ಲಾಕ್‌ಡೌನ್‌ನಿಂದ ಯಾರು ಏನೇನು ಮಾಡಿದರೋ, ತಿಳಿಯದು. ನಾವು ಮಾತ್ರ ಈ ಬಿಡುವಿನ ಸಮಯದಲ್ಲಿ ಬುಕ್ ಶೆಲ್ಫ್ ಗಳನ್ನು ಸ್ವತ್ಛ ಮಾಡಿ, ಅಷ್ಟೂ ಪುಸ್ತಕಕ್ಕೆ ಬೈಂಡ್ ಹಾಕಿದೆವು. ನಮ್ಮ ಮನೆಯಲ್ಲಿ ನಮ್ಮಿಬ್ಬರಿಗೂ ಓದುವ ಹುಚ್ಚು ಬಹಳವಿತ್ತು. ಆ ಪುಸ್ತಕ ಪ್ರೀತಿಯೇ ನಮ್ಮ ಪ್ರೇಮ ವಿವಾಹಕ್ಕೆ ಕಾರಣ ಅನ್ನಬಹುದು. ಪುಸ್ತಕ ಓದುವ ಗೀಳು ಮಕ್ಕಳಿಗೆ ಹಿಡಿಯಿತಾದರೂ, ಅವರು ಪುಸ್ತಕಗಳಿಗಿಂತ ಕಿಂಡಲ್ ಅನ್ನು ಮೆಚ್ಚಿಕೊಂಡರು. ಹಾಗಾಗಿ, ಮನೆಯ ಪುಟ್ಟ ಗ್ರಂಥಾಲಯದಲ್ಲಿ ನನ್ನ ಮತ್ತು ಯಜಮಾನರ ಆಯ್ಕೆಯ ಪುಸ್ತಕಗಳೇ ಹೆಚ್ಚಿರುವುದು.
ಇತ್ತೀಚಿನ ಕೆಲ ವರ್ಷಗಳಲ್ಲಿ ಓದುವುದು ಕಡಿಮೆಯಾಗಿತ್ತಾದರೂ, ಪುಸ್ತಕ ಕೊಳ್ಳುವುದು ನಿಂತಿರಲಿಲ್ಲ. ಹಳೆ-ಹೊಸ ಲೇಖಕರ ಪುಸ್ತಕಗಳನ್ನೆಲ್ಲ ತಂದು ಪೇರಿಸಿಟ್ಟಿದ್ದೇ ಬಂತು. ಓದಲು ಸಮಯದ ಅಭಾವದ ನೆಪ! ಆಗ ಬಂತು ನೋಡಿ ಲಾಕ್‌ಡೌನ್. ಮನೆ ಮಂದಿಯೆಲ್ಲ ಒಳಗೇ ಬಂಧಿಯಾಗಿಬಿಟ್ಟೆವು. ಆಗೊಂದು ದಿನ ಟಿವಿ ನೋಡುತ್ತ ಕುಳಿತಿದ್ದ ಮಗನಿಗೆ, ಮೂಷಿಕ ರಾಯನ ದರ್ಶನವಾಯ್ತು. ಇಲಿ ಎಲ್ಲಿಂದ ಬರುತ್ತಿದೆ ಅಂತ ನೋಡಿದಾಗ, ಪುಸ್ತಕದ ಕಪಾಟಿಗೆ ಒದಗಿರಬಹದಾದ ಗತಿ ಅಂದಾಜಾಯ್ತು.
“ಅವ್ವ, ಬುಕ್ ಶೆಲ್ಫ್ ನಿಂದ ಇಲಿ ಬರ್ತಿದೆ…’ ಅಂತ ಮಗ ಕೂಗಿಕೊಂಡ. ಓಡಿ ಬಂದು ಕಪಾಟು ತೆರೆದರೆ, ಐದಾರು ಮರಿಗಳನ್ನೊಳಗೊಂಡ ಇಲಿಯ ಕುಟುಂಬ ಅಲ್ಲಿ ಬೀಡು ಬಿಟ್ಟಿತ್ತು! ಬುಕ್ ಶೆಲ್ಫ್ ಕ್ಲೀನ್ ಮಾಡಲು ಇದಕ್ಕಿಂತ ಬಿಡುವಿನ ಸಮಯ ಬೇರಿಲ್ಲ ಅಂತ ನಿರ್ಧರಿಸಿ, ಸ್ವಚ್ಛತಾ ಅಭಿಯಾನಕ್ಕೆ ಸಜ್ಜಾದೆ. ಯಜಮಾನರೂ ಕೈ ಜೋಡಿಸಿದರು. ಮೊದಲು ಇಲಿಯ ಕುಟುಂಬವನ್ನು ಸ್ಥಳಾಂತರಿಸಿ, ಧೂಳು ಒರೆಸಿ, ಎಲ್ಲ ಪುಸ್ತಕಗಳಿಗೂ ಬೈಂಡ್ ಹಾಕಿದೆವು. ಆಮೇಲೆ, ಸಾಹಿತಿ, ಸಾಹಿತ್ಯ ಪ್ರಕಾರ, ಭಾಷೆಯ ಆಧಾರದ ಮೇಲೆ ಪುಸ್ತಕಗಳನ್ನು ವಿಂಗಡಿಸಿ ಜೋಡಿಸಿದೆವು. ಓದಿರುವ ಮತ್ತು ಓದಿಲ್ಲದ ಪುಸ್ತಕಗಳು ಬೇರೆ ಬೇರೆ ಆದವು. ಓದದೇ ಇರುವ ಆ ಪುಸ್ತಕ ರಾಶಿಯನ್ನು ನೋಡಿ, ಈಗ ದಿನಕ್ಕೆ ಅರ್ಧ ಗಂಟೆಯನ್ನಾದರೂ ಓದಿಗೆ ಮೀಸಲಿಡುವ ತೀರ್ಮಾನ ಮಾಡಿದ್ದೇವೆ. ಅದರಂತೆ, ಲಾಕ್‌ಡೌನ್‌ನ ಎರಡು ತಿಂಗಳಲ್ಲಿ ಒಂದಷ್ಟು ಪುಸ್ತಕ ಓದಲು ಸಾಧ್ಯವಾಗಿದೆ.
ಪಾರ್ವತಿ