Advertisement

ಪ್ಲಾಸ್ಟಿಕ್‌ ಬ್ಯಾಗ್‌ ಘಟಕಕ್ಕೆ ಬೀಗ

10:33 AM Mar 10, 2019 | Team Udayavani |

ಬಳ್ಳಾರಿ: ನಗರದ ವಿವಿಧೆಡೆ ಸಂಗ್ರಹಿಸಲಾಗಿದ್ದ ಪ್ಲಾಸ್ಟಿಕ್‌ ಉತ್ಪನ್ನಗಳ ಮೇಲೆ ದಾಳಿ ನಡೆಸಿದ ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಲಕ್ಷಾಂತರ ರೂ. ಮೌಲ್ಯದ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ಗಳನ್ನು ಶನಿವಾರ ವಶಕಡಪಸಿಕೊಂಡು, ಉತ್ಪನ್ನ ಘಟಕವನ್ನು ಸೀಜ್‌ ಮಾಡಿದರು.

Advertisement

ಪಾಲಿಕೆ ಆಯುಕ್ತೆ ತುಷಾರಮಣಿ ನೇತೃತ್ವದಲ್ಲಿ ಆರೋಗ್ಯ ಅಧಿಕಾರಿ ಹನುಮಂತಪ್ಪ, ಪರಿಸರ ಅಧಿಕಾರಿ ಅವಿನಾಶ್‌, ಆರೋಗ್ಯ ನಿರೀಕ್ಷಕ ಕುಮಾರಸ್ವಾಮಿ, ನಗರದ ಎಪಿಎಂಸಿ ಹಿಂಭಾಗದ ಕೈಗಾರಿಕಾ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ಉತ್ಪಾದನಾ ಘಟಕದ ಮೇಲೆ ದಾಳಿ ನಡೆಸಿ ಲಕ್ಷಾಂತರ ರೂ. ಮೌಲ್ಯದ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ವಶಪಡಿಸಿಕೊಂಡು ಘಟಕದಲ್ಲಿ ಪ್ಲಾಸ್ಟಿಕ್‌ ಬ್ಯಾಗ್‌ ಉತ್ಪಾದಿಸುತ್ತಿದ್ದ ಯಂತ್ರಗಳನ್ನು ನಿಲ್ಲಿಸಿದರು.

ನಂತರ ಘಟಕಕ್ಕೆ ಸಂಬಂಧಿಸಿದಂತೆ ಪರವಾನಗಿ ಪತ್ರ ಪರಿಶೀಲಿಸಿದ ಆಯುಕ್ತರು, ನವೀಕರಿಸಿಲ್ಲ ಎಂದು ಖಚಿತವಾಗುತ್ತಿದ್ದಂತೆ ಉತ್ಪಾದನೆಯಾಗಿದ್ದ ಕ್ಯಾರಿಬ್ಯಾಗ್‌ ಗಳನ್ನೆಲ್ಲ ವಶಕ್ಕೆ ಪಡೆದು ಪಾಲಿಕೆ ಟ್ರ್ಯಾಕ್ಟರ್‌ ಮೂಲಕ ವೇಣಿ ವೀರಾಪುರದಲ್ಲಿನ ಕಾಂಪೋಸ್ಟ್‌ ಯಾರ್ಡ್‌ಗೆ ಸಾಗಿಸಿದರು.
ಬಳಿಕ ಘಟಕಕ್ಕೆ ಬೀಗ ಜಡಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗ ಮಾತನಾಡಿದ ಪಾಲಿಕೆ ಆಯುಕ್ತೆ ತುಷಾರಮಣಿ, ರಾಜ್ಯ ಸರ್ಕಾರ
ಎಲ್ಲ ರೀತಿಯ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌, ಪ್ಯಾಕಿಂಗ್‌ ವಸ್ತುಗಳನ್ನು ನಿಷೇಧಿಸಿ ಮೂರು ವರ್ಷಗಳು ಕಳೆದಿವೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ನಗರದ ಎಪಿಎಂಸಿ ಹಿಂಭಾಗದ ಕೈಗಾರಿಕಾ ಪ್ರದೇಶದಲ್ಲಿ ಪಟೇಲ್‌ ಪಾಲಿಮಾರ್‌ ಹೆಸರಿನ ಪ್ಲಾಸ್ಟಿಕ್‌ ಉತ್ಪಾದನಾ ಘಟಕದಲ್ಲಿ ಕ್ಯಾರಿಬ್ಯಾಗ್‌ ಉತ್ಪಾದಿಸುತ್ತಿರುವುದು ಕಂಡು ಬಂದಿದೆ. ಇದು ಕಾನೂನು ಬಾಹಿರವಾಗಿದ್ದು, ಮುಂದೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಜತೆಗೆ ಪರಿಸರ
ಮಾಲಿನ್ಯ ನಿಯಂತ್ರಣ ಮಂಡಳಿ ಸಂಪರ್ಕಿಸಿ ಘಟಕದಲ್ಲಿ ಉತ್ಪಾದಿಸುತ್ತಿರುವ ನಿಷೇಧಿತ ಕ್ಯಾರಿಬ್ಯಾಗ್‌ ಉತ್ಪಾದನೆ ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದರು.

