ತುಮಕೂರು: ಮುಂದಿನ ಒಂದು ವಾರದಲ್ಲಿ ನಿರೀಕ್ಷೆಯಂತೆ ಜಿಲ್ಲೆಯ ಎಲ್ಲ ತಾಲೂಕಿನಲ್ಲಿಯೂ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದರೆ ಲಾಕ್ ಡೌನ್ ತೆರವುಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. ತಜ್ಞರು ಮೇಲಿಂದ ಮೇಲೆ ಹೇಳುತ್ತಿರುವಂತೆ ಮೂರನೇ ಅಲೆ ಬಂದರೆ ಅದನ್ನು ಎದುರಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಇನ್ನೂ ಕೆಲವು ಪ್ರದೇಶಗಳಲ್ಲಿ ಜಿಲ್ಲಾಡಳಿತದ ನಿರೀಕ್ಷೆಯಂತೆ ಕೊರೊನಾ ನಿಯಂತ್ರಣಕ್ಕೆ ಬಂದಿಲ್ಲ. ಈಗಲೂ ಇರುವ ಕೆಂಪು ವಲಯ ಮತ್ತು ಹಾಟ್‌ಸ್ಪಾಟ್ ಪ್ರದೇಶಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಂದ ಬಳಿಕ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ತೆರವಿಗೆ ಕ್ರಮವಹಿಸಲಾಗುವುದು ಎಂದರು.
ಸೋಂಕಿತರ ಸಂಖ್ಯೆಯ ಹೆಚ್ಚಳದಿಂದ ಶಿರಾ ತಾಲೂಕು ಸೇರಿದಂತೆ ಉಳಿದ ತಾಲೂಕುಗಳ ಭಾಗಗಳು ಕೆಂಪುವಲಯ ಹಾಗೂ ಹಾಟ್‌ಸ್ಪಾಟ್ ಪ್ರದೇಶಗಳನ್ನಾಗಿ ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ಸೋಂಕನ್ನು ನಿಯಂತ್ರಣಕ್ಕೆ ತಂದು ಆ ಪ್ರದೇಶಗಳನ್ನು ಕೆಂಪುವಲಯ ಹಾಗೂ ಹಾಟ್‌ಸ್ಪಾಟ್‌ಗಳಿಂದ ಮುಕ್ತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಸೋಂಕಿತರ ಸಂಪರ್ಕಿತರ ಬಗ್ಗೆ ನಿಗಾವಹಿಸಬೇಕು ಎಂದರು.
ಲಸಿಕೆ ನೀಡಲು ಕ್ರಮ: ಆರ್‌ಸಿಎಚ್ ಅಧಿಕಾರಿ ಡಾ. ಕೇಶವರಾಜ್ ಮಾತನಾಡಿ, ಜಿಲ್ಲೆಗೆ ಪೂರೈಕೆಯಾಗುತ್ತಿರುವ ಲಸಿಕೆಯನ್ನು ತಾಲೂಕುವಾರು ಜನಸಂಖ್ಯೆಗನುಗುಣವಾಗಿ ಲಸಿಕಾಕರಣ ಕಾರ್ಯ ಮಾಡಲಾಗುತ್ತಿದೆ. ಯಾವುದೇ ಸಮಸ್ಯೆಯಾಗದಂತೆ ಲಸಿಕಾ ಕಾರ್ಯ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚು ಲಸಿಕೆ ಪೂರೈಕೆಯಾಗುವ ಸಾಧ್ಯತೆಯಿದೆ. ಹೆಚ್ಚು ಲಸಿಕೆ ಬಂದ ತಕ್ಷಣ ಸರ್ಕಾರದ ಮಾರ್ಗಸೂಚಿಯಂತೆ ಎಲ್ಲ ವರ್ಗದವರಿಗೂ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ಒದಗಿಸಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸುರೇಶ್ ಬಾಬು ಮಾತನಾಡಿ, ಜಿಲ್ಲೆಯಲ್ಲಿ ಪತ್ತೆಯಾಗಿರುವ ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಸೂಕ್ತವಾಗಿ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅವಶ್ಯಕವಿದ್ದಲ್ಲಿ ಮಾತ್ರ ಬೆಂಗಳೂರಿಗೆ ಕಳುಹಿಸಲಾಗುತ್ತಿದೆ.ಜಿಲ್ಲೆಗೆ ಹೆಚ್ಚಿನ ಔಷಧಗಳ ಲಭ್ಯತೆಯ ಅವಶ್ಯಕವಿದೆ ಎಂದರು.
3ನೇ ಅಲೆ ಎದುರಿಸಲು ಸಿದ್ಧತೆಗೆ ಕ್ರಮ: ತಜ್ಞರ ವರದಿ ಪ್ರಕಾರ ಕೋವಿಡ್ 3ನೇ ಅಲೆ ಬರುವ ಸಾಧ್ಯತೆಯಿದ್ದು, ಮೂರನೇ ಅಲೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ಜಿಲ್ಲಾಡಳಿತಕ್ಕೆ ಸೂಚಿಸಿದರು. ಮೂರನೇ ಅಲೆ ಮಕ್ಕಳಿಗೆ ಹೆಚ್ಚಾಗಿ ತಗುಲುವ ನಿರೀಕ್ಷೆಯಿದೆ. ಹಾಗಾಗಿ ಎಲ್ಲ ಅಧಿಕಾರಿಗಳೂ ಸಮನ್ವಯ ಸಾಧಿಸಿ ಚಿಕಿತ್ಸೆಗೆ ಕೊರತೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಈಗಿನಿಂದಲೇ ಹೆಚ್ಚು ನಿಗಾವಹಿಸಿ ಅಪೌಷ್ಟಿಕ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಕ್ರಮ ವಹಿಸಬೇಕು. ಅಂಗನವಾಡಿ ಮಟ್ಟದಲ್ಲಿಯೇ ಅಪೌಷ್ಟಿಕ ಮಕ್ಕಳಿಗೆ ಸೂಕ್ಷ್ಮ ಪೋಷಕಾಂಶವುಳ್ಳ ಆಹಾರ ವಿತರಣೆಗೆ ಹೆಚ್ಚು ಆಸಕ್ತಿ ವಹಿಸಬೇಕು ಎಂದು ನಿರ್ದೇಶಿಸಿದರು.
ಜಿಲ್ಲೆ ನಲುಗದಂತೆ ಕ್ರಮವಹಿಸಿ: ಜಿಲ್ಲೆಯಲ್ಲಿನ ಹಾಲು ಉತ್ಪಾದಕ ಸೊಸೈಟಿಗಳಿಂದ ಅತ್ಯುತ್ತಮ ಗುಣಮಟ್ಟದ ಪೌಷ್ಟಿಕ ಹಾಲು ಮತ್ತು ಉತ್ಪನ್ನಗಳನ್ನು ಒದಗಿಸುವ ಸಂಬಂಧ ಸಭೆ ಕರೆದು ಚರ್ಚಿಸಬೇಕು. ಒಟ್ಟಾರೆ ಮೂರನೇ ಕೋವಿಡ್ ಅಲೆಯಿಂದ ಜಿಲ್ಲೆ ನಲುಗದಂತೆ ಕ್ರಮವಹಿಸುವ ಜವಾಬ್ದಾರಿಯನ್ನು ಜಿಲ್ಲಾಡಳಿತ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು. ಶಿಶು ತಜ್ಞ ವೈದ್ಯರೊಂದಿಗೆ ಸಭೆ ನಡೆಸಿ ಮೂರನೇ ಅಲೆ ನಿಯಂತ್ರಣಕ್ಕೆ ಬೇಕಾದ ವ್ಯವಸ್ಥೆ ರೂಪಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್, ಜಿಪಂ ಸಿಇಒ ಡಾ.ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರವಾಡ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ಹಾಗೂ ವಿವಿಧ ಅಧಿಕಾರಿಗಳಿದ್ದರು.