ನವದೆಹಲಿ: ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಜಾರಿಗೊಳಿಸಿರುವ ಲಾಕ್ ಡೌನ್ ಏಪ್ರಿಲ್ 14ರಂದು ಅಂತ್ಯಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಬೆಳಗ್ಗೆ 10ಗಂಟೆಗೆ ಮತ್ತೆ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ವರದಿ ತಿಳಿಸಿದೆ.
ಲಾಕ್ ಡೌನ್ ಅನ್ನು ಏ.14ರ ನಂತರ ಮತ್ತೆ ಮುಂದುವರಿಸುವಂತೆ ಬಹುತೇಕ ರಾಜ್ಯಗಳು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನಾಳೆ ಲಾಕ್ ಡೌನ್ ಕುರಿತು ಇನ್ನಷ್ಟು ವಿಚಾರಗಳನ್ನು ಹಂಚಿಕೊಳ್ಳಲಿದ್ದು, ಆರ್ಥಿಕ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ತಿಳಿಸುವ ಸಾಧ್ಯತೆ ಇದೆ.
ಶನಿವಾರ ದೇಶದ 13 ರಾಜ್ಯಗಳ ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಮಾತುಕತೆಯಲ್ಲಿ ಪಾಲ್ಗೊಂಡಿದ್ದು, ಈ ಸಂದರ್ಭದಲ್ಲಿ ಕೋವಿಡ್ 19 ಸೋಂಕು ತಡೆಗೆ ಲಾಕ್ ಡೌನ್ ಮುಂದುವರಿಸುವುದು ಅಗತ್ಯವಿದೆ ಎಂಬ ಸಲಹೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಒಪ್ಪಿಕೊಂಡಿದ್ದರು. ಈಗಾಗಲೇ ಭಾರತದಲ್ಲಿ 9ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. ಅದೇ ರೀತಿ ಜೀವಂತವಾಗಿರುವವರ ಬದುಕನ್ನು ಕೂಡಾ ಉಳಿಸಬೇಕಾಗಿದೆ ಎಂದು ವರದಿ ತಿಳಿಸಿದೆ.
ಭಾರತದ ಆರ್ಥಿಕ ಸ್ಥಿತಿ ಬಗ್ಗೆಯೂ ಗಮನಹರಿಸಬೇಕಾಗಿದೆ. ಈಗಾಗಲೇ ಕಳೆದ ಆರು ವರ್ಷಗಳಲ್ಲಿಯೇ ಕಂಡು ಕೇಳರಿಯದ ರೀತಿಯಲ್ಲಿ ದೇಶದ ಆರ್ಥಿಕ ಅಭಿವೃದ್ದಿ ಕೆಳಕ್ಕೆ ಕುಸಿದಿದೆ. ಇದೀಗ ಲಾಕ್ ಡೌನ್ ನಿಂದಾಗಿ ದೇಶಕ್ಕೆ ಲಕ್ಷಾಂತರ ಕೋಟಿ ರೂಪಾಯಿ ನಷ್ಟ ಸಂಭವಿಸಿದೆ. ನಿರುದ್ಯೋಗ ಸಮಸ್ಯೆ ಕೂಡಾ ದಾಖಲೆ ಮಟ್ಟ ತಲುಪಲಿದೆ. ಲಾಕ್ ಡೌನ್ ನಿರ್ಬಂಧದಿಂದ ಬಡ, ಮಧ್ಯಮ ವರ್ಗದ ಆರ್ಥಿಕ ಸ್ಥಿತಿ ಮೇಲೆ ಹೊಡೆತ ನೀಡಿದೆ ಎಂದು ವರದಿ ವಿವರಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಎರಡನೇ ಬಾರಿ ಲಾಕ್ ಡೌನ್ ಮುಂದುವರಿಕೆ ವೇಳೆ ಯಾವ ಕ್ರಮ ಅನುಸರಿಸಲಿದ್ದಾರೆ ಎಂಬುದು ಪ್ರಾಮುಖ್ಯತೆ ಪಡೆದಿದೆ ಎಂದು ವರದಿ ತಿಳಿಸಿದೆ.