Advertisement

ಲಾಕ್‌ಡೌನ್‌ ಕಟ್ಟುನಿಟ್ಟಿನ ಜಾರಿ: ಮೋದಿ ಸೂಚನೆ

09:26 AM Apr 04, 2020 | Sriram |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣ ಮತ್ತು ಲಾಕ್‌ಡೌನ್‌ ಜಾರಿ ಕುರಿತು ವೀಡಿಯೋ ಕಾನ್ಫರೆನ್ಸ್‌ ಮೂಲಕ ಮಾಹಿತಿ ಪಡೆದುಕೊಂಡ ಪ್ರಧಾನಿ ನರೇಂದ್ರ ಮೋದಿ, ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿಗೆ ಸೂಚನೆ ನೀಡಿ, ಆರೋಗ್ಯ ಸೇವೆಗಳಿಗೆ ಆಯುಷ್‌ ವೈದ್ಯರ ಸೇವೆ ಪಡೆಯುವಂತೆ ಸಲಹೆ ನೀಡಿದ್ದಾರೆ.

Advertisement

ಕೃಷಿ ಚಟುವಟಿಕೆಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಿದ್ದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಅಗತ್ಯ ವಸ್ತುಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ನಿರ್ದೇಶ ನೀಡಿದ್ದಾರೆ.

ಪ್ರಧಾನಿ ಜತೆಗಿನ ವೀಡಿಯೋ ಕಾನ್ಫರೆನ್ಸ್‌ ಅನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಎ.14ರ ವರೆಗೂ ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದನ್ನು ಅವಲಂಬಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಆನಂತರ ಕಾರ್ಯಪಡೆ ರಚಿಸಿ ಏನು ಮಾಡಬೇಕು ಎಂದು ನಿರ್ಧರಿಸಲಾಗುವುದು ಎಂದರು.

ಮಾಹಿತಿ ಪಡೆದ ಪಿಎಂ
ಪ್ರಧಾನ ಮಂತ್ರಿ ರಾಜ್ಯಗಳಲ್ಲಿ ಕೋವಿಡ್‌-19 ನಿಯಂತ್ರಣ ಮತ್ತು ಲಾಕ್‌ಡೌನ್‌ ಅನುಷ್ಠಾನದ ಕುರಿತು ಮಾಹಿತಿ ಪಡೆದರು. ಅಗತ್ಯ ವಸ್ತುಗಳ ಪೂರೈಕೆಗೆ ಅಡಚಣೆಯಾಗದಂತೆ ಲಾಕ್‌ಡೌನ್‌ ಅನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಿದರು ಎಂದರು.

ಕರ್ನಾಟಕದಲ್ಲಿ ಈವರೆಗೆ 124 ಕೋವಿಡ್‌- 19 ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ 9ನೇ ಸ್ಥಾನದಲ್ಲಿದೆ. ಈ ಸೋಂಕಿನಿಂದಾಗಿ ಜಾಗತಿಕ ಮಟ್ಟದಲ್ಲಿಯೇ ಪರಿಸ್ಥಿತಿ ಬಹಳ ಚಿಂತಾಜನಕವಾಗಿದೆ. ಎಲ್ಲರೂ ಒಟ್ಟಾಗಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು. ಔಷಧ, ಆಹಾರ ಮತ್ತಿತರ ಅಗತ್ಯ ವಸ್ತುಗಳ ಪೂರೈಕೆ ಅಬಾಧಿತವಾಗಿರಬೇಕು. ರಾಜ್ಯಗಳು ಕೋವಿಡ್‌ 19 ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆಗಳನ್ನು ಅಧಿಸೂಚಿಸಿ, ಜನರಿಗೆ ಈ ಕುರಿತು ಮಾಹಿತಿ ಒದಗಿಸಬೇಕು ಎಂದು ಹೇಳಿದರು.

Advertisement

ಮುಂದಿನ ದಿನಗಳಲ್ಲಿ ವೈದ್ಯರ ಕೊರತೆಯಾಗದಂತೆ ಸಾಧ್ಯವಿರುವ ಕಡೆ ಆಯುಷ್‌ ವೈದ್ಯರ ಸೇವೆಯನ್ನು ಪಡೆದುಕೊಳ್ಳುವಂತೆ ಮತ್ತು ಇದಕ್ಕಾಗಿ ಅವರಿಗೆ ಆನ್‌ಲೈನ್‌ ತರಬೇತಿ ನೀಡುವಂತೆ ಸಲಹೆ ನೀಡಿದರು. ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಆಯುಷ್‌ ಇಲಾಖೆಯು ಹೊರಡಿಸಿರುವ ಮಾರ್ಗಸೂಚಿಗಳನ್ನು ಜನಪ್ರಿಯಗೊಳಿಸಿ, ಜನರು ಅವುಗಳನ್ನು ಪಾಲಿಸಲು ಕ್ರಮ ಕೈಗೊಳ್ಳುವಂತೆ ಪ್ರಧಾನಿ ಮೋದಿ ಸಲಹೆ ನೀಡಿದರು ಎಂದು ಹೇಳಿದರು.

ಪ್ರತ್ಯೇಕ ಸಭೆ ನಡೆಸಿ ಚರ್ಚೆ
ಪ್ರಧಾನಿ ಜತೆಗಿನ ವೀಡಿಯೋ ಕಾನ್ಫರೆನ್ಸ್‌ ಗೂ ಮುನ್ನ ಯಡಿಯೂರಪ್ಪ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ.ಸುಧಾಕರ್‌, ಆರೋಗ್ಯ ಸಚಿವ ಬಿ. ಶ್ರೀರಾಮುಲು, ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯ ಭಾಸ್ಕರ್‌ ಮತ್ತು ವಿವಿಧ ಇಲಾಖೆಗಳ ಮುಖ್ಯಸ್ಥರ ಜತೆ ಪ್ರತ್ಯೇಕ ಸಭೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next