿತ ಸಹಿತ ಇತರ ಪ್ರಕರಣ, ನ್ಯಾಯಾಲಯಗಳಲ್ಲಿ ಬಾಕಿ ಇರುವ ರಾಜಿಯಾಗಬಲ್ಲ ಅಪರಾಧಿಕ ಪ್ರಕರಣ, ಮೋಟಾರು ಅಪಘಾತ ಪರಿ ಹಾರ ನ್ಯಾಯಾಧೀಕರಣ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳು, ವೇತನ ಮತ್ತು ಭತ್ಯೆಗೆಗಳಿಗೆ ಸಂಬಂಧಿಸಿದ ಸೇವಾ ಪ್ರಕರಣ ಇತ್ಯಾದಿ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ಪರಿಹಾರ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಪ್ರಧಾನ ಸಿವಿಲ್ ಮತ್ತು ಜೆ.ಎಂ. ಎಫ್.ಸಿ ನ್ಯಾಯಾಧೀಶರಾದ ಸಂದೇಶ್ ಕೆ. ಮಾತನಾಡಿ, ಕಕ್ಷಿದಾರರು ಮತ್ತು ಸಾರ್ವಜನಿಕರು ಲೋಕ ಅದಾಲತ್ ಸಂಪೂರ್ಣ ಪ್ರಯೋಜನ ಪಡೆಯುವಂತೆ ಕರೆ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಪ್ರಸಾದ್ ಕೆ.ಎಸ್., ಸರಕಾರಿ ಅಭಿಯೋಜಕರಾದ ದಿವ್ಯರಾಜ್, ಆಶಿತಾ, ಕೆನರಾ ಬ್ಯಾಂಕ್ ಕಾನೂನು ಸಲಹೆಗಾರ ರಾಮಚಂದ್ರ ಶೆಣೈ ಸಹಿತ ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶೈಲೇಶ್ ಆರ್.ಟೋಸರ್ ಸ್ವಾಗತಿಸಿ, ಕಾರ್ಯಕಾರಿ ಸಮಿತಿ ಸದಸ್ಯ ಮನೋಹರ್ ಕುಮಾರ್ ವಂದಿಸಿದರು.