Advertisement
ಶುಕ್ರವಾರ ಸಂಜೆ ಸುಮಾರು 7 ಗಂಟೆ, ನನ್ನಿಷ್ಟದ ಸಂಗೀತ ಕೇಳುತ್ತಾ, ರಾತ್ರಿಯ ಪಲ್ಯಕ್ಕೆ ತರಕಾರಿ ಹೆಚ್ಚುತ್ತಾ, ಲಾಕ್‌ಡೌನ್ ಹೋಮ್‌ವರ್ಕ್ ಮಾಡುತ್ತಿದ್ದೆ. ಆಗ ಗೆಳೆಯನ ಕರೆ ಬಂತು, “ಮಗಾ, ನಾಡಿದ್ದು ಸಂಡೇ ನನ್ ಮದ್ವೆ ಕಣೋ, ಮನೇಲೇ…’ ಅಂದ. ದೂರದ ಪುಣೆಯಲ್ಲಿ ಕೆಲಸ ಮಾಡುವ ಅವನು ಈ ಮಾತು ಹೇಳಿದಾಗ- “ನೀನ್ ಯಾವಾಗ ಬಂದೆ?’ ಎಂದೆ ಕುತೂಹಲಕ್ಕೆ. “ಆಲ್ರೆಡಿ ಒಂದ್ ತಿಂಗಳಾಯಿತು ಕಣೋ, ವರ್ಕ್ ಫ್ರಮ್ ಹೋಮು’ “ಇವಾಗೆಲ್ಲಾ ಹೆಂಗೋ? ಹುಡ್ಗಿ ಮನೇವೆವ್ರೆಲ್ಲಾ ಹೆಂಗ್ ಬರ್ತಾರೆ?’ “ಅವ್ರಿಗೆಲ್ಲಾ ಪಾಸ್ ಸಿಕ್ಕಿದೆ. ಜಾಸ್ತಿ ಜನ ಇಲ್ಲಾ ಮಗಾ, ನಾವ್ ನಾಲಕ್ ಜನ, ಅವ್ರ್ ನಾಲಕ್ ಜನ ಅಷ್ಟೇ, ಡಿ.ಸಿ. ಪರ್ಮೀಷನ್ನೂ ತಗೊಂಡಿದಿವಿ’ “ನಾವೆಲ್ಲ ಬರ್ಬೊದಾ ಅಥವಾ ಮನೆಯಿಂದಾನೆ ವಿಶ್ ಮಾಡೋದಾ?’ “ಬಾರೋ! ಬರ್ಲಿ ಅಂತಾನೇ ತಾನೇ ಕಾಲ್ ಮಾಡಿದ್ದು’ ಅಂದ ಹುಸಿ ಕೋಪದಿಂದ. ಎಷ್ಟೇ ಆದರೂ ಚಡ್ಡಿ ದೋಸ್ತ್, ಹೇಗಾದರೂ ಮಾಡಿ ಹೋಗಲೇಬೇಕು ಎಂದು ನಿರ್ಧರಿಸಿದೆ.
“ದೂರದ’ ಸಂಬಂಧಿಗಳ ಕೊಂಕುಮಾತುಗಳಿಲ್ಲ, ತಿಂಗಳಾನುಗಟ್ಟಲೆ ತಲೆಕೆಡಿಸಿಕೊಂಡು ಊಟದ ಮೆನು, ಡೆಕೋರೇಷನ್ ಪ್ಲಾನ್ ಮಾಡುವಂತಿಲ್ಲ, ವರ್ಕ್ ಫ್ರಮ್ ಹೋಮ್ ಇರುವುದರಿಂದ, ವಧು- ವರರ ರಜೆಗಳಿಗೂ ಕತ್ತರಿಯಿಲ್ಲ! ಮುಂದೆ ಜೀವನದುದ್ದಕ್ಕೂ ಮಕ್ಕಳು- ಮೊಮ್ಮಕ್ಕಳಿಗೆ, ತಮ್ಮ ಮದುವೆಯ ಬಗ್ಗೆ ಬಣ್ಣಬಣ್ಣದ ಕಥೆಗಳನ್ನು ಹೇಳುತ್ತಾ, ಹಿಂದೆಲ್ಲಾ ರಾಜರ ಕಾಲದಲ್ಲಿ ಮದುವೆಯಾಗಲು ಏಳು ಸಮುದ್ರ, ಏಳು ಪರ್ವತಗಳನ್ನೆಲ್ಲಾ ದಾಟಿ ಬರುತ್ತಿದ್ದರು. ನಾವು, ಎಪ್ಪತ್ತು ಚೆಕ್‌ಪೋಸ್ಟ್‌ಗಳನ್ನು ದಾಟಿ ಮದುವೆ ಆದೆವು ಎಂದು ಬಡಾಯಿ ಕೊಚ್ಚಿಕೊಳ್ಳಬಹುದು! ಬಂದ ಕೆಲವೇ ಕೆಲವು ಆಪ್ತೆಷ್ಟರೊಂದಿಗೆ, ಅಷ್ಟೇ ಆಪ್ತವಾಗಿ ಮಾತನಾಡಿ ಕುಶಲೋಪರಿ ವಿಚಾರಿಸಬಹುದು. ಅರ್ಧರ್ಧ ದಿನಗಟ್ಟಲೆ ನಾಟಕದ ನಗೆ ಬೀರುತ್ತಾ, ಫೋಟೋಗೆ ಪೋಸ್ ಕೊಡುತ್ತಾ ನಿಂತು ಸುಸ್ತಾಗದೆ, ನಮಗೂ ಊಟ ಉಳಿದಿರಬಹುದಾ ಎಂದು ಚಿಂತೆ ಮಾಡದೆ, ಬಂದ ಅತಿಥಿಗಳೊಂದಿಗೇ ಕುಳಿತು ಭೋಜನ ಸವಿಯಬಹುದು. ಮದುವೆಯ ದಿನ ಬೆಳಗ್ಗೆ ಗೆಳೆಯನ ಮನೆಗೆ ಹೋದರೆ, ಎಲ್ಲರ ಕೈಯ್ಯಲ್ಲೂ ಮೊಬೈಲು. ಪ್ರತೀ ಮೊಬೈಲಲ್ಲೂ ವಿಡಿಯೋ ಕಾಲು. ಹುಡುಗನ ಅಜ್ಜಿ ಒಂದೂರಲ್ಲಿ, ಹುಡುಗಿಯ ಅಕ್ಕ ರೆಡ್‌ಝೋನ್ ನಲ್ಲಿ, ಹುಡುಗನ ಸ್ನೇಹಿತರು ವಿದೇಶದಲ್ಲಿ… ಹೀಗೆ, ಒಬ್ಬೊಬ್ಬರೂ ವಿಶ್ವದ ಒಂದೊಂದು ಮೂಲೆಯಲ್ಲಿ ಇದ್ದರೂ, ಈ ಇಂಟರ್ನೆಟ್ ಎಂಬ ಮಾಯಾಜಾಲದಿಂದ, ಈ ಮದುವೆಗೆ ಆನ್‌ಲೈನ್‌ನಲ್ಲೇ ಸಾಕ್ಷಿಯಾಗಿದ್ದರು. ಈ ಮದುವೆ ಅಗ್ನಿಸಾಕ್ಷಿಯಿಂದ ಆನ್‌ಲೈನ್ ಸಾಕ್ಷಿಗೆ ಅಪ್ ಗ್ರೇಡ್ ಆಗಿತ್ತು. ಗಟ್ಟಿಮೇಳವನ್ನೂ ಆನ್‌ಲೈನ್‌ನಿಂದಲೇ ಸ್ಟ್ರೀಮ್ ಮಾಡಲಾಗಿತ್ತು! ನನಗೆ, ಇದೊಂದು ರೀತಿಯ
ಅಲ್ಟ್ರಾಮಾಡರ್ನ್ “ಮಂತ್ರ ಮಾಂಗಲ್ಯ’ದಂತೆ ಕಂಡಿದ್ದು ಸುಳ್ಳಲ್ಲ. ಈ ಕೋವಿಡ್ ವೈರಸ್‌ನಿಂದ ವಿಶ್ವಕ್ಕೆ ಎಷ್ಟೇ ತೊಂದರೆಯಾಗಿದ್ದರೂ, ದೇಶದ ನಾನಾ ಮೂಲೆಗಳಲ್ಲಿದ್ದ ಕೆಲವು ಸ್ನೇಹಿತರು, ವರ್ಕ್ ಫ್ರಮ್ ಹೋಮ್ ದೆಸೆಯಿಂದ ಮನೆಯಲ್ಲಿಯೇ ಇದ್ದ ಕಾರಣ, ಇವನ ಮದುವೆಯ ನೆಪದಲ್ಲಾದರೂ ಒಂದೆಡೆ ಸೇರುವಂತಾಯಿತು. ಮನೆಯಲ್ಲಿಯೇ ಇದ್ದು ಜಡ್ಡುಗಟ್ಟಿದ್ದ ಮನಸ್ಸುಗಳಿಗೆ,
ಹೊಸ ಚೇತನ ಬಂದಂತಾಯಿತು. ಮಗನ/ ಮಗಳ ಮದುವೆಯನ್ನು ಅದ್ದೊರಿಯಾಗಿಯೇ ಮಾಡಬೇಕೆಂದಿದ್ದ ತಂದೆ- ತಾಯಂದಿರಿಗೆ, ಸರಳವಾಗಿ, ಸುಂದರವಾಗಿಯೇ ತಮ್ಮ ಮಕ್ಕಳ ಮದುವೆ ಮಾಡಬಹುದು ಎಂದು ಮನವರಿಕೆ ಯಾಯಿತು. ಸರಳ, ಸುಂದರ, ಆಪ್ತ ಹಾಗೂ ಶಾಂತಿಯುತವಾದ ಮದುವೆಯಲ್ಲಿ, ವಧು-ವರರಿಗೆ ಹರಸಿ, ಮದುವೆಗೆಂದು ಉಳಿಸಿಟ್ಟ ಹಣದಲ್ಲಿ, ಲಾಕ್‌ಡೌನ್ ಮುಗಿದ ನಂತರ ಒಂದೊಳ್ಳೆ ಪಾರ್ಟಿ ಕೊಡಿಸಲು ಗೆಳೆಯನ ಬಳಿ ಅರ್ಜಿ ಹಾಕಿ, ಅಲ್ಲಿಂದ ಹೊರಟೆವು.
Related Articles
Advertisement
ಸಚಿತ್ ರಾಜು