ಕಾರವಾರ: ಲಾಕ್‌ಡೌನ್‌ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮೇ 4ರ ವರೆಗೆ ಯಾವುದೇ ಬದಲಾವಣೆಗಳಿಲ್ಲ. ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ಡಾ| ಹರೀಶಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಏ. 20ರ ನಂತರ ವಾಹನಗಳ ಸಂಚಾರಕ್ಕೆ ಸಡಿಲಿಕೆ ನೀಡಲಾಗುವುದು ಎಂಬುದು ವದಂತಿಯಷ್ಟೆ. ಕೃಷಿ ಚಟುವಟಿಕೆ ಹಾಗೂ ಸಾಂಪ್ರದಾಯಿಕ ಮೀನುಗಾರಿಕೆಗೆ ಈಗಾಗಲೇ ಅನುಮತಿ ನೀಡಲಾಗಿದೆ. ಏ. 21ರ ಬಳಿಕ ಕಾರ್ಖಾನೆಗಳ ಕೆಲಸಕ್ಕೆ ಅನುಮತಿ ನೀಡಲಾಗುವುದು. ಆದರೆ ಕಾರ್ಖಾನೆಗಳು ಪ್ರತಿದಿನ ಬೆಳಗ್ಗೆಯೇ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕು. ಅಗತ್ಯ ಸಿವಿಲ್ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡಲಾಗುವುದು. ಇಲ್ಲೂ ಗುತ್ತಿಗೆದಾರರು ಥರ್ಮಲ್ ಸ್ಕ್ಯಾನರ್‌ನಿಂದ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಬೇಕು. ಕಾಮಗಾರಿ ನಡೆಯುವ ಸ್ಥಳದಲ್ಲಿಯೇ ಅವರಿಗೆ ನೆಲೆ ಕಲ್ಪಿಸಬೇಕೆಂದು ತಿಳಿಸಿದರು.
ಹತೋಟಿಯಲ್ಲಿ ಸೋಂಕು: ಜಿಲ್ಲೆಯಲ್ಲಿ ಕೋವಿಡ್-19 ಹರಡುವಿಕೆ ಹತೋಟಿಯಲ್ಲಿದೆ. 11 ಜನರ ಪೈಕಿ 9 ಜನ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಸೋಂಕಿಗೊಳಗಾದ ಗರ್ಭಿಣಿ ಕೂಡಾ ಗುಣಮುಖಳಾಗುತ್ತಿದ್ದಾಳೆ. ಇನ್ನೆರಡು ದಿನಗಳಲ್ಲಿ ಆಕೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು. ಕಾರವಾರ ನೇವಿ ಐಎನ್‌ಎಸ್ ಪತಂಜಲಿ ಆಸ್ಪತ್ರೆಯಲ್ಲಿರುವ ಆಕೆಯ ಪತಿಯ ಆರೋಗ್ಯ ಸ್ಥಿತಿ ಸಹ ಸುಧಾರಿಸಿದೆ. ಏ. 27ಕ್ಕೆ ಗಂಟಲು ದ್ರವ ಮಾದರಿಯನ್ನು ಪುನಃ ಪರೀಕ್ಷೆಗೆ ಕಳುಹಿಸಲಾಗುವುದು. ವರದಿ ನೆಗೆಟಿವ್ ಬಂದಲ್ಲಿ ಆ ವ್ಯಕ್ತಿಯನ್ನೂ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಡಿಸಿ ತಿಳಿಸಿದರು.
ಸಾಮೂಹಿಕ ಪ್ರಾರ್ಥನೆಗಿಲ್ಲ ಅವಕಾಶ: ಎಸ್ಪಿ ಶಿವಪ್ರಕಾಶ ದೇವರಾಜು ಮಾತನಾಡಿ, ರಂಜಾನ್ ತಿಂಗಳಲ್ಲಿ ಯಾರೂ ಸಾಮೂಹಿಕ ಪ್ರಾರ್ಥನೆ ಅಥವಾ ಇಫ್ತಾರ್ ಕೂಟ ನಡೆಸದಂತೆ ಸೂಚಿಸಲಾಗಿದೆ. ಗುಂಪಾಗಿ ಅಡುಗೆ ಮಾಡಿ ವಿತರಿಸುವ ಕೆಲಸಕ್ಕೂ ಅವಕಾಶವಿಲ್ಲ. ಈ ಬಗ್ಗೆ ವಕ್ಫ್ ಮಂಡಳಿ ನಿರ್ದೇಶನ ನೀಡಿದ್ದು, ಕಡ್ಡಾಯವಾಗಿ ಎಪಾಲಿಸಬೇಕು. ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.
ಕಾರವಾರದ ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್-19 ಪ್ರಯೋಗಾಲಯ ತೆರೆಯಲು ಅನುಮತಿ ದೊರೆತಿದೆ. ಪ್ರಯೋಗಾಲಯ ಸ್ಥಾಪನೆಗೆ ಹಣದ ಸಮಸ್ಯೆ ಇಲ್ಲ. ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಐಸಿಎಂಆರ್ ಪರಿಶೀಲನೆ ನಡೆಸಿದ ಬಳಿಕ ಪ್ರಯೋಗಾಲಯ ಸ್ಥಾಪನೆಯಾಗಲಿದೆ.
-ಡಾ| ಹರೀಶಕುಮಾರ್, ಡಿಸಿ
ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ಕಾರ್ಯನಿರ್ವಹಿಸಬೇಕು. ಹೆಲ್ತ್ ಕೇರ್ ಸಂಸ್ಥೆಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ಇರುತ್ತದೆ. ಖಾಸಗಿ ವೈದ್ಯರು ಆರೋಗ್ಯ ಸೇವೆ ನೀಡುವ ಮೂಲಕ ಸರಕಾರಕ್ಕೆ ನೆರವಾಗಬೇಕು. ಹಿರಿಯ ನಾಗರಿಕರು ತಮ್ಮ ಅಗತ್ಯ ಔಷಧಿಗಳನ್ನು ಪಿಡಿಒ ಮೂಲಕ ತರಿಸಿಕೊಳ್ಳಬಹುದು.
-ಎಂ. ರೋಶನ್, ಜಿಪಂ ಸಿಇಒ