ಚಾಮರಾಜನಗರ: ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಪೈಕಿ ರಾಜಿ ಆಗಬಹುದಾದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಜನತಾ ನ್ಯಾಯಾಲಯದ ಮೂಲಕ ಇತ್ಯರ್ಥಗೊಳಿಸಲು ಸೆ.14ರಂದು ಲೋಕ ಅದಾಲತ್ ನಡೆಯಲಿದೆ. ಕಕ್ಷಿದಾರರು ಇದರ ಪ್ರಯೋಜನ ಪಡೆಯಬೇಕು ಎಂದು ಪ್ರಧಾನ ಮತ್ತು ಜಿಲ್ಲಾ ಸೆಷನ್ಸ ನ್ಯಾಯಾಧೀಶ ಜಿ.ಬಸವರಾಜ ತಿಳಿಸಿದರು.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವ್ಯಾಜ್ಯ ಪೂರ್ವ ಪರಿಹಾರ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಕೊಳ್ಳೇಗಾಲ, ಗುಂಡ್ಲುಪೇಟೆ, ಯಳಂದೂರು ಹಾಗೂ ಚಾಮರಾಜನಗರ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಪಕ್ಷಗಾರರ ಒಪ್ಪಿಗೆ ಮೇರೆಗೆ ಲೋಕ್ ಅದಾಲತ್‌ನಲ್ಲಿ ಸಂಧಾನಕಾರರ ಸಮ್ಮುಖದಲ್ಲಿ ಪ್ರಕರಣಗಳನ್ನು ಇತ್ಯರ್ಥಗೊಳಿಸಿಕೊಳ್ಳಬಹು ಎಂದರು.
ಮೇಲ್ಮನವಿಗೆ ಅವಕಾಶ ಇಲ್ಲ: ಲೋಕ ಅದಾಲತ್‌ನಲ್ಲಿ ಕೌಟುಂಬಿಕ ವ್ಯಾಜ್ಯ, ಜೀವನಾಂಶದ ಪ್ರಕರಣ, ಮೋಟಾರ್ ವಾಹನ ಅಪಘಾತ ಪ್ರಕರಣ ಎಂಎಂಆರ್‌ಡಿ ಪ್ರಕರಣ, ಎಲ್ಲಾ ಕ್ರಿಮಿನಲ್ ಹಾಗೂ ಸಿವಿಲ್ ಪ್ರಕರಣ ಹಾಗೂ ಚೆಕ್ ಬೌನ್ಸ್ ಪ್ರಕರಣಗಳನ್ನು ರಾಜಿ ಮಾಡಿಕೊಂಡು ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದೆ. ಅದಾಲತ್‌ನಲ್ಲಿ ಇತ್ಯರ್ಥವಾಗುವ ಪ್ರಕರಣಗಳಲ್ಲಿ ಯಾವುದೇ ಮೇಲ್ಮನವಿಗೆ ಅವಕಾಶ ಇರುವುದಿಲ್ಲ. ಅದಾಲತ್‌ನಲ್ಲಿ ಬಗೆಹರಿಸಿಕೊಂಡ ಸಿವಿಲ್ ಪ್ರಕರಣಗಳಿಗೆ ಪಾವತಿಸಲಾದ ಶೇ.75ರಷ್ಟು ನ್ಯಾಯಾಲಯ ಶುಲ್ಕವನ್ನು ವಾಪಸ್ಸು ನೀಡಲಾಗುತ್ತದೆ. ಅದಾಲತ್‌ನಲ್ಲಿ ಶೀಘ್ರವಾಗಿ ಪ್ರಕರಣ ಬಗೆಹರಿಯಲಿದೆ ಎಂದು ವಿವರಿಸಿದರು.
ವಿವಿಧ ಪ್ರಕರಣಗಳ ವಿಚಾರಣೆ: ಜಿಲ್ಲೆಯಲ್ಲಿ ಒಟ್ಟು 8614 ಸಿವಿಲ್ ಹಾಗೂ 8984 ಕ್ರಿಮಿನಲ್ ಪ್ರಕರಣಗಳು ಇತ್ಯರ್ಥವಾಗದೆ ಉಳಿದಿವೆ. ಈ ಪೈಕಿ ಸೆ.14ರಂದು ನಡೆಯಲಿರುವ ಲೋಕ ಅದಾಲತ್‌ಗೆ 1155 ಸಿವಿಲ್ ಪ್ರಕರಣಗಳನ್ನು ಹಾಗೂ 820 ಕ್ರಿಮಿನಲ್ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲು ಗುರುತಿಸಲಾಗಿದೆ ಎಂದು ಹೇಳಿದರು.
ಕಕ್ಷಿಗಾರರಲ್ಲಿ ಉತ್ತಮ ಸಂಬಂಧ: ಲೋಕ ಅದಾಲತ್‌ನಲ್ಲಿ ಕಕ್ಷಿಗಾರರು ಪರಸ್ಪರ ಸೌಹಾರ್ದತೆಯಿಂದ ಒಪ್ಪಿ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳುವುದರಿಂದ ಉಭಯ ಕಕ್ಷಿಗಾರರ ಬಾಂಧವ್ಯವೂ ಉಳಿಯಲಿದೆ. ಉತ್ತಮ ಸಂಬಂಧ ಮುಂದುವರಿಯಲಿದೆ. ಹೀಗಾಗಿ ಲೋಕ ಅದಾಲತ್‌ನಲ್ಲಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಕಕ್ಷಿಗಾರರು ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜು ಹರವೆ ಹಾಜರಿದ್ದರು.