Advertisement

ನಾಳೆ ರಾಜ್ಯವ್ಯಾಪಿ ಲೋಕ ಅದಾಲತ್‌

10:57 PM Jun 23, 2022 | Team Udayavani |

ಬೆಂಗಳೂರು: ವ್ಯಾಜ್ಯ ಮುಕ್ತ ಸಮಾಜ ನಿರ್ಮಾಣದ ಗುರಿ ಹೊಂದಿ ರುವ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಜೂ. 25ರಂದು  ರಾಜ್ಯಾದ್ಯಂತ ರಾಷ್ಟ್ರೀಯ ಲೋಕ ಅದಾಲತ್‌ ನಡೆಸಲಿದ್ದು, ಸುಮಾರು ಐದು ಲಕ್ಷ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಗುರಿ ಹೊಂದಿದೆ.

Advertisement

ಹೈಕೋರ್ಟ್‌ನ ಹಿರಿಯ ನ್ಯಾಯ ಮೂರ್ತಿಗಳು ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿ ಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ನ್ಯಾ| ಬಿ. ವೀರಪ್ಪ ಅವರು ಗುರುವಾರ “ಉದಯವಾಣಿ’ ಕಚೇರಿಗೆ ಭೇಟಿ ನೀಡಿದ್ದು, ಉದ್ದೇಶಿತ ಅದಾಲತನ್ನು ಸದ್ಬಳಕೆ ಮಾಡಿಕೊಳ್ಳಲು   ಮನವಿ ಮಾಡಿದರು.

ಆಸ್ತಿ ಪಾಲು, ಅಪಘಾತ ಪರಿಹಾರ ಸಹಿತ ಕೆಲವು ಸಿವಿಲ್‌ ವ್ಯಾಜ್ಯಗಳಿಗೆ ಸೀಮಿತವಾಗಿದ್ದ ಲೋಕ ಅದಾಲತ್‌ ಇಂದು ತನ್ನ ವ್ಯಾಪ್ತಿಯನ್ನು ವಿಸ್ತರಿಸಿ ಕೊಂಡಿದೆ. ಕೌಟುಂಬಿಕ ಕಲಹ, ವಿವಾಹ ವಿಚ್ಛೇದನ ಸಹಿತ ವಾಣಿಜ್ಯ ನ್ಯಾಯಾಲಯಗಳ ಭೂವ್ಯಾಜ್ಯಗಳು, ರಿಯಲ್‌ ಎಸ್ಟೇಟ್‌ ಪ್ರಾಧಿಕಾರ (ರೇರಾ) ಪ್ರಕರಣಗಳು, ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಮಂಡಳಿ (ಕೆಇಆರ್‌ಸಿ), ಟ್ರಾಫಿಕ್‌ ದಂಡ, ಗ್ರಾಹಕರ ಪರಿಹಾರ ವೇದಿಕೆ, ಮಾಹಿತಿ ಹಕ್ಕು ಆಯೋಗದಡಿ ಬಾಕಿ ಇರುವ ಪ್ರಕರಣಗಳನ್ನು ಈಗ ಲೋಕ ಅದಾಲತ್‌ಗಳ ಮೂಲಕ ಇತ್ಯರ್ಥಪಡಿಸಲಾಗುತ್ತಿದೆ ಎಂದರು.

ಕೊರೊನಾ ಸಂದರ್ಭ ದೇಶದಲ್ಲೇ ಮೊದಲ ಬಾರಿಗೆ ಮೆಗಾ ಇ-ಲೋಕ ಅದಾಲತ್‌ ನಡೆಸಿದ ಖ್ಯಾತಿ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರಕ್ಕಿದೆ. ಮೂರು ವರ್ಷಗಳಲ್ಲಿ ಲಕ್ಷಗಟ್ಟಲೆ ಪ್ರಕರಣಗಳನ್ನು ಇತ್ಯರ್ಥಪಡಿಸಿ, ಸಾವಿರಾರು ಕುಟುಂಬಗಳ ಬದುಕಿ ನಲ್ಲಿ ನೆಮ್ಮದಿ ಮೂಡಿಸಿದ್ದಲ್ಲದೆ ಸರಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ. ಜಮೆ ಮಾಡಿದೆ. ನ್ಯಾಯಾಲಯಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಿದೆ. ನ್ಯಾಯಾಂಗದ ಅಮೂಲ್ಯ ಸಮಯವನ್ನು ಉಳಿತಾಯ ಮಾಡಿದೆ ಎಂದು ಹೇಳಿದರು.

3 ವರ್ಷಗಳಲ್ಲಿ 20 ಲಕ್ಷ ಪ್ರಕರಣಗಳ ಇತ್ಯರ್ಥ :

Advertisement

2020ರಿಂದ 2022 ಮಾರ್ಚ್‌ ವರೆಗೆ ಮೂರು ವರ್ಷಗಳಲ್ಲಿ ನಡೆದ ಲೋಕ ಅದಾಲತ್‌ಗಳಲ್ಲಿ 20.24 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಇದರಿಂದ ಸಾವಿರ ಕೋಟಿಗೂ ಹೆಚ್ಚು ಹಣವನ್ನು ಪರೋಕ್ಷವಾಗಿ ಮತ್ತು ನೇರವಾಗಿ ಸರಕಾರದ ಬೊಕ್ಕಸಕ್ಕೆ ಜಮೆ ಮಾಡಲಾಗಿದೆ. ಇದಲ್ಲದೆ ಮೋಟಾರು ವಾಹನ ಕಾಯ್ದೆಯಡಿ, ಇತರ ಪ್ರಕರಣಗಳಲ್ಲಿ, ಆಸ್ತಿ ಪಾಲುದಾರಿಕೆ ಪ್ರಕರಣಗಳಲ್ಲಿ ನೊಂದವರಿಗೆ ಕೋಟ್ಯಂತರ ರೂಪಾಯಿ ಪರಿಹಾರ ದೊರಕಿಸಿಕೊಡಲಾಗಿದೆ ಎಂದರು.

ನ್ಯಾಯಾಯಲದ ಪ್ರಕರಣಗಳು ಹೊರತುಪಡಿಸಿ ಇತರ ಇಲಾಖೆ/ಪ್ರಾಧಿಕಾರಿಗಳಲ್ಲಿ 3 ವರ್ಷಗಳಿಂದ ಬಾಕಿ ಇರುವ ಪ್ರಕರಣಗಳನ್ನು ಗುರುತಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆಯ 663 ಕೋಟಿ ಪ್ರಕರಣಗಳು ಬಾಕಿ ಇದ್ದು, ಸಾವಿರ ಕೋ.ರೂ.ಗೂ ಹೆಚ್ಚು ವಸೂಲಾತಿ ಬಾಕಿ ಇದೆ. ರಾಜ್ಯ ಗ್ರಾಹಕರ ಪರಿಹಾರ ವೇದಿಕೆಯ 14 ಸಾವಿರ ಪ್ರಕರಣಗಳು, ಮಾಹಿತಿ ಹಕ್ಕು ಕಾಯ್ದೆಯಡಿಯ 30,000 ಮತ್ತು ರೇರಾ ಅಡಿಯಲ್ಲಿ 3 ಸಾವಿರ ಪ್ರಕರಣಗಳು ಬಾಕಿ ಇದ್ದು, ಇವುಗಳನ್ನು ಕೂಡ ಲೋಕ ಅದಾಲತ್‌ ಮೂಲಕ ಇತ್ಯರ್ಥಪಡಿಸಲು ಯೋಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next