Advertisement

Lok Adalat: ವಿಚ್ಛೇದನ ತೊರೆದು ಅದಾಲತ್‌ನಲ್ಲಿ  ಒಂದಾದ 2 ಕುಟುಂಬ

04:22 PM Sep 10, 2023 | Team Udayavani |

ಮುಳಬಾಗಿಲು: ನಗರದ ಜೆಎಂಎಫ್ಸಿ ನ್ಯಾಯಾಲ ಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಹಿರಿಯ ನ್ಯಾಯಾಧೀಶ ಪಿ.ಈಶ್ವರ್‌ ಸಮ್ಮುಖದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಎರಡು ಜೋಡಿಗಳು ವೈಮನಸ್ಸು ಮರೆತು ಒಂದಾಗಲು ನ್ಯಾಯಾಧೀಶರು ಮತ್ತು ವಕೀಲರು ಒಳಗೊಂಡಂತೆ ನ್ಯಾಯಾಲಯವೇ ಸಾಕ್ಷಿಯಾಯಿತು.

Advertisement

ಕೋಲಾರ ತಾಲೂಕು ಯಾನಾದಹಳ್ಳಿ ಗ್ರಾಮದ ವೈ.ವಿ.ಮಂಜುನಾಥ್‌ ಎಂಬಾತ 2017ರ ಅಕ್ಟೋಬರ್‌ 14ರಂದು ಮುಳಬಾಗಿಲು ತಾಲೂಕು ದೇವರಾಯಸಮುದ್ರ ಗ್ರಾಮದ ಗಾಯತ್ರಿ ಎಂಬುವರೊಂದಿಗೆ ಮದುವೆಯಾಗಿದ್ದು, ಸಂಸಾರದಲ್ಲಿ ಉಂಟಾದ ಸಣ್ಣ ಪುಟ್ಟ ಗಲಾಟೆಗಳಿಂದ ದಾಂಪತ್ಯದಿಂದ ಬೇರೆಯಾಗಲು ನಿರ್ಧರಿಸಿದ ದಂಪತಿಗಳಿಬ್ಬರೂ ವಿವಾಹ ವಿಚ್ಛೇದನಕ್ಕೆ ನ್ಯಾಯಾಲಯ ಮೊರೆ ಹೋಗಿದ್ದರು. ಅದೇ ರೀತಿ ಕಳೆದ 3 ವರ್ಷದ ಹಿಂದೆ ಮುಳಬಾಗಿಲು ತಾಲೂಕು ಮಲ್ಲೆಕುಪ್ಪ ಗ್ರಾಮದ ಆನಂದಕುಮಾರ್‌ ಮತ್ತು ರೇವತಿ ವಿವಾಹವಾಗಿದ್ದರು. ಆದರೆ ದಂಪತಿಗಳ ನಡುವೆ ಉಂಟಾದ ಕೌಟುಂಬಿಕ ಕಲಹದಿಂದ ಬೇಸರಗೊಂಡು ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಎರಡೂ ಜೋಡಿಗಳಿಗೂ ನ್ಯಾಯಾಧೀಶ ಪಿ.ಈಶ್ವರ್‌ ಕೌನ್ಸಿಲಿಂಗ್‌ ನೀಡಿದ್ದರ ಅನ್ವಯ ವೈಮಸ್ಸು ಮರೆತು ಒಂದಾದರು.

2,354 ಪ್ರಕರಣ ಇತ್ಯರ್ಥ: ಹಿರಿಯ ಸಿವಿಲ್‌ ನ್ಯಾಯಾಧೀಶ ಪಿ.ಈಶ್ವರ್‌ ಅವರ ನ್ಯಾಯಾಲಯದಲ್ಲಿ 1,175 ಪ್ರಕರಣಗಳ ಪೈಕಿ 1,137 ಪ್ರಕರಣ ಇತ್ಯರ್ಥ ಪಡಿಸಿ 1.88 ಕೋಟಿ ಹಣವನ್ನು ಇತ್ಯರ್ಥ ಪಡಿಸಿದರು. ಪ್ರಧಾನ ಸಿವಿಲ್‌ ನ್ಯಾಯಾಧೀಶ ನರಸಿಂಹಮೂರ್ತಿ ಪ್ರಧಾನ ಸಿವಿಲ್‌ ನ್ಯಾಯಾಲಯದಲ್ಲಿ 825 ಪ್ರಕರಣಗಳ ಪೈಕಿ 804 ಪ್ರಕರಣ ಇತ್ಯರ್ಥ ಪಡಿಸಿ 1,02,70,289 ರೂ. ಇತ್ಯರ್ಥ ಪಡಿಸಿದರು.

ಅದೇ ರೀತಿ ಕಿರಿಯ ಶ್ರೇಣಿ ನ್ಯಾಯಾಲಯದ 418 ಪ್ರಕರಣಗಳ ಪೈಕಿ 413 ಪ್ರಕರಣ ಇತ್ಯರ್ಥ ಪಡಿಸಿ 8,060 ರೂ. ಇತ್ಯರ್ಥ ಪಡಿಸಿದರು. ಒಟ್ಟಾರೆ ಮೂರು ನ್ಯಾಯಾಲಯಗಳ 2,418 ಪ್ರಕರಣ ಪೈಕಿ 2,354 ಪ್ರಕರಣ ಇತ್ಯರ್ಥ ಪಡಿಸಿದ್ದಾರೆ. ಹಿರಿಯ ವಕೀಲ ಕೆ.ಆರ್‌.ರಾಜಣ್ಣ, ಶೇಖರ್‌, ವೆಂಕಟರಮಣ(ಬಾಬು), ಚಂದ್ರಶೇಖರ್‌ ಪೂಜಾರಿ, ಶಂಕರ್‌, ಸರ್ಕಾರಿ ಅಭಿಯೋಜಕರಾಗಿ ಆಯ್ಕೆಯಾಗಿರುವ ಆರ್‌.ನಾಗರಾಜ್‌ ಸೇರಿದಂತೆ ಹಲವು ವಕೀಲರು ಮತ್ತು ಕಕ್ಷಿದಾರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next