Advertisement

ಸರಕು ಸಾಗಾಣೆಗೆ ಲಾಜಿಸ್ಟಿಕ್‌ ಆ್ಯಪ್‌ ಶೀಘ್ರ ಬಿಡುಗಡೆ

03:09 PM Jul 17, 2018 | |

ಚಿಕ್ಕಬಳ್ಳಾಪುರ: ರೈತರು ಉತ್ಪಾದಿಸುವ ಸರಕುಗಳನ್ನು ಅತ್ಯಂತ ಕಡಿಮೆ ದರದಲ್ಲಿ ಒಂದು ಕಡೆಯಿಂದ ಮತ್ತೂಂದು ಕಡೆ ಸಾಗಾಣೆ ಮಾಡಲು ಅನುಕೂಲವಾಗುವಂತೆ ಸಾರಿಗೆ ಇಲಾಖೆಯಿಂದ ಶೀಘ್ರದಲ್ಲಿ ಲಾಜಿಸ್ಟಿಕ್‌ ಆ್ಯಪ್‌ ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸ ಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದರು.

Advertisement

ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಸೋಮವಾರ ಸಾರಿಗೆ ಇಲಾಖೆ ವತಿಯಿಂದ ನೂತನವಾಗಿ ಆರಂಭಿಸಲಾದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯ ಉದ್ಘಾಟನೆಯ ಬೃಹತ್‌ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿ, ಖಾಸಗಿ ಲಾಜಿಸ್ಟಿಕ್‌ ಸಂಸ್ಥೆಗಳಿಂದ ರೈತರ ಸರಕು ಸಾಗಾಣಿಕೆಗೆ ದುಬಾರಿ ದರ ವಿಧಿಸಲಾಗುತ್ತಿದೆ. ಜತೆಗೆ ರೈತರಿಗೆ ಸಮರ್ಪಕ ಸೇವೆ ಕೂಡ ಸಿಗುತ್ತಿಲ್ಲ. ಹೀಗಾಗಿ ರೈತರು ಉತ್ಪಾದಿಸುವ ಉತ್ಪನ್ನಗಳನ್ನು ಕಡಿಮೆ ಬೆಲೆಯಲ್ಲಿ ಸಾಗಿಸಲು ಹಾಗೂ ಖಾಸಗಿ ದಲ್ಲಾಳಿಗಳ ಹಾವಳಿ ತಪ್ಪಿಸಲು ರೈತರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಗುಣಮಟ್ಟದ ಸೇವೆ ಒದಗಿಸಲು ಸಾರಿಗೆ ಇಲಾಖೆ ಗಂಭೀರ ಚಿಂತನೆ ನಡೆಸಿದೆ. ಇದಕ್ಕಾಗಿ ಲಾಜಿಸ್ಟಿಕ್‌ ಆ್ಯಪ್‌ ಬಿಡುಗಡೆ ಮಾಡಲಾಗುವುದು ಎಂದರು.

ಆನ್‌ಲೈನ್‌ ಮೂಲಕ ಇಲಾಖೆ ಸೇವೆ: ಈಗಾಗಲೇ ಆರ್‌ಟಿಒ ಕಚೇರಿಗಳಲ್ಲಿ ಭ್ರಷ್ಟಾಚಾರ ಹಾಗೂ ಮಧ್ಯವರ್ತಿಗಳ ಹವಾಳಿ
ತಪ್ಪಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಮನೆಗೆ ಬಾಗಿಲಿಗೆ ಸಾರಿಗೆ ಇಲಾಖೆ ಸೇವೆಯನ್ನು ತಲುಪಿಸುವ ಗುರಿಯೊಂದಿಗೆ ಇಲಾಖೆಯನ್ನು ಅಧುನಿಕ ತಂತ್ರಜ್ಞಾನದಿಂದ ಸಂಪೂರ್ಣ ಗಣಿಕೀಕೃತಗೊಳಿಸಲಾಗುತ್ತಿದೆ. ಸಾರ್ವಜನಿಕರು ಯಾವುದೇ ಕೆಲಸ ಕಾರ್ಯಗಳಿಗೆ ಕಚೇರಿಗೆ ಇನ್ನು ಮುಂದೆ ಸುತ್ತಾಡುವಂತಿಲ್ಲ. ಇದ್ದಕಡೆಯೇ ಇಲಾಖೆ ಸೇವೆಯನ್ನು ಆನ್‌ಲೈನ್‌ ಮೂಲಕ ಪಡೆಯಬಹುದು. ಶುಲ್ಕವನ್ನು ಸಹ ಆನ್‌ಲೈನ್‌ ಮೂಲಕ ಪಾವತಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಖಾಸಗಿ ಬಸ್‌ ನಿಗಾಕ್ಕೆ ಟೋಲ್‌ಗ‌ಳಲ್ಲಿ ಮೈಕ್ರೋ ಚಿಪ್‌: ಖಾಸಗಿ ಬಸ್‌ ಸಂಚಾರದ ಮೇಲೆ ತೀವ್ರ ನಿಗಾ ವಹಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಟೋಲ್‌ಗ‌ಳಲ್ಲಿ ಮೈಕ್ರೋ ಚಿಪ್‌ ಅಳವಡಿಸುವ ಮೂಲಕ ಖಾಸಗಿ ಬಸ್‌ಗಳ ಸಂಚಾರದ ಮೇಲೆ ತೀವ್ರ ನಿಗಾವಹಿಸಲಾಗುವುದು. ಸಾರಿಗೆ ಸಚಿವನಾಗಿ ಕೇವಲ ಒಂದು ತಿಂಗಳಾಗಿದೆ. ನಾನು ಎಲ್ಲಾವನ್ನು ಮಾಧ್ಯಮಗಳ ಮೂಲಕವೇ ತಿಳಿದುಕೊಳ್ಳುತ್ತಿದ್ದೇನೆ. ಸಾರಿಗೆ ಇಲಾಖೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸಮ್ಮಿಶ್ರ ಸರ್ಕಾರ ಪ್ರಾಮಾಣಿಕವಾಗಿ ಕೆಲಸ ಮಾಡಲಿದೆ ಎಂದರು.

ಏರ್‌ಹೌಸ್‌ಗಳ ನಿರ್ಮಾಣಕ್ಕೆ ಚಿಂತನೆ: ರೈತ ಕುಟುಂಬದಿಂದ ಬಂದಿರುವ ನಾನು ಶ್ರೀಮಂತಿಕೆಯಿಂದ ಬೆಳೆದರೂ ಗ್ರಾಮೀಣ
ಜನರ ಕಷ್ಟಸುಖಗಳನ್ನು ಅರಿತಿದ್ದೇನೆ. ಸಾರಿಗೆ ಇಲಾಖೆ ಶ್ರೀಮಂತರಿಗಾಗಿ ಇಲ್ಲ. ಜನ ಸಾಮಾನ್ಯರಿಂದಲೇ ಇಂದು ಸಾರಿಗೆ ಸಂಸ್ಥೆಗಳು ಉಸಿರಾಡುತ್ತಿದೆ ಎನ್ನುವ ಸತ್ಯ ನನಗೆ ಗೊತ್ತಿದೆ. ರೈತ ಸ್ನೇಹಿಯಾಗಿ ಸಾರಿಗೆ ಇಲಾಖೆಯನ್ನು ಉತ್ಕೃಷ್ಟಗೊಳಿಸುವುದು ಸಮ್ಮಿಶ್ರ ಸರ್ಕಾರದ ಮೊದಲ ಗುರಿಯಾಗಿದೆ. ರಾಜ್ಯದ ಟ್ರಕ್‌ ಟರ್ಮಿನಲ್‌ಗ‌ಳ ಸಮೀಪ ರೈತರು ಉತ್ಪನ್ನಗಳನ್ನು ಶೇಖರಿಸಿಡುವ ನಿಟ್ಟಿನಲ್ಲಿ ಅನುಕೂಲವಾಗುವಂತೆ ಏರ್‌ಹೌಸ್‌ಗಳ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಿದರು.

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ಶಾಸಕರಾದ ವಿಧಾನಸಭೆ ಉಪಸಭಾಪತಿ ಜೆ.ಕೆ ಕೃಷ್ಣಾರೆಡ್ಡಿ ವಹಿಸಿದ್ದರು. ವಿಧಾನ ಪರಿಷತ್ತು ಸದಸ್ಯ ತೂಪಲ್ಲಿ ಆರ್‌.ಚೌಡರೆಡ್ಡಿ, ನಗರಸಭೆ ಅಧ್ಯಕ್ಷೆ ಸುಜಾತ ಶಿವಣ್ಣ, ಅಪರ ಸಾರಿಗೆ ಆಯುಕ್ತ ನರೇಂದ್ರ ಹೋಳ್ಕರ್‌, ಜಂಟಿ ಸಾರಿಗೆ ಆಯುಕ್ತ ಸಿ.ಮಲ್ಲಿಕಾರ್ಜುನ್‌, ದಕ್ಷಿಣ ವಲಯದ ಸಾರಿಗೆ ಆಯುಕ್ತ ಸಿ.ಪಿ.ನಾರಾಯಣಸ್ವಾಮಿ, ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಪಿ.ಜಿ.ಪಾಂಡುರಂಗಶೆಟ್ಟಿ, ಚಿಂತಾಮಣಿ ಸಹಾಯಕ ಪ್ರಾದೇಶಿಕ ಸಾರಿಗೆ ಟಿ.ತಿಮ್ಮರಾಯಪ್ಪ, ತಹಶೀಲ್ದಾರ್‌ ವಿಶ್ವನಾಥ್‌, ಚಿಂತಾಮಣಿ ವಿಭಾಗದ ಡಿವೈಎಸ್‌ಪಿ ನಾಗೇಶ್‌, ಶಿಡ್ಲಘಟ್ಟ ನಗರಸಭೆ ಅಧ್ಯಕ್ಷೆ ಅಪ್ಪರ್‌ಪಾಷ, ನಗರಸಭೆ ಸದಸ್ಯರಾದ ಅರುಣ ಮಂಜುನಾಥ, ಜೆಸಿಬಿ ನಟರಾಜ್‌, ಆರ್‌.ಪ್ರಕಾಶ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next