ಈ ಕುರಿತು ಪರಿಸರ ನಿಯಂತ್ರಣ ಮಂಡಳಿ ಅಧಿಕಾರಿಗಳ ಗಮನಕ್ಕೆ ಸೆಳೆದಾಗ ಈ ಘಟಕ್ಕೆ ನೀಡಿರುವ ಅನುಮತಿ 2016ಕ್ಕೆ ಪೂರ್ಣಗೊಂಡಿದೆ ಎಂದು ತಿಳಿದು ಬಂದಿದ್ದು, ಪರವಾನಗಿ ನವೀಕರಿಸಿಕೊಳ್ಳದೆ ಘಟಕದಲ್ಲಿ ಉತ್ಪಾದನೆ ಮುಂದುವರಿಸಲಾಗಿದೆ. ಅಲ್ಲದೆ, ನಿಷೇಧಿತ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ಉತ್ಪಾದಿಸಲಾಗುತ್ತಿದೆ. ಘಟಕಕ್ಕೆ ಯಾವುದೇ ಹೆಸರನ್ನು ಬರೆಸಿಲ್ಲ. ಸಂಬಂಧಪಟ್ಟ ಇಲಾಖೆಗಳಿಂದ ಪಡೆಯಲಾಗಿರುವ ಪರವಾನಗಿಯನ್ನು ಘಟಕದಲ್ಲಿ
ಪ್ರದರ್ಶಿಸಿಲ್ಲ. ಉತ್ಪಾದಿತ ಕ್ಯಾರಿಬ್ಯಾಗ್‌ ಮೇಲೆ ಘಟಕಕ್ಕೆ ಸಂಬಂಧಿಸಿದ್ದ ಯಾವುದೇ ಮಾಹಿತಿ ಮುದ್ರಿಸುತ್ತಿಲ್ಲ. ಘಟಕ ಅನಧಿಕೃತವಾಗಿ ನಡೆಯುತ್ತಿದೆ. ಕೂಡಲೇ ಘಟಕದ ಮೇಲೆ ಪಾಲಿಕೆಯಿಂದ ಕ್ರಮ ಕೈಗೊಳ್ಳಲಾಗುವುದು. 

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೀಡಲಾಗಿರುವ ಪರವಾನಗಿ ರದ್ದುಗೊಳಿಸಿ, ಘಟಕವನ್ನು ಸೀಜ್‌ ಮಾಡಲಾಗುವುದು ಎಂದು ತಿಳಿಸಿದರು. ಇದಕ್ಕೂ ಮುನ್ನ ನಗರದ ಎಪಿಎಂಸಿ ಬಳಿಯ ಟ್ರಾನ್ಸ್‌ಪೊರ್ಟ್‌ ಒಂದರಲ್ಲಿ ಸಂಗ್ರಹಿಸಲಾಗಿದ್ದ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ವಶಕ್ಕೆ ಪಡೆಯಲಾಯಿತು. ಈ ವೇಳೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಾಯಕ ಫಿಲ್ಡ್‌ ಅಧಿಕಾರಿ ಸೋಮಶೇಖರ್‌, ಪಾಲಿಕೆಯ ಆರೋಗ್ಯ ನಿರೀಕ್ಷಕರು, ಸಿಬ್ಬಂದಿ ಇದ್ದರು.

Advertisement

ಎಪಿಎಂಸಿ ಹಿಂಭಾಗದ ಕೈಗಾರಿಕಾ ಪ್ರದೇಶದಲ್ಲಿ ಪಟೇಲ್‌ ಪಾಲಿಮಾರ್‌ ಹೆಸರಿನ ಪ್ಲಾಸ್ಟಿಕ್‌ ಉತ್ಪಾದನಾ ಘಟಕದಲ್ಲಿ ಕ್ಯಾರಿಬ್ಯಾಗ್‌ ಉತ್ಪಾದಿಸುತ್ತಿರುವುದು ಕಂಡು ಬಂದಿದೆ. ಇದು ಕಾನೂನು ಬಾಹಿರವಾಗಿದ್ದು, ಮುಂದೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಜತೆಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸಂಪರ್ಕಿಸಿ ಘಟಕದಲ್ಲಿ ಉತ್ಪಾದಿಸುತ್ತಿರುವ ನಿಷೇಧಿತ ಕ್ಯಾರಿಬ್ಯಾಗ್‌ ಉತ್ಪಾದನೆ ಸ್ಥಗಿತಗೊಳಿಸಲಾಗುವುದು.
 ತುಷಾರಮಣಿ, ಪಾಲಿಕೆ ಆಯುಕ್ತೆ, ಬಳ್ಳಾರಿ.

Advertisement

Udayavani is now on Telegram. Click here to join our channel and stay updated with the latest news.

Next