Advertisement

ಅಕ್ರಮ ದಾಸ್ತಾನಿನ ಸವಾಲು ಕಠಿನ ಕ್ರಮ ಅಗತ್ಯ

12:01 AM Apr 13, 2020 | Hari Prasad |

ಲಾಕ್‌ಡೌನ್‌ನ ಈ ಸಮಯದಲ್ಲಿ ದೇಶದ ಬಹುತೇಕ ಕೆಲಸ ಕಾರ್ಯಗಳು ನಿಂತಿವೆ. ಜನರು ಮನೆಯಲ್ಲೇ ಇದ್ದಾರೆ. ಈ ಸಮಯದಲ್ಲಿ ಯಾರಿಗೂ ಅಗತ್ಯ ವಸ್ತುಗಳ ಅದರಲ್ಲೂ ಆಹಾರ ಸಾಮಗ್ರಿಗಳ ಪೂರೈಕೆಯ ಕೊರತೆ ಕಾಡದಂತೆ ನೋಡಿಕೊಳ್ಳುವ ಬೃಹತ್‌ ಸವಾಲು ಕೇಂದ್ರ ಮತ್ತು ರಾಜ್ಯ ಸರಕಾರಗಳ ಮೇಲಿದೆ. ಈ ಕಾರಣಕ್ಕಾಗಿ ನಿತ್ಯವೂ ಗೂಡ್ಸ್‌  ರೈಲುಗಳು ದೇಶಾದ್ಯಂತ ಅಗತ್ಯ ಆಹಾರ ಪದಾರ್ಥಗಳ ಪೂರೈಕೆ ಮಾಡಲು ಓಡಾಡುತ್ತಿವೆ. ಆದಾಗ್ಯೂ ಸಾರ್ವಜನಿಕ ವಿತರಣೆ ವ್ಯವಸ್ಥೆ, ಕಿರಾಣಿ ಅಂಗಡಿಗಳು ಹಾಗೂ ರೇಶನ್‌ ಅಂಗಡಿಗಳು ತೆರೆದಿರಲು ಹಾಗೂ ಆನ್‌ಲೈನ್‌ ಖರೀದಿಗೂ ಹಲವೆಡೆ ಅವಕಾಶ ನೀಡಲಾಗಿದೆ.

Advertisement

ಇದೇ ವೇಳೆಯಲ್ಲೇ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೂಡ ಯಾವುದೇ ಕಾರಣಕ್ಕೂ ಅಗತ್ಯ ವಸ್ತುಗಳನ್ನು ಮೂಲಬೆಲೆಗಿಂತ ಅಧಿಕ ಮೊತ್ತಕ್ಕೆ ಮಾರಾಟ ಮಾಡುವಂತಿಲ್ಲ ಎಂದು ಎಚ್ಚರಿಸಿವೆ. ಆದರೂ ವಾಸ್ತವವೇನೆಂದರೆ, ತರಕಾರಿ, ಹಣ್ಣು ಮತ್ತು ಅಗತ್ಯ ಆಹಾರ ಪದಾರ್ಥಗಳ ಮೇಲಿನ ಬೆಲೆಯನ್ನು ಬಾಯಿಗೆ ಬಂದ ದರದಲ್ಲಿ ಮಾರಲಾಗುತ್ತಿದೆ.

ಈ ರೀತಿ ಅಧಿಕ ಬೆಲೆಗೆ ಆಹಾರ ಪದಾರ್ಥಗಳ, ಅಗತ್ಯ ವಸ್ತುಗಳ ಮಾರಾಟ ಮಾಡಿದ ಅನೇಕರ ವಿರುದ್ಧ ಈಗ ಕ್ರಮ ಕೈಗೊಳ್ಳಲಾಗುತ್ತಿದೆಯಾದರೂ ಪರಿಸ್ಥಿತಿ ಮಾತ್ರ ಬದಲಾಗುತ್ತಿಲ್ಲ. ಇದನ್ನು ಪ್ರಶ್ನಿಸಿದವರಿಗೆ, “ವಸ್ತುಗಳ ಪೂರೈಕೆಯೇ ಆಗುತ್ತಿಲ್ಲ, ಅದಕ್ಕೆ ಹೆಚ್ಚು ಬೆಲೆ’ ಎಂದು ಹೇಳಲಾಗುತ್ತಿದೆ. ಅಭಾವ ನಿಜಕ್ಕೂ ಇದೆಯೋ ಅಥವಾ ಅಕ್ರಮ ದಾಸ್ತಾನುಕೋರರಿಂದಾಗಿ ಈ ಅಭಾವ ಎದುರಾಗುತ್ತಿದೆಯೋ ತಿಳಿಯದಾಗಿದೆ.

ಅದರಲ್ಲೂ ರೇಶನ್‌ ಅಂಗಡಿಗಳ ಮುಂದಂತೂ ದಿನಗಟ್ಟಲೇ ಜನರ ಕ್ಯೂ ಇರುತ್ತದೆ. ದೇಶಾದ್ಯಂತ ಹಲವೆಡೆ, ತಮಗೆ ಅಗತ್ಯ ಪ್ರಮಾಣದಲ್ಲಿ ಆಹಾರ ಪದಾರ್ಥ ಸಿಗುತ್ತಿಲ್ಲ ಎಂದು  ಜನರು ದೂರುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಗೃಹಸಚಿವಾಲಯವು, ಅಕ್ರಮ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ಅಗತ್ಯ ಸರಕುಗಳ ಕಾಯ್ದೆ 1955ರ ಅಡಿಯಲ್ಲಿ ಈ ಕೃತ್ಯ ಎಸಗುವವರಿಗೆ ಏಳು ವರ್ಷ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸ ಬಹುದಾಗಿದೆ.

ಆಹಾರ ಪದಾರ್ಥಗಳ ಅಕ್ರಮ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸುವುದರಿಂದಾಗಿ ಮಾರುಕಟ್ಟೆಯಲ್ಲಿ ಅವುಗಳ ಬೆಲೆ ಗಗನಕ್ಕೇರುತ್ತದೆ. ಇದೇನೂ ದೇಶಕ್ಕೆ ಹೊಸ ಅನುಭವವಲ್ಲ. ದೇಶ ಸಂಕಷ್ಟ ಎದುರಿಸಿದಾಗಲೆಲ್ಲ ಇಂಥ ಕರಾಳ ಪ್ರವೃತ್ತಿಗಳ ಹಾವಳಿ ಅಧಿಕವಾಗಿಬಿಡುತ್ತದೆ.

Advertisement

ರೋಗಗಳು ಹಬ್ಬಿದಾಗ, ಬರ ಬಂದಾಗ, ನೆರೆ ಬಂದಾಗ ಅಥವಾ ವಿದೇಶದಿಂದ ಯಾವುದಾದರೂ ಖಾದ್ಯ ಸಾಮಗ್ರಿಯ ಆಮದು ನಿಂತು ಹೋಗುತ್ತಿದ್ದಂತೆಯೇ ಅಕ್ರಮ ದಾಸ್ತಾನುಕೋರರು ಎಚ್ಚೆತ್ತು ಬಿಡುತ್ತಾರೆ. ಖಾದ್ಯ ತೈಲ, ಈರುಳ್ಳಿ- ಟೊಮೆಟೋ ಮತ್ತು ಬೇಳೆಕಾಳುಗಳ ವಿಷಯದಲ್ಲಿ ಈ ರೀತಿಯ ಅಕ್ರಮ ದಾಸ್ತಾನು ಹೇಗೆಲ್ಲ ಜನರನ್ನು ಹೈರಾಣಾಗಿಸಿವೆ ಎನ್ನುವುದನ್ನು ಅನೇಕ ಬಾರಿ ನೋಡಿದ್ದೇವೆ.

ಆದಾಗ್ಯೂ ಪೂರೈಕೆ ವ್ಯವಸ್ಥೆ ಕೂಡ ಸಂಪೂರ್ಣ ಚಾಲನೆಗೆ ಬರುವ ಅಗತ್ಯವೂ ಇದೆ. ರೈತರ ಬೆಳೆಗಳು, ಸಾರ್ವಜನಿಕರವರೆಗೆ ಮುಟ್ಟುವವರೆಗೆ ಯಾವುದೇ ಅಡಚಣೆಗಳು ಎದುರಾಗದಂತೆ ಖಾತ್ರಿಪಡಿಸಬೇಕಿದೆ. ಅನೇಕ ರಾಜ್ಯಗಳ ಗಡಿಗಳು ಬಂದ್‌ ಆಗಿರುವುದರಿಂದ, ಆಗತ್ಯವಸ್ತುಗಳ ಪೂರೈಕೆ ಸೇವೆಯ ವೇಗ ಹಿಂದಿನಂತೆ ಇಲ್ಲ. ಇದಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವ ಅಗತ್ಯವಿದೆ. ಅಲ್ಲದೇ, ಅಕ್ರಮ ದಾಸ್ತಾನುಕೋರರನ್ನು ಹುಡುಕಿ ಕಠಿನ ಶಿಕ್ಷೆಯನ್ನು ತ್ವರಿತವಾಗಿ ಜಾರಿಗೆ ತರುವುದರಿಂದಲೂ ಸಮಸ್ಯೆಗೆ ಪರಿಹಾರ ಸಿಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next