Advertisement

ಲಾಕ್‌ಡೌನ್‌: ಹೊಟೇಲ್‌ಗ‌ಳಲ್ಲಿ ಪಾರ್ಸೆಲ್‌ಗೆ ಬೇಡಿಕೆ ಇಳಿಕೆ

11:53 AM Jul 18, 2020 | mahesh |

ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜು.23ರ ವರೆಗೆ ಲಾಕ್‌ಡೌನ್‌ ಘೋಷಿಸಿದ್ದು, ಹೊಟೇಲ್‌ಗ‌ಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ ಸದ್ಯ ಪಾರ್ಸೆಲ್‌ಗೆ ಬೇಡಿಕೆ ಕಡಿಮೆಯಾಗಿದ್ದು, ಬಹಳಷ್ಟು ಹೊಟೇಲ್‌ಗ‌ಳು ಮುಚ್ಚುವ ಭೀತಿಯಲ್ಲಿವೆ.

Advertisement

ಜಿಲ್ಲೆಯ ಕೆಲವು ಹೊಟೇಲ್‌ಗ‌ಳು ನಾಲ್ಕು ತಿಂಗಳುಗಳಿಂದ ತೆರೆದಿಲ್ಲ. ಕೆಲವು ಹೊಟೇಲುಗಳಲ್ಲಿ ಕೇವಲ ಉಪಾಹಾರ ಮಾತ್ರ ಇದ್ದು, ಊಟದ ವ್ಯವಸ್ಥೆ ಮಾಡಿಲ್ಲ. ಪಾರ್ಸೆಲ್‌ ಅವಕಾಶ ನೀಡಿದ ಕಾರಣ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುತ್ತಿದ್ದಾರೆ ಮಾಲಕರು. ಸಾರ್ವಜನಿಕರು ಸಾಮಾನ್ಯವಾಗಿ ಯಾವ ರೀತಿಯ ತಿಂಡಿಯನ್ನು ಬಯಸುತ್ತಾರೆ ಎಂಬುದನ್ನು ತಿಳಿಯುವಲ್ಲಿ ಮಾಲಕರು ಸೋಲುತ್ತಿದ್ದು, ಪ್ರತಿದಿನ ಹೆಚ್ಚಿನ ಉಪಾಹಾರ ಹಾಳಾಗುತ್ತಿದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ರಾತ್ರಿ ಸುಮಾರು 8 ಗಂಟೆಯವರೆಗೆ ಮಾತ್ರ ಹೊಟೇಲುಗಳನ್ನು ತೆರೆದಿಡಲು ಅವಕಾಶ ನೀಡಲಾಗಿದೆ. ಸಾಮಾನ್ಯವಾಗಿ ರಾತ್ರಿ 9 ಗಂಟೆಯ ವೇಳೆಗೆ ಊಟಕ್ಕೆ ಬೇಡಿಕೆ ಬರುವ ಕಾರಣ 8 ಗಂಟೆಗೆ ಮುಚ್ಚುವುದರಿಂದ ಕಷ್ಟವಾಗುತ್ತಿದೆ ಎನ್ನುತ್ತಿದ್ದಾರೆ ಮಾಲಕರು. ಜಿಲ್ಲೆಯಲ್ಲಿ ಸುಮಾರು 1,000ಕ್ಕೂ ಮಿಕ್ಕಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಹೊಟೇಲುಗಳಿವೆ. ಸಾವಿರಾರು ಮಂದಿ ಇದನ್ನೇ ಅವಲಂಬಿಸಿಕೊಂಡಿದ್ದಾರೆ. ಕೊರೊನಾ ಸಂದರ್ಭದಲ್ಲೂ ಕೆಲವು ಮಾಲಕರು ಕಾರ್ಮಿಕರಿಗೆ ತಿಂಗಳು ಪೂರ್ತಿ ಸಂಬಳ ನೀಡಿದ್ದಾರೆ.

ಮಂಗಳೂರಿನ ಕೆಲವು ಹೊಟೇಲ್‌ ಮಾಲಕರು ಉತ್ತರ ಭಾರತದ ಕಾರ್ಮಿಕರನ್ನು ಅವಲಂಬಿಸಿಕೊಂಡಿದ್ದಾರೆ. ಕ್ಲೀನಿಂಗ್‌, ಚೈನೀಸ್‌ ಫುಡ್‌, ಚಾಟ್ಸ್‌ ತಿಂಡಿ ತಯಾರಿಯಲ್ಲಿ ಹೆಚ್ಚಾಗಿ ಅವರೇ ಕೆಲಸ ಮಾಡುತ್ತಿದ್ದಾರೆ. ಆದರೆ ಸದ್ಯ ಶೇ. 70ರಷ್ಟು ಕಾರ್ಮಿಕರು ಊರುಗಳಿಗೆ ತೆರಳಿದ್ದಾರೆ. ಅವರು ಸದ್ಯಕ್ಕೆ ಮಂಗಳೂರಿಗೆ ಬರುವುದೂ ಅನುಮಾನವಾದ್ದರಿಂದ ಹೊಟೇಲುಗಳನ್ನು ತೆರೆದರೂ, ಕಾರ್ಮಿಕರ ಕೊರತೆ ಉಂಟಾಗಬಹುದು ಎನ್ನುತ್ತಾರೆ ಮಾಲಕರು.

ಹೊಟೇಲ್‌ ಉದ್ಯಮ ನಷ್ಟದಲ್ಲಿ
ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹೊಟೇಲ್‌ ಉದ್ಯಮ ನಷ್ಟ ಅನುಭವಿಸುತ್ತಿದೆ. ಸದ್ಯ ಕೆಲವು ಹೋಟೆಲುಗಳಷ್ಟೇ ತೆರೆದಿವೆ. ಸಾರ್ವಜನಿಕರಿಗೆ ಬೆಳಗ್ಗೆ 11 ಗಂಟೆವರೆಗೆ ಮಾತ್ರ ಪಾರ್ಸೆಲ್‌ಗೆ ಅವಕಾಶ ನೀಡಲಾಗಿದೆ. ಆಹಾರ ಸರಬರಾಜು ಸಂಸ್ಥೆಗಳಿಗೆ ಅವಕಾಶ ಇದ್ದರೂ, ಜನರು ಪಾರ್ಸೆಲ್‌ಗೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.
ಕುಡ್ಪಿ ಜಗದೀಶ ಶೆಣೈ, ಅಧ್ಯಕ್ಷರು, ಹೊಟೇಲ್‌ ಮಾಲಕರ ಸಂಘ

Advertisement
Advertisement

Udayavani is now on Telegram. Click here to join our channel and stay updated with the latest news.

Next