Advertisement

ಲಾಕ್ ಡೌನ್: ಪ್ರಕೃತಿ ನಿಯಮ ಪಾಲಿಸುವ ಹೂಗಿಡ ಎಂದಿನಂತೆ ಸಂಭ್ರಮದಿಂದ ಹೂ ಬಿಡುತ್ತಿದೆ…

03:52 PM May 04, 2020 | Nagendra Trasi |

ಮೂರನೇ ಕ್ಲಾಸಿನಲ್ಲಿದ್ದಾಗ ಕೇಳಿದ್ದ ಗಾದೆ ಮಾತೊಂದು ಈ ಲಾಕ್ ಡೌನ್ ಅವಧಿಯಲ್ಲಿ ನೆನಪಾಯಿತು. ಅದೇನೆಂದರೆ, ‘ ಹಾಸಿಗೆ ಇದ್ದಷ್ಟೇ ಕಾಲು ಚಾಚು.’ ಬಾಲ್ಯದಲ್ಲಿದ್ದಾಗ ತಲೆಗೆ ಹತ್ತಿದ್ದು ಹಾಸಿಗೆ ಮತ್ತು ಹೊದಿಕೆಯ ಉಪಯೋಗ ಮಾತ್ರ ಅದರ ಒಳಾರ್ಥವಲ್ಲ. ಈ ಸಮಯದಲ್ಲಿ ಈ ಗಾದೆಯ ಪ್ರಸ್ತುತತೆ ಏನೆಂದರೆ, ಇಲ್ಲಿ ಚಾಪೆ ಅಥವಾ ಹಾಸಿಗೆ ನಾವು ಸಂಪಾದಿಸಿದ ಹಣದಂತೆ. ಗಾದೆಯ ಮುಂದುವರಿದ ಭಾಗ, ಇರುವ ಸಂಪಾದನೆಯಲ್ಲೇ ತೃಪ್ತಿಪಡಬೇಕು ಎನ್ನುವುದನ್ನು ಸೂಚಿಸುತ್ತದೆ.

Advertisement

ಇರುವ ಹಾಸಿಗೆಯಲ್ಲೇ ಕಾಲು ಚಾಚಲಾಗದ ನನ್ನ ಕೆಲ ಮಿತ್ರರಿಗೆ ಲಾಕ್ ಡೌನ್ ಅದನ್ನೂ ಕಲಿಸಿಕೊಟ್ಟಿತು. ಅಗತ್ಯತೆ ಹಾಗೂ ಬಯಕೆ ಇವೆರಡರ ನಡುವಿನ ವ್ಯತ್ಯಾಸವನ್ನು ತಿಳಿಸಿತು. ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ’ ಜೀವನವಲ್ಲ ,‌ ಇರುವುದರಲ್ಲೇ ಅಡ್ಜಸ್ಟ್ ಮಾಡಿಕೊಂಡು ತೃಪ್ತಿಯಿಂದಿರುವುದೇ ಜೀವನ ಎಂದು ಕಲಿಸಿತು. ಹಾಗಂತ COVID-19 ತಡೆಗಟ್ಟಲು ಲಾಕ್ ಡೌನ್ ಎಲ್ಲದಕ್ಕೂ ನಿಯಂತ್ರಣ ಹೇರಿಲ್ಲ. ಕಲ್ಪನೆಗೆ, ಸೃಜನಶೀಲತೆಗೆ ಹಾಗೂ ಆತ್ಮಾವಲೋಕನಕ್ಕೆ ಸಾಕಷ್ಟು ಸಮಯ ನೀಡಿದೆ.

ಈ 4G ಯುಗದಲ್ಲಿ ನಮ್ಮಂತವರಿಗೆ ಅರೆತಾಸು ಕುಳಿತು ಆತ್ಮಾವಲೋಕನ ಮಾಡಿಕೊಳ್ಳುವ ಸಮಯವೆಲ್ಲಿದೆ? ನನ್ನ ಕನಸೇನಾಗಿತ್ತು?.. ಗುರಿ ಏನಾಗಿತ್ತು?.. ಆ ಗುರಿ ತಲುಪಿದ್ದೇನೆಯೇ?.. ತಲುಪುವ ದಾರಿಯಲ್ಲಿದ್ದೇನೆಯೇ?.. ಸರಿ ದಾರಿಯಲ್ಲಿದ್ದೇನೆಯೇ? ಇಲ್ಲವೇ? ಅಥವಾ reboot ಮಾಡಬೇಕೇ?.. ಈ ತರಹದ ಚಿಂತನೆಗಳಿಗೆ ಅವಕಾಶ ನೀಡಿದ್ದು ಲಾಕ್ ಡೌನ್.

ವೃತ್ತಿಯಲ್ಲಿ ಉಪನ್ಯಾಸಕನಾಗಿರುವುದರಿಂದ ವಿದ್ಯಾರ್ಥಿಗಳಿಗೆ online ಕ್ಲಾಸ್ ಅರ್ಥವಾಯಿತೇ? ಇಲ್ಲವೇ? ಎಂಬ ಗೊಂದಲ ಬೇರೆ. ದೈನಂದಿನ ತರಗತಿಯಲ್ಲಾದರೆ ಪ್ರಶ್ನೆಗಳನ್ನ ಕೇಳಿ ತಿಳಿದುಕೊಳ್ಳಬಹುದು, ಆದರೆ online ಕ್ಲಾಸ್ ನಲ್ಲಿ ವಿದ್ಯಾರ್ಥಿಗಳು ಅಷ್ಟಾಗಿ ಸ್ಪಂದಿಸುವುದಿಲ್ಲ.

ಈ ಲಾಕ್ ಡೌನ್ ಕೃಷಿಕರಿಂದ ಹಿಡಿದು ಕಾರ್ಮಿಕ, ಮಾಲೀಕ, ವೈದ್ಯಾಧಿಕಾರಿಗಳಿಗೆ ಪೊಲೀಸರಿಗೆ ಹಾಗೂ ಎಲ್ಲರಿಗೂ ಹೊಸದು. ಈ ನಡುವೆ ನನ್ನನ್ನು ಕಾಡಿದ ಕುತೂಹಲಕಾರಿ ಸಂಗತಿಯೆಂದರೆ, ಇತ್ತೀಚಿಗೆ ನೋಡಿದ ಮಲಯಾಳಂ ಸಿನೆಮಾ ‘ ಅಯ್ಯಪ್ಪನುಂ ಕೋಶಿಯುಂ’ ಹಾಗೂ ಬೆಳಗಾವಿಯಲ್ಲಿ ನಡೆದ ಒಂದು ಘಟನೆ. ಪೊಲೀಸ್ ಅಧಿಕಾರಿ ಮತ್ತು ಮಾಜಿ ಯೋಧನ ನಡುವಿನ ego clash ಈ ಸಿನಿಮಾದ ಕಥೆಯಾಗಿತ್ತು. ಕಾಕತಾಳೀಯ ಎಂಬಂತೆ ಬೆಳಗಾವಿಯ ಘಟನೆ ಸಹ ಪೊಲೀಸ್ ಹಾಗೂ ಯೋಧನಿಗೆ ಸಂಬಂಧಪಟ್ಟಿರುವುದು ನನ್ನ ಕುತೂಹಲ ಹೆಚ್ಚಲು ಕಾರಣವಾಯಿತು.

Advertisement

ಕೊನೆಯ ಮಾತು
ಐದಾರು ಹೂಗಳನ್ನು ಕೊಯ್ದಾದ ನಂತರ

ಮಾಲಿಗೆ ನೆನಪಾಯಿತು ಮಗಳ‌ ಜನ್ಮದಿನ

ಆರನೇಯದ್ದನ್ನು ಅಕ್ಕರೆಯಿಂದ ಆಕೆಗೆಂದೆ

ಕಿಸೆಯಲ್ಲಿಟ್ಟುಕೊಂಡು

ಮರುದಿನ ಅಂಗಿ ಒಗೆಯುವ ಮುನ್ನ

ತಪಾಸಣೆಯಲ್ಲಿ

ಅದು ಅವಳಿಗೆ ಸಿಕ್ಕಿತು.

(ಜಯಂತ್ ಕಾಯ್ಕಿಣಿಯವರ ಶ್ರಾವಣ ಮಧ್ಯಾಹ್ನ ನೀಲಿಮಳೆ ಯಿಂದ)

ಲಾಕ್ ಡೌನ್ ಮಧ್ಯೆ ಈ ಸಾಲುಗಳು ಆಗಾಗ ನೆನಪಾಗುತ್ತದೆ. ಕಾರಣ ಪ್ರಕೃತಿ ನಿಯಮ ಪಾಲಿಸದ ಮಾನವನಿಗೆ ಈಗ ಹುಟ್ಟುಹಬ್ಬ ಆಚರಿಸುವ ಸಂಭ್ರಮವಿಲ್ಲ , ಹೂ ಕೊಯ್ಯಲು ಮಾಲಿಯಿಲ್ಲ‌ , ಹೂದೋಟದ ಮಾಲೀಕನೂ ಇಲ್ಲ. ಆದರೆ ಪ್ರಕೃತಿ ನಿಯಮ ಪಾಲಿಸುವ ಹೂಗಿಡ ಎಂದಿನಂತೆ ಸಂಭ್ರಮದಿಂದ ಹೂ ಬಿಡುತ್ತಿದೆ.

ಸುಧೇಶ್ ಚಂದ್ರ ಟಿ
ಉಪನ್ಯಾಸಕ ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next