ವಿಜಯಪುರ: ಕೋವಿಡ್ ನಿರ್ಬಂಧ ಜಾರಿಯಲ್ಲಿ ಇದ್ದರೂ ನಿಯಮ ಉಲ್ಲಂಘಿಸಿ ಕೆಪಿಟಿಸಿಎಲ್ ನೌಕರರ ಸಂಘದ ಪದಾಧಿಕಾರಿಗಳು ಸಭೆ, ವಿಜಯೋತ್ಸವ ಆಚರಿಸಿದ ಘಟನೆ ಮುದ್ದೇಬಿಹಾಳ ಪಟ್ಟಣದಲ್ಲಿ ಜರುಗಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಕ್ರಮಕ್ಕೆ ಮುಂದಾಗಿದ್ದಾರೆ.
ಮುದ್ದೇಬಿಹಾಳ ಕೆಪಿಟಿಸಿಎಲ್ ಉಪ ವಿಭಾಗದ ನೌಕರ ಬಿ.ಟಿ.ಮ್ಯಾಗೇರಿ ಇವರನ್ನು ಸಂಘದ ಬಸವನಬಾಗೇವಾಡಿ ವಿಭಾಗಕ್ಕೆ ನಾಮನಿರ್ದೇಶನ ಸದಸ್ಯರಾಗಿ ನೇಮಕಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ಪಟ್ಟಣದಲ್ಲಿ ಸಂಘದಿಂದ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಇದಕ್ಕಾಗಿ ಬ್ಯಾನರ್ ಕಟ್ಟಿ, ಪಟಾಕಿ ಸಿಡಿಸಿ ವಿಜಯೋತ್ಸವದ ಸಂಭ್ರಮ ಆಚರಣೆಯನ್ನೂ ಮಾಡಿದ್ದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಬೇಹುಗಾರಿಗೆ ಜಾಲ ಪತ್ತೆಗೆ ಮುನ್ನುಡಿ ಬರೆಯಿತು ಆ ಒಂದು ಕರೆ!
ಶುಕ್ರವಾರ ಮುದ್ದೇಬಿಹಾಳ ಪಟ್ಟಣದಲ್ಲಿರುವ ಕೆಪಿಟಿಸಿಎಲ್ ಕಛೇರಿ ಆವರಣದಲ್ಲಿ ಪರವಾನಿಗೆ ರಹಿತವಾಗಿ, ಕೋವಿಡ್ ನಿಯಮ ಉಲ್ಲಂಘಿಸಿ ಸನ್ಮಾನ ಕಾರ್ಯಕ್ರಮ ನಡೆಯುವ ಕುರಿತು, ಜಿಲ್ಲಾಡಳಿತಕ್ಕೆ ಮಾಹಿತಿ ದೊರೆತಿದೆ. ಕೂಡಲೇ ಜಿಲ್ಲಾಧಿಕಾರಿ ಸ್ಥಳೀಯ ತಹಶೀಲ್ದಾರ ಬಿ.ಎಸ್.ಖಡಕಭಾವಿ ಅವರಿಗೆ ಸ್ಥಳಕ್ಕೆ ತೆರಳಿ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ತಹಶೀಲ್ದಾರರಿಗೆ ಕಾರ್ಯಕ್ರಮ ಆಯೋಜಕರು ಟೆಂಟ್ ಹಾಕಿ, ನೂರಾರು ಕುರ್ಚಿ ಹಾಕಿದ್ದನ್ನು ಕಂಡು ನೌಕರರಿಗೆ ಎಚ್ಚರಿಕೆ ನೀಡಿದ್ದಾರೆ.
ಕೋವಿಡ್ ನಿಯಮ ಉಲ್ಲಂಘಿಸಿ ಕಾರ್ಯಕ್ರಮ ನಡೆಸಿದ ಕೆಪಿಟಿಸಿಎಲ್ ನೌಕರರ ಸಂಘದ ಪದಾಧಿಕಾರಿಗಳಿಗೆ ನೋಟೀಸ್ ನೀಡಲಾಗುತ್ತದೆ. ತಹಶಿಲ್ದಾರರ ನೀಡುವ ಸ್ಥಾನಿಕ ಭೇಟಿಯ ಪರಿಶೀಲನಾ ವರದಿಯಂತೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಸುನಿಲಕುಮಾರ ಉದಯವಾಣಿಗೆ ಸ್ಪಷ್ಟಪಡಿಸಿದ್ದಾರೆ.