ಧಾರವಾಡ: ಜಿಲ್ಲೆಯಲ್ಲಿ 3ನೇ ಹಂತದ ಲಾಕ್‌ಡೌನ್ ವಿಸ್ತರಣೆಯ ಬಳಿಕ ಕಿತ್ತಳೆ ವಲಯಕ್ಕೆ ನೀಡಿರುವ ವಿನಾಯಿತಿಯಿಂದ ಜನ ಜೀವನ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಇದರಿಂದ ಅಪಾಯದ ತೂಗುಕತ್ತಿ ತಲೆಯ ಮೇಲೆ ತೂಗುವಂತಾಗಿದೆ.
ಲಾಕ್‌ಡೌನ್ ಸಡಿಲಿಕೆ ಸರಕಾರ ಮಾಡಿದೆ ಹೊರತು ಕೋವಿಡ್ 19 ವಲ್ಲ. ಈ ಸತ್ಯ ಅರಿತು ಮುನ್ನಡೆದರೆ ಮಾತ್ರ ಕೋವಿಡ್ 19 ಸೋಂಕಿನ ಅಪಾಯದಿಂದ ಪಾರಾಗಬಹುದು. ಆದರೆ ಮಂಗಳವಾರ ಕಂಡು ಬಂದ ಧಾರಾನಗರಿಯ ಚಿತ್ರಣ ನೋಡಿದಾಗ ಅಪಾಯ ಕಟ್ಟಿಟ್ಟಬುತ್ತಿ ಅನ್ನುವಂತಾಗಿದೆ.
ಧಾರವಾಡದ ಹೊಸಯಲ್ಲಾಪುರದಲ್ಲಿ ಸೋಂಕು ದೃಢಪಟ್ಟ ಬೆನ್ನಲ್ಲಿಯೇ ಇದಕ್ಕೆ ಹೊಂದಿಕೊಂಡಿದ್ದ ಸೂಪರ್ ಮಾರುಕಟ್ಟೆ ಸೇರಿದಂತೆ ವಿವಿಧ ಮಾರುಕಟ್ಟೆಗಳು ಬಂದ್ ಆಗಿದ್ದವು. ಇದೀಗ ಈ ಮಾರುಕಟ್ಟೆಗಳು ಮಂಗಳವಾರದಿಂದ ಪುನರ್ ಆರಂಭವಾಗಿದ್ದು, ಎಲ್ಲ ಚಟುವಟಿಕೆಗಳು ಶುರುವಾಗಿವೆ. ನಗರದ ಬಹುತೇಕ ಅಂಗಡಿಗಳು ಬಾಗಿಲು ತೆರೆದಿದ್ದರೆ ಲಾಕ್‌ಡೌನ್‌ನ 3ನೇ ಹಂತದಲ್ಲಿ ಧಾರವಾಡದ ಮಂಗಳವಾರ ಸಂತೆಯೂ ಯಥಾಸ್ಥಿತಿಯಲ್ಲಿಯೇ ನಡೆಯಿತು. ಹಳ್ಳಿಗಳಿಂದ ಖಾಸಗಿ ವಾಹನಗಳು ಮತ್ತು ಸ್ವಂತ ವಾಹನಗಳಲ್ಲಿಯೇ ಪೇಟೆಗೆ ಆಗಮಿಸಿದ ಜನರು, ಸಂತೆಯಲ್ಲಿ ತಮಗೆ ಬೇಕಾದ ಪದಾರ್ಥಗಳನ್ನು ಕೊಂಡುಕೊಂಡರು.
ಸೂಪರ್ ಮಾರುಕಟ್ಟೆ ಸೇರಿದಂತೆ ಇನ್ನಿತರ ಮಾರುಕಟ್ಟೆಗಳ ಬಾಗಿಲು ತೆರೆದಿದ್ದು, ಜನರೂ ಸಹ ಮುಗಿ ಬಿದ್ದಿದ್ದಾರೆ. ಇದಲ್ಲದೇ ರಸ್ತೆ ಬದಿಯ ಮಾರುಕಟ್ಟೆ ಸಹ ಆರಂಭವಾಗಿದ್ದು, ರಸ್ತೆ ಬದಿಯ ಕಾಯಿಪಲ್ಲೆ ವ್ಯಾಪಾರ ಜೋರಾಗಿ ಸಾಗಿದೆ. ಇದರಿಂದ ಸಾಮಾಜಿಕ ಅಂತರವಿಲ್ಲದೇ, ಮಾಸ್ಕ್ಗಳ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿರಲಿಲ್ಲ. ಬೇಕಾಬಿಟ್ಟಿಯಾಗಿ ಜನರ ಸಂಚಾರವೂ ಜೋರಾಗಿದೆ. ನಗರದ ಜ್ಯುಬಲಿ ವೃತ್ತ ಸೇರಿದಂತೆ ವಿವಿಧ ಕಡೆ ಹಾಕಿದ್ದ ಬ್ಯಾರಿಕೇಡ್‌ಗಳ ತೆರವು ಮಾಡಲಾಗಿದೆ.
ಹೀಗಾಗಿ ವಾಹನಗಳ ಸಂಚಾರ ಸಂಪೂರ್ಣ ಮುಕ್ತವಾದಂತಾಗಿದೆ. ಇದರ ಜೊತೆಗೆ ಟ್ರಾಫಿಕ್ ಸಿಗ್ನಲ್ ಗಳು ಸಹ ಆರಂಭಗೊಂಡಿವೆ. ಇದರ ಜೊತೆಗೆ ನಗರದಲ್ಲಿ ಕ್ಷೌರದಂಡಿಗಳು ಸಹ ಮಂಗಳವಾರ ಬಾಗಿಲು ತೆರೆದಿವೆ. ವಿಪರ್ಯಾಸ ಎಂದರೆ ಇಡೀ ಮಾರುಕಟ್ಟೆಯಲ್ಲಿ ಜನರು ವಿಪರೀತವಾಗಿ ನಡೆದಾಡುತ್ತಿದ್ದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಸೇರಿದಂತೆ ಕೋವಿಡ್ 19 ತಡೆ ಮುಂಜಾಗೃತಿಯ ಯಾವುದೇ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದಿರುವುದು ಕಂಡು ಬಂದಿತು.