Advertisement

ರಾಜ್ಯದಲ್ಲಿ ಲಾಕ್ ಡೌನ್ ಕೊಂಚ ಸಡಿಲಿಕೆ ; ಯಾವುದಕ್ಕೆಲ್ಲಾ ಇದೆ ಅನುಮತಿ ಇಲ್ಲಿದೆ ಮಾಹಿತಿ

08:11 AM Apr 23, 2020 | Hari Prasad |

ಬೆಂಗಳೂರು: ಕೋವಿಡ್ ಮಹಾಮಾರಿ ಸಾಂಕ್ರಾಮಿಕಗೊಳ್ಳುವುದನ್ನು ತಪ್ಪಿಸುವ ಸಲುವಾಗಿ ದೇಶಾದ್ಯಂತ ಮಾರ್ಚ್ 25ರಿಂದ ಜಾರಿಗೊಂಡಿರುವ ಲಾಕ್ ಡೌನ್ ಇದೀಗ ಎರಡನೇ ಸುತ್ತಿಗೆ ಪ್ರವೇಶಿಸಿದೆ. ಎಪ್ರಿಲ್ 14ರಂದು ಮುಕ್ತಾಯಗೊಳ್ಳಬೇಕಿದ್ದ ಲಾಕ್ ಡೌನ್ ಅನ್ನು ಕೇಂದ್ರ ಸರಕಾರವು ಮತ್ತೆ ಮೇ 3ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.

Advertisement

ಈ ನಡುವೆ ಸ್ಥಳೀಯ ಆರ್ಥಿಕತೆಗೆ ಪುನಶ್ಚೇತನ ನೀಡುವ ಸಲುವಾಗಿ ಕೆಲವೊಂದು ಅವಶ್ಯ ಚಟುವಟಿಕೆಗಳನ್ನು ಈ ಲಾಕ್ ಡೌನ್ ಸಂದರ್ಭದಲ್ಲಿ ನಡೆಸಲು ಷರತ್ತುಬದ್ಧ ಅನುಮತಿ ಲಭಿಸಿತ್ತು.

ಇದೀಗ ರಾಜ್ಯ ಸರಕಾರವು ಲಾಕ್ ಡೌನ್ ನಿಯಮಗಳಲ್ಲಿ ಒಂದಷ್ಟು ಸಡಿಲಿಕೆಗಳನ್ನು ಮಾಡಿ ಇಂದು ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಆದರೆ ಈ ಮಾರ್ಗಸೂಚಿ ಸೋಂಕು ಪ್ರಕರಣಗಳು ಅಧಿಕವಾಗಿರುವ ಕಂಟೈನ್ ಮೆಂಟ್ ಪ್ರದೇಶಗಳಿಗೆ ಅನ್ವಯಿಸುವುದಿಲ್ಲ.

ಇಂದು ಮಧ್ಯರಾತ್ರಿಯಿಂದಲೇ ಈ ಪರಿಷ್ಕೃತ ಮಾರ್ಗಸೂಚಿ ಜಾರಿಗೆ ಬರಲಿದೆ.

ಲಾರಿ ರಿಪೇರಿ ಅಂಗಡಿ, ಹೆದ್ದಾರಿ ಡಾಬಾಗಳು, ಕೊರಿಯರ್ ಸೇವೆ, ಎಲೆಕ್ಟ್ರಿಷಿಯನ್ ಸೇವೆಗಳು, ಪ್ಲಂಬರ್ ಗಳು, ಬಡಗಿ, ಮೋಟರ್ ರಿಪೇರಿ, ಆಹಾರ ಸಂಸ್ಕರಣಾ ಘಟಕಗಳು, ಪ್ಯಾಕೇಜಿಂಗ್ ಘಟಕಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

Advertisement

ಇದರೊಂದಿಗೆ ಗ್ರಾಮೀಣ ಭಾಗದಲ್ಲಿ ರಸ್ತೆ, ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಷರತ್ತುಬದ್ಧ ಅನುಮತಿ ಇದೆ. ಅಗತ್ಯ ವಸ್ತುಗಳ ಆನ್ ಲೈನ್ ಡೆಲಿವರಿ ಮತ್ತು ಎ.ಪಿ.ಎಂ.ಸಿ. ಮಾರುಕಟ್ಟೆಗಳಲ್ಲಿ ವ್ಯವಹಾರಕ್ಕೆ ಅನುಮತಿಯನ್ನು ನೀಡಲಾಗಿದೆ.

ಮುಂಗಾರು ಪೂರ್ವದ ಕೃಷಿ ಚಟುವಟಿಕೆಗಳು ಪ್ರಾರಂಭಗೊಂಡಿರುವುದರಿಂದ ರಸಗೊಬ್ಬರ, ಬೀಜ ಹಾಗೂ ಔಷಧಿ ಮಾರಾಟಕ್ಕೆ ಅನುಮತಿಯನ್ನು ನೀಡಲಾಗಿದೆ.

ಆದರೆ ಮೇ 3ರವರೆಗೆ ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ಅನುಮತಿ ನೀಡದಿರಲು ಸರಕಾರ ತೀರ್ಮಾನಿಸಿದೆ. ಬಸ್ ಸಂಚಾರ, ರೈಲು ಸಂಚಾರ, ಮೆಟ್ರೋ ಹಾಗೂ ವಿಮಾನ ಸಂಚಾರಕ್ಕೆ ಅನುಮತಿ ನೀಡಲಾಗಿಲ್ಲ. ಆಟೋ, ಕ್ಯಾಬ್ ಗಳ ಓಡಾಟ ಹಾಗೂ ಚಿತ್ರಮಂದಿರಗಳ ತೆರೆಯುವಿಕೆಗೂ ಅನುಮತಿ ನೀಡಲಾಗಿಲ್ಲ. ಕೆ.ಎಸ್.ಆರ್.ಟಿ.ಸಿ. ಮತ್ತು ಬಿ.ಎಂ.ಟಿ.ಸಿ. ಬಸ್ಸುಗಳು ಸದ್ಯಕ್ಕೆ ರಸ್ತೆಗೆ ಇಳಿಯುವುದಿಲ್ಲ.

ಧಾರ್ಮಿಕ ಸಭೆ-ಸಮಾರಂಭಗಳು, ಜನಸಂದಣಿ ಸೇರಲು ನಿರ್ಬಂಧವಿದೆ. ಕೃಷಿ ಹಾಗೂ ಮೀನಗಾರಿಕಾ ವಲಯಕ್ಕೆ ಸಂಪೂರ್ಣ ರಿಲೀಫ್ ನೀಡಲಾಗಿದೆ. ಇನ್ನು ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಸಾಮಾಗ್ರಿಗಳ ಸಾಗಾಟಕ್ಕೂ ಅನುಮತಿ ನೀಡಲಾಗಿದೆ.

ಐಟಿ ಬಿಟಿ ವಲಯಕ್ಕೆ ಸದ್ಯಕ್ಕೆ ಯಾವುದೇ ರಿಲೀಪ್ ನೀಡದಿರಲು ರಾಜ್ಯ ಸರಕಾರ ತೀರ್ಮಾನಿಸಿದೆ. ಈ ವಲಯಗಳಲ್ಲಿ ಶೇ.33 ರಷ್ಟು ಸಿಬ್ಬಂದಿಗಳ ಕಾರ್ಯನಿರ್ವಹಣೆಗೆ ಅವಕಾಶ ಮಾಡಿಕೊಡಬೇಕೆಂಬ ಕೋರಿಕೆಯನ್ನು ಸರಕಾರ ಮನ್ನಿಸಿಲ್ಲ.

ಹೊಟೇಲುಗಳಲ್ಲಿ ಕುಳಿತು ಆಹಾರ ಸೇವನೆಗೆ ಅವಕಾಶವಿಲ್ಲ. ಆಹಾರ ಪದಾರ್ಥಗಳ ಪಾರ್ಸೆಲ್ ಸೇವೆಗೆ ಮಾತ್ರವೇ ಸದ್ಯಕ್ಕೆ ಅನುಮತಿ ನೀಡಲಾಗಿದೆ. ಶಾಲಾ-ಕಾಲೇಜುಗಳ ಕಾರ್ಯಚಟುವಟಿಕೆಗಳ ಮೆಲಿನ ನಿರ್ಬಂಧವೂ ಸಹ ಮೇ 3ರವರೆಗೆ ಮುಂದುವರಿಯಲಿದೆ. ಹಾಗಾಗಿ ಎಸ್.ಎಸ್.ಎಲ್.ಸಿ. ಪರೀಕ್ಷೆಯ ಕುರಿತಾದ ನಿರ್ಧಾರ ಇನ್ನೂ ಡೋಲಾಯಮಾನವಾಗಿದೆ.

ಕೇಬಲ್ ಹಾಗೂ ಡಿಟಿಎಚ್ ಅಪರೆಟರ್ ಗಳು ತಮ್ಮ ಕಾರ್ಯನಿಮಿತ್ತ ಸಂಚಾರ ಮಾಡಲು ಅನುಮತಿ ನೀಡಲಾಗಿದೆ. ಆದರೆ ಈಗಿರುವಂತೆಯೇ ತುರ್ತು ಸೇವೆಗಳಿಗೆ ಪಾಸ್ ಪಡೆದುಕೊಂಡು ಸಂಚರಿಸುವುದು ಕಡ್ಡಾಯವಾಗಿರಲಿದೆ. ಆರೋಗ್ಯ ಮತ್ತು ತುರ್ತು ಸೇವೆಗಳು ಈ ಹಿಂದಿನಂತೆಯೇ ಅಬಾಧಿತವಾಗಿ ಮುಂದುವರಿಯುತ್ತದೆ.

ಇವೆಲ್ಲಾ ಸೇವೆಗಳು ನಾಳೆಯಿಂದ ಲಭ್ಯ

1. ಲಾರಿ ರಿಪೇರಿ ಅಂಗಡಿ, ಡಾಬಾ, ಕೊರಿಯರ್ ಸೇವೆ, ಎಲೆಕ್ಟ್ರಿಷಿಯನ್ ಅಂಗಡಿ.

2. ಪ್ಲಂಬರ್, ಕಾರ್ಪೆಂಟರ್, ಮೋಟರ್ ರಿಪೇರಿ, ಆಹಾರ ಸಂಸ್ಕರಣಾ ಘಟಕಗಳ ಕಾರ್ಯನಿರ್ವಹಣೆಗೆ ಅವಕಾಶ

3. ಪ್ಯಾಕೇಜಿಂಗ್ ಘಟಕಗಳು, ಗ್ರಾಮೀಣ ಭಾಗದಲ್ಲಿ ರಸ್ತೆ ಮತ್ತು ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಅನುಮತಿ.

4. ಆರೋಗ್ಯ ಕ್ಷೇತ್ರದಲ್ಲಿನ ಎಲ್ಲಾ ಚಟುವಟಿಕೆಗಳೂ ಈ ಹಿಂದಿನಂತೆಯೇ ಕಾರ್ಯನಿರ್ವಹಿಸಲಿವೆ.

5. ಆಸ್ಪತ್ರೆ, ನರ್ಸಿಂಗ್ ಹೋಂಗಳು, ಕ್ಲಿನಿಕ್ ಗಳು ಹಾಗೂ ಟೆಲಿಮೆಡಿಸಿನ್ ಎಂದಿನಂತೇ ಕಾರ್ಯನಿರ್ವಹಿಸಲಿವೆ.

6. ಔಷಧಿ ಅಂಗಡಿಗಳು, ಜನೌಷಧಿ ಕೇಂದ್ರಗಳು ಮತ್ತು ಮೆಡಿಕಲ್ ಲ್ಯಾಬೊರೇಟರಿಗಳ ಕಾರ್ಯನಿರ್ವಹಣೆಗೆ ಅಡ್ಡಿ ಇರುವುದಿಲ್ಲ.

7. ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಪ್ರಾರಂಭಿಸಲು ಮಾರ್ಗಸೂಚಿ ಜಾರಿ.

8. ಮೀನುಗಾರಿಕೆ ಮತ್ತು ಪ್ಲಾಂಟೇಶನ್ ಗಳಿಗೆ ಸಂಬಂಧಿಸಿದ ಕೆಲಸಕಾರ್ಯಗಳನ್ನು ಪ್ರಾರಂಭಿಸಲು ಅನುಮತಿ.

9. ಮನ್ ನರೇಗಾ ಅಡಿಯಲ್ಲಿ ನೀರಾವರಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಪ್ರಾರಂಭಿಸಲು ಆದ್ಯತೆ ಮೇರೆಗೆ ಅನುಮತಿ.

10. ಗೂಡ್ಸ್ ಮತ್ತು ಕಾರ್ಗೋ ಸಂಚಾರಕ್ಕೆ ಅನುಮತಿ ಲಭಿಸಿದೆ.

11. ಸಿಮೆಂಟ್, ಸ್ಟೀಲ್, ಜಲ್ಲಿ, ಟೈಲ್ಸ್, ಪೇಂಟ್, ಇಟ್ಟಿಗೆ ಹಾಗೂ ಟಾರ್ ಸಾಗಾಟಕ್ಕೆ ಅನುಮತಿ

Advertisement

Udayavani is now on Telegram. Click here to join our channel and stay updated with the latest news.

Next