ಬೆಳ್ತಂಗಡಿ: ಲಾಕ್‌ಡೌನ್ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸವಾಲುಗಳು ಹರಿದಾಡುತ್ತಿದ್ದಾಗ ಎಸ್‌ಡಿಎಂ ಕಾಲೇಜಿನ ಎನ್.ಎಸ್.ಎಸ್. ಸ್ವಯಂ ಸೇವಕರು ವಿನೂತನ ಹೆಜ್ಜೆಯೊಂದಿಗೆ ಸಮಾಜಮುಖಿ ಚಿಂತನೆ ಹಾಗೂ ಜಾಗೃತಿ ಕೈಂಕರ್ಯ ನಡೆಸಿ ಮಾದರಿಯಾಗಿದ್ದಾರೆ.
ವಿನೂತನ ಸವಾಲಿನೊಂದಿಗೆ ಪ್ರತಿದಿನ ಸ್ವಯಂ ಸೇವಕರಿಗೆ ವಾಟ್ಸಪ್ ಬಳಗದಲ್ಲಿ ಟಾಸ್ಕ್ ನೀಡಲಾಗುತ್ತಿತ್ತು. ಟಾಸ್ಕ್ ನಲ್ಲಿ ಕಾಲೇಜಿನ ಎನ್.ಎಸ್.ಎಸ್. ಸ್ವಯಂಸೇವಕರು ಒಂದು ತಿಂಗಳ ಅವಧಿಯಲ್ಲಿ 31ಕ್ಕೂ ಹೆಚ್ಚು ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಮನೆ ಮತ್ತು ಸುತ್ತಲಿನ ಪರಿಸರ ಸ್ವಚ್ಛತೆ, ಕೈ ತೊಳೆಯುವ ವಿಧಾನಗಳು, ಪ್ಲಾಸ್ಟಿಕ್ ತ್ಯಾಜ್ಯಗಳ ಸಮರ್ಪಕ ವಿಲೇವಾರಿ-ಮರುಬಳಕೆ ಸಂಬಂಧಿತ ಮಾಹಿತಿಯನ್ನು ಒದಗಿಸಿದ್ದಾರೆ. ಕೊರೊನಾ ಕುರಿತು ವೀಡಿಯೋ ಮೂಲಕ ಜಾಗೃತಿ ಸಂದೇಶ, ಆನ್‌ಲೈನ್ ಮಾಹಿತಿ ಕಾರ್ಯಾಗಾರ, ಸ್ವದೇಶಿ ವಸ್ತುಗಳ ಬಳಕೆಯ ಮಹತ್ವ ಬಿಂಬಿಸುವ ವಿವರ, ಯೋಗಾಭ್ಯಾಸ, ಸ್ವಸ್ಥ ಸಮಾಜಕ್ಕಾಗಿ ಪ್ರತಿಜ್ಞೆಗೆ ಸಂಬಂಧಿಸಿದಂತೆ ಜನರಲ್ಲಿ ಅರಿವು ಮೂಡಿಸಿದ್ದಾರೆ.
ಪ್ರತಿಯೊಬ್ಬ ಸ್ವಯಂಸೇವಕ ಕನಿಷ್ಠ ಎರಡು ಗಿಡಗಳನ್ನು ನೆಟ್ಟು ಅವುಗಳ ಪಾಲನೆ – ಪೋಷಣೆಯ ಜವಾಬ್ದಾರಿ ಹೊತ್ತಿದ್ದಾರೆ.
ಎನ್.ಎಸ್.ಎಸ್.ನ ಇಬ್ಬರು ಯೋಜನಾಧಿಕಾರಿಗಳ ನೇತೃತ್ವದಲ್ಲಿ ವಿನೂತನ ಪ್ರಯೋಗ ಯಶಸ್ವಿಗೊಳಿಸಿ ರುವುದಕ್ಕೆ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ಕಾಲೇಜಿನ ಪ್ರಾಂಶುಪಾಲ ಡಾ| ಸತೀಶ್ಚಂದ್ರ ಎಸ್. ಶ್ಲಾಘಿಸಿದ್ದಾರೆ.