ನನ್ನ ಕೆಲಸ ಹಳ್ಳಿ ಹಳ್ಳಿಗಳನ್ನು ಅಲೆಯುವುದು. ಸರ್ಕಾರದ ಅನುದಾನ ಪಡೆದವರು ಮನೆ ಕಟ್ಟಿದ್ದಾರೋ ಇಲ್ಲವೋ ಅನ್ನೋದನ್ನು ಹುಡುಕಿ, ಫೋಟೋ ತೆಗೆದು, ಸರ್ಕಾರಕ್ಕೆ ಮಾಹಿತಿ ಕೊಡುವ ಕೆಲಸ. ದಿನಕ್ಕೆ ಕನಿಷ್ಠ ಅಂದರೂ 8-10 ಹಳ್ಳಿಗಳನ್ನು ಅಲೆಯಬೇಕು. ಮಾಹಿತಿ ತಂದು ಸಂಜೆ ಐದರ ಹೊತ್ತಿಗೆ ಸಿಸ್ಟಮ್‌ನಲ್ಲಿ ಅಪ್ ಲೋಡ್ ಮಾಡಬೇಕು. “ಎಲ್ರಿ, ಮನೆ ಸ್ಟೇಟಸ್ ಏನಾಯ್ತು?’ ಅಂತ ಬೆಂಗಳೂರಲ್ಲಿ ಕೂತಿರುವ ಬಾಸ್ ಕೇಳಿದಾಕ್ಷಣ ಅವರ ಕಣ್ಣಿಗೆ ಬೀಳಬೇಕು. ಇಲ್ಲವಾದರೆ, ನೂ ರೆಂಟು ಅನುಮಾನ ಶುರುವಾಗಿ, ಸಂಬಳಕ್ಕೂ ಕತ್ತರಿ ಹಾಕಿಸಿಬಿಡುತ್ತಾರೆ.
ಪರಿಸ್ಥಿತಿ ಹೀಗಿರುವಾಗ, ಈ ಕೋವಿಡ್ ಬಂದಮೇಲೆ ನಮ್ಮ ಪಾಡು ಹೇಗಾಗಿರಬೇಡ; ಸುಮ್ಮನೆ ಊಹೆ ಮಾಡಿಕೊಳ್ಳಿ. ಲಾಕ್‌ಡೌನ್ ಸಮಯದಲ್ಲಿ ಒಂದು ತಿಂಗಳ ಕಾಲ ಹಳ್ಳಿ ಅಲೆಯಲಿಲ್ಲ. ಏಕೆಂದರೆ, ಕೊರೊನಾ ಕಾರಣಕ್ಕೆ ಎಷ್ಟೋ ಹಳ್ಳಿಗಳಲ್ಲಿ ಕೂಲಿ ಕಾರ್ಮಿಕರು ಸಿಗದೆ ಮನೆ ನಿರ್ಮಾಣ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.
ಅಲ್ಲಿ ಹೋಗಿ ಏನು ಮಾಡುವುದು? ಕೋವಿಡ್ ನಿಂದ ಹೀಗಾಗಿದೆ ಅಂತ ವರದಿ ಕೊಟ್ಟೆ. ಆದರೆ, ನನ್ನ ಮೇಲಿನ ಅಧಿಕಾರಿಗಳಿಗೆ ಅನುಮಾನ. ಅಲ್ಲೆಲ್ಲಾ ಕೊರೊನಾನೇ ಇಲ್ಲ. ಇವನು ಸ್ಥಳಕ್ಕೆ ಹೋಗದೇ ಹೀಗೆಲ್ಲಾ ಮಾಡುತ್ತಿದ್ದಾನೆ ಅಂತ. ಮನೆಯಲ್ಲಿ ಹೆಂಡತಿ- ಹೊರಗೆ ಹೋಗಬೇಡಿ. ಕೊರೊನಾ ಬಂದರೆ ಕಷ್ಟ
ಅಂತ ಪೀಡಿಸುತ್ತಿದ್ದರೆ, ಮೇಲಿನ ಅಧಿಕಾರಿಗಳು, ಇವತ್ತು ಎಷ್ಟು ಕೆಲಸ ಮುಗಿಸಿದ್ರಿ ಅಂತ ಪ್ರಶ್ನೆ ಕೇಳಿ ಪ್ರಾಣ ತೆಗೆಯುತ್ತಿದ್ದಾರೆ.
ಈ ಮಧ್ಯೆ ಎರಡು, ಮೂರು ಹಳ್ಳಿಗಳಲ್ಲಿ ಕೋವಿಡ್ ಪಾಸಿಟೀವ್ ಬಂತು. “ಸಾರ್, ಹೀಗೆಲ್ಲ ಆಗಿದೆ, ಅಂದರೆ-‘ ಒಂದ್ ಕೆಲಸ ಮಾಡಿ, ಸೀಲ್‌ಡೌನ್ ಪ್ರದೇಶ ಬಿಟ್ಟು, ಬೇರೆ ಕಡೆ ನೋಡಿ ಬನ್ನಿ’ ಅಂದರು. ಹಿಂತಿರುಗಿ ಮಾತಾಡಲು ಅವಕಾಶವೇ ಇಲ್ಲ. ಹಾಗಾಗಿ, ಭಯದಲ್ಲೇ ಕೆಲಸ ಮಾಡುವಂತಾಯಿತು. ಕಡೆಗೊಂದು ದಿನ, ನಮ್ಮ ಮೇಲಧಿಕಾರಿಗೇ ಕೊರೊನಾ ಬಂದು, ಆಫಿಸ್ ಸೀಲ್‌ಡೌನ್ ಆದ ಮೇಲೆಯೇ, ಕೊರೊನಾದ ಪರಿಣಾಮ ಮತ್ತು ನಾನು ಮಾಡುತ್ತಿದ್ದ ಕೆಲಸದ ಕಷ್ಟ ನನ್ನ ಮೇಲಧಿಕಾರಿಗಳಿಗೆ ತಿಳಿದದ್ದು. ಸಧ್ಯ ನಾನು ಒಂದು ವಾರದಿಂದ ಅವರ ಕಾಟಕ್ಕೆ ಫೀಲ್ಡ್ ಲ್ಲೇ ಇದ್ದೆ. ಆಫಿಸಿಗೆ ಹೋಗಿರಲಿಲ್ಲ. ಹೀಗಾಗಿ, ಕ್ವಾರಂಟೈನ್‌ನಿಂದ ತಪ್ಪಿಸಿಕೊಂಡೆ. ಈ ಮಧ್ಯೆ ಹಂಗಾಮಿಯಾಗಿ ಬಂದ ಅಧಿಕಾರಿ, ಇವರಿಗೇನೂ ಕೆಲಸ ಇಲ್ವಲ್ಲ ಅಂತ ನಮ್ಮನ್ನು ಕ್ವಾರಂಟೈನ್ ಕೇಂದ್ರದ ಉಸ್ತುವಾರಿ ನೋಡಿಕೊಳ್ಳುವ ಕೆಲಸಕ್ಕೆ ಹಾಕಿದ್ದಾರೆ.
ಕೋವಿಡ್ ಯಾವಾಗ ಬೇಕಾದರೂ ನಮಗೂ ಬರಬಹುದು ಅನ್ನೋ ಭಯದಲ್ಲಿಯೇ ಕೆಲಸ ಮಾಡುತ್ತಿದ್ದೇವೆ. ಹೆಂಡತಿ ಮಕ್ಕಳು ತವರಲ್ಲಿ ಇದ್ದಾರೆ. ಮನೆಯಲ್ಲಿ ನಾನೊಬ್ಬನೇ. ಸರಿಯಾದ ಸಮಯಕ್ಕೆ ಊಟ-ತಿಂಡಿ ಇಲ್ಲ. ಹೋಟೆಲ್ ಬಂದ್. ನನಗೆ ಅಡುಗೆ ಮಾಡಿಕೊಳ್ಳಲು ಬರಲ್ಲ. ಎಲ್ಲಿ ಕಾಲಿಟ್ಟರೂ ಅನುಮಾನ. ಕೋವಿಡ್ ಮೈಗೆ ಹತ್ತಿರಬಹುದೇ ಅಂತ. ಸ್ಯಾನಿಟೈಸರ್, ಮಾಸ್ಕ್, ರೋಗನಿರೋಧಕ ಔಷಧ… ಯಾವುದೂ ಕೂಡ ಬದುಕುವ ಆತ್ಮವಿಶ್ವಾಸ ತಂದುಕೊಡುತ್ತಿಲ್ಲ. ಸೋಂಕಿನ ಭಯ ಕೂಡ ಕೊರೊನಾದಷ್ಟೇ ಜೀವ ಹಿಂಡುತ್ತಿದೆ. ಸದ್ಯಕ್ಕೇನೋ ನಾನು ಆರೋಗ್ಯವಾಗೇ ಇದ್ದೇನೆ. ಆದರೆ, ಯಾವಾಗ ಬೇಕಾದರೂ ಕೊರೊನಾ ವರ್ತುಲಕ್ಕೆ ಸಿಕ್ಕಿ ಒದ್ದಾಡಬಹುದು ಅನ್ನೋ ಯೋಚನೆಯಲ್ಲೇ ದಿನ ತಳ್ಳುತ್ತಿದ್ದೇನೆ. ಕೆಲಸ ಮಾಡಬೇಕು. ಇಲ್ಲಾ ಅಂದರೆ, ದಿನಗೂಲಿ ಕೂಡ ಬರೋಲ್ಲ ಅನ್ನೋ ಸತ್ಯವನ್ನು ಕೋವಿಡ್ ಹೇಳಿ ಕೊಟ್ಟಿದೆ.