Advertisement
ಉಡುಪಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದಲ್ಲಿದ್ದು, ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದೆ. ಜನರ ಸಹಕಾರವೂ ಲಭಿಸಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 3 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಇವರೆಲ್ಲರೂ ಚೇತರಿಸಿಕೊಂಡಿದ್ದಾರೆ. ಒಬ್ಬರು ಗುಣ ಮುಖಗೊಂಡು ಆಸ್ಪತ್ರೆಯಿಂದ ಬಿಡು ಗಡೆಗೊಂಡಿದ್ದಾರೆ. ಎ.11ರಂದು ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯದಲ್ಲಿ ಎಪ್ರಿಲ್ 30ರವರೆಗೆ ಲಾಕ್‌ಡೌನ್ ವಿಸ್ತರಿಸಿರುವುದಾಗಿ ಘೋಷಣೆ ಮಾಡಿದರು. ಮಂಗಳವಾರ ಪ್ರಧಾನಿಯವರು ಮತ್ತೆ ಜನತೆಯ ಮುಂದೆ ಬಂದು ಜನರ ಆರೋಗ್ಯದ ದೃಷ್ಟಿಯಿಂದ ಮೇ 3ರವರೆಗೆ ಲಾಕ್‌ಡೌನ್ ಮುಂದುವರಿಯುವುದಾಗಿ ತಿಳಿಸಿದ್ದಾರೆ.
ಈ ನಡುವೆ ಕೋವಿಡ್-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಮತ್ತು ಜಿಲ್ಲಾಡಳಿತದಿಂದಲೂ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳು ನಡೆದಿವೆ. ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿದೆ. ಎ.11ರಂದು ಜಿಲ್ಲೆಯ ಗಡಿಗಳನ್ನು ಸಂಪೂರ್ಣ ಬಂದ್ (ಸೀಲಿಂಗ್) ಮಾಡ ಲಾಯಿತು. ಅಗತ್ಯ ಸೇವೆಗಳ ವಾಹನಗಳನ್ನು ಮಾತ್ರ ಬಿಡಲಾಗುತ್ತಿದೆ. ಉಳಿದಂತೆ ನಾಡದೋಣಿಗೆ ವಿನಾಯಿತಿ, ನಿರಂತರ ಪಡಿತರ ವಿತರಣೆಯ ವ್ಯವಸ್ಥೆ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗುವ ಎಲ್ಲ ಕ್ರಮಗಳನ್ನು ಜಿಲ್ಲಾಡಳಿತ ವಹಿಸಿದೆ. ಮಂಗಳವಾರವೂ ಉಡುಪಿ ನಗರ ಭಾಗ, ಮಣಿಪಾಲ ಭಾಗಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಪೊಲೀಸರು ವಾಹನ ಸವಾರರನ್ನು ಪರಿಶೀಲಿಸುತ್ತಿದ್ದು, ಆ ಮೂಲಕ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗುತ್ತಿದೆ